ಮರಲಾನಹಳ್ಳಿ ಕಾರಟಗಿ: ಗ್ರಾಮೀಣ ಭಾಗದಲ್ಲಿ ಈಗ ಹೆಚ್ಚು ಕನ್ನಡ ಸಾಹಿತ್ಯ ಸಂಸ್ಕೃತಿ ಬೆಳೆಯುತ್ತಿದ್ದು, ನಗರ ಪ್ರದೇಶದಲ್ಲಿ ಇದು ಗೌಣವಾಗುತ್ತಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಎ.ಎಂ. ಮದರಿ ಹೇಳಿದರು.
ನಗರದ ಸಾಹಿತ್ಯ ಸಮ್ಮೇಳನ ಶಿಸ್ತಿನಿಂದ ನಡೆಯುತ್ತಿವೆ. ಆದರೆ, ಗ್ರಾಮೀಣರಲ್ಲಿ ಶಿಸ್ತು ಇರದಿದ್ದರೂ ಸಂತೋಷ ಇರುತ್ತದೆ. ಆದರೆ, ಇಂದಿಗೂ ಅಸಮಾನತೆ, ಇಂದಿಗೂ ಅಸಮಾನತೆ, ಅಸ್ಪೃಶ್ಯತೆ ಆಚರಣೆಯಲ್ಲಿರುವುದು ವಿಷಾದನೀಯ. ಇದು ಸಾಲದೆಂಬಂತೆ ಮಹನೀಯರನ್ನು ಜಾತಿಗೆ ಸೀಮಿತಗೊಳಿಸಿ, ಸಂಕುಚಿತ ಮನೋಭಾವ ಸೃಷ್ಟಿಯಾಗುತ್ತಿದೆ. ಇದೆಲ್ಲದರಿಂದ ಹೊರ ಬಂದಾಗ ಮಾತ್ರ ನಾವು ಪರಿಪೂರ್ಣತೆ ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಡಿ.ಬಿ. ಕರಡೋಣಿ ಮಾತನಾಡಿ, ಬದುಕು ರೂಪಿಸಲು ಸಾಹಿತ್ಯ ಸಂಸ್ಕಾರ ನೀಡಿದೆ. ಎದೆಗೆ ಬಿದ್ದ ಅಕ್ಷರದಿಂದ ಏನನ್ನಾದರೂ ಸಾಧಿಸಲು ಸಾಧ್ಯವಾಗಿತು. ಕನ್ನಡ ಸಾಹಿತ್ಯದ ಓದು ಮನುಷ್ಯನ ಬದುಕನ್ನೇ ಬದಲಾಯಿಸುವ ಶಕ್ತಿ ಇದೆ ಎಂದು ಅದಕ್ಕೆ ನಾನೇ ಉದಾಹರಣೆ. ಯಶವಂತ ಚಿತ್ತಾಲರ ಪುಸ್ತಕವೊಂದು ನನ್ನ ಬದುಕನ್ನು ಬದಲಾಯಿಸಿತು. ಎದೆಗೆ ಬಿದ್ದ ಅಕ್ಷರವೇ ನನ್ನನು ಇಷ್ಟು ಮಟ್ಟಕ್ಕೆ ಬೆಳೆಸಲು ಕಾರಣವಾಯಿತು ಎಂದರು.ಸಮ್ಮೇಳನದಲ್ಲಿ ಲೇಖಕ ರಮೇಶ ಬನ್ನಿಕೊಪ್ಪ ಹಲಗೇರಿ ಅವರ ಹೈ-ಕ ವಿಮೋಚನಾ ಹೋರಾಟದಲ್ಲಿ ಮಹಿಳೆ ಕೃತಿ ಹಾಗೂ ಡಾ.ಡಿ.ಬಿ.ಕರಡೋಣಿ ಅಭಿನಂದನಾ ಗ್ರಂಥ ಬಿಡುಗಡೆ ಮಾಡಲಾಯಿತು. ನಂತರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಪತ್ರಕರ್ತ ಎ.ಜಿ.ಕಾರಟಗಿ, ಹಗಲುವೇಷ ಕಲಾವಿದ ವಿಭೂತಿ ಗುಂಡಪ್ಪ, ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಗಲುವೇಷ ಕಲಾವಿದ ರಾಮಣ್ಣ ಕಲಕೇರಿ ಅವರನ್ನು ಸನ್ಮಾನಿಸಲಾಯಿತು.
ಶರಣೇಗೌಡ ಪೋ.ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹೆಬೂಬ್ ಕಿಲ್ಲೇದಾರ ಮತ್ತು ಅಮರೇಶ ಗೌಡ ನಾಡಗೀತೆ ಮತ್ತು ರೈತ ಗೀತೆ ಹಾಡಿದರು. ಶರಣಪ್ಪ ಕೋಟ್ಯಾಳ ಬಸವರಾಜ ರ‍್ಯಾವಳದ, ಶಿವಲೀಲಾ ಅಯೋಧ್ಯ ಮತ್ತು ರುದ್ರಗೌಡ ಮೈಲಾಪುರ ಕಾರ್ಯಕ್ರಮ ನಿರ್ವಹಿಸಿದರು.