ಕನ್ನಡಪ್ರಭ ವಾರ್ತೆ ಬೆಳಗಾವಿ
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕುವೆಂಪು ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದ ಸರಣಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಯಾವುದೇ ಒಂದು ಭಾಷೆ ಬಳಕೆಯಲ್ಲಿದ್ದಾಗ ಮಾತ್ರ ಬೆಳೆಯುತ್ತದೆ. ಬಳಕೆ ತಪ್ಪಿದರೆ ಅಳಸಿ ಹೋಗುತ್ತದೆ. ಪ್ರತಿಯೊಂದು ಭಾಷೆಯೂ ಬೆಳೆಯುವುದು ಕೊಡುಕೊಳ್ಳುವಿಕೆಯಿಂದ. ಯಾವ ಭಾಷೆಯ ಪದಗಳನ್ನು ಕೃತಕವಾಗಿ ತಂದು ಭಾಷೆಯಲ್ಲಿ ಬಳಸಬಾರದು. ಅದು ಸಹಜವಾಗಿ ಭಾಷೆಯಲ್ಲಿ ಬೆರೆಯುವಂತಿದ್ದರೆ, ಅದರ ಜಾಯಮಾನಕ್ಕೆ ಒಗ್ಗುವಂತಿದ್ದರೆ ಬಳಸಬೇಕು. ಹೊರಗಿನಿಂದ ಬಂದ ಪದಗಳು ಸೇರಿದ ಭಾಷೆಯ ಸೌಂದರ್ಯ, ಕಾಂತಿ ಹೆಚ್ಚಿಸುವಂತಿರಬೇಕು. ಪ್ರಾಚೀನ ಕಾಲದಿಂದಲೂ ಕನ್ನಡ ಆ ಮಾರ್ಗದಲ್ಲಿಯೇ ಸಾಗಿ ಬಂದಿದೆ. ಇಂದು ಕೂಡ ಅದು ಮುಂದುವರಿದಿದೆ. ಈ ರೀತಿ ಒಳಗೊಳ್ಳುವ ಪ್ರಕ್ರಿಯೆಯಿಂದ ಭಾಷೆ ಸಶಕ್ತವಾಗಿ ಬೆಳೆಯುತ್ತದೆ. ಕನ್ನಡಕ್ಕೆ ಒಳಗೊಳ್ಳುವ ಗುಣ ಪ್ರಾಚೀನ ಕಾಲದಿಂದ ಇಂದಿನವರೆಗೂ ಇದೆ ಎಂದು ಹೇಳಿದರು.ಕನ್ನಡದ ಕವಿಗಳು ಈ ನೆಲದ ಸಹಬಾಳ್ವೆ, ಸಮಾನತೆ, ಸೌಹಾರ್ದತೆ, ಭಾಷಿಕ , ಧಾರ್ಮಿಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ವಿವೇಕತೆಯನ್ನು ಅತ್ಯಂತ ಸಮರ್ಥವಾಗಿ ತಿಳಿಸಿದ್ದಾರೆ. ಕೈಗಾರಿಕೀಕರಣದಿಂದ ಸಾಮೂಹಿಕ ಉತ್ಪಾದನೆಯಾದರೆ, ಜಾಗತೀಕರಣದಿಂದ ಬಂದ ಮಾಹಿತಿ ತಂತ್ರಜ್ಞಾನ ಸಾಮೂಹಿಕ ಉತ್ಪಾದನೆಯಲ್ಲ. ಅದು ಶಿಕ್ಷಣದ ಮೇಲೆ, ನಮ್ಮ ಮನೋಧರ್ಮದ ಮೇಲೆಯೂ ಪರಿಣಾಮ ಬೀರಿತು. ಕೇವಲ ಗಣಕಯಂತ್ರದ ಜೊತೆಗೆ ವ್ಯವಹಾರವಾಯಿತು. ಸಾಮೂಹಿಕ ಪ್ರಜ್ಞೆಯಿಂದ ವ್ಯಕ್ತಿ ಪ್ರಜ್ಞೆ ಕಡೆಗೆ ವಾಲಿತು. ಇದಕ್ಕೆ ನಮ್ಮ ಆರ್ಥಿಕ ನೀತಿಯೂ ಕಾರಣ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ.ಸಿ.ಎಂ. ತ್ಯಾಗರಾಜ, ವಿಶ್ವವಿದ್ಯಾಲಯದಲ್ಲಿ ಕನ್ನಡ ವಾತಾವರಣ ಸದಾ ಅನುರಣಿಸಬೇಕೆಂಬ ಕಾರಣದಿಂದ ನವೆಂಬರ್ ತಿಂಗಳ ಪೂರ್ತಿ ಕನ್ನಡ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಜಗತ್ತಿನಲ್ಲಿ ಸಾವಿರಾರು ಭಾಷೆಗಳು ಅಳಿವಿನಂಚಿನಲ್ಲಿವೆ. ನಮ್ಮ ಭಾಷೆ ಉಳಿಸಿ, ಬೆಳೆಸಬೇಕಾದವರು ನಾವು. ಹಾಗಾಗಿ ನಮ್ಮ ಭಾಷೆ, ಸಂಸ್ಕೃತಿ ಬಗ್ಗೆ ನಮಗೆ ಸದಾ ಹೆಮ್ಮೆ ಇರಬೇಕು. ನಮ್ಮ ನೆಲ, ಜಲ, ಪರಿಸರದ ಪ್ರತಿಯೊಂದು ಸಜೀವ-ನಿರ್ಜೀವ ವಸ್ತುಗಳಲ್ಲಿ ಭಾಷೆ ಅಡಗಿದೆ ಎಂದು ತಿಳಿಸಿದರು.