ನಾಮಫಲಕದಲ್ಲಿ ಕನ್ನಡ ಕಟ್ಟುನಿಟ್ಟಿನ ಅನುಷ್ಠಾನವಾಗಬೇಕು: ಡಾ. ಪುರುಷೋತ್ತಮ ಬಿಳಿಮಲೆ

KannadaprabhaNewsNetwork |  
Published : Oct 28, 2024, 01:47 AM ISTUpdated : Oct 28, 2024, 07:13 AM IST
ಗಾಂಧಿ ಭವನದಲ್ಲಿ ಭಾನುವಾರ ನಡೆದ ಕನ್ನಡ ತಂತ್ರಾಂಶ ಬಳಕೆಯಲ್ಲಿ ಸಾರ್ವಜನಿಕರು ಮತ್ತು ಸರ್ಕಾರದ ಪಾತ್ರ ಕುರಿತು ಸಮಾವೇಶದಲ್ಲಿ ಕನ್ನಡ ತಂತ್ರಾಂಶ ಸಂಪರ್ಕ ಭಾಷಾ ನೆಲೆಗಟ್ಟಿನ ತರಬೇತಿ ಹೊಂದಿದ ವಿದ್ಯಾರ್ಥಿಗಳಿಗೆ, ಸರ್ಕಾರಿ ನೌಕರರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ  ಪ್ರಮಾಣ ಪತ್ರ ವಿತರಿಸಿದರು. ಎಂ.ನಾಗರಾಜು, ಡಾ.ವಸುಂದರಾ ಭೂಪತಿ ಮತ್ತಿತರಿದ್ದರು. | Kannada Prabha

ಸಾರಾಂಶ

ರಾಜ್ಯಾದ್ಯಂತ ಅಂಗಡಿಗಳು, ಉದ್ಯಮ, ಸಂಘ ಸಂಸ್ಥೆ, ಕಚೇರಿಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಬಳಕೆಯಾಗಬೇಕೆಂಬ ಆದೇಶ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಸರ್ಕಾರ ಕ್ರಮ ವಹಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

 ಬೆಂಗಳೂರು : ರಾಜ್ಯಾದ್ಯಂತ ಅಂಗಡಿಗಳು, ಉದ್ಯಮ, ಸಂಘ ಸಂಸ್ಥೆ, ಕಚೇರಿಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಬಳಕೆಯಾಗಬೇಕೆಂಬ ಆದೇಶ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಸರ್ಕಾರ ಕ್ರಮ ವಹಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ಕನ್ನಡ ಗಣಕ ಉಚಿತ ತರಬೇತಿ ಕೇಂದ್ರ ನಗರದ ಗಾಂಧಿ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಕನ್ನಡ ತಂತ್ರಾಂಶ ಬಳಕೆಯಲ್ಲಿ ಸಾರ್ವಜನಿಕರು ಮತ್ತು ಸರ್ಕಾರದ ಪಾತ್ರ’ ಕುರಿತ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡಬೇಕೆಂದು ಸರ್ಕಾರ ಆದೇಶ ಮಾಡಿದ್ದರೂ, ಅದು ಇನ್ನೂ ಪರಿಪೂರ್ಣವಾಗಿ ಅನುಷ್ಠಾನವಾಗಿಲ್ಲ. ಹೊರಗಿನಿಂದ ಬಂದ ಕೆಲವರು ಕರ್ನಾಟಕದಲ್ಲಿ ತಮ್ಮ ಉದ್ಯಮ, ಸಂಸ್ಥೆ, ವ್ಯಾಪಾರ ನಡೆಸುತ್ತಿದ್ದರೂ ಸರ್ಕಾರದ ಈ ಕನ್ನಡ ಫಲಕ ಆದೇಶವನ್ನೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಹ ಧೈರ್ಯ ತೋರುತ್ತಿದ್ದಾರೆ. ಅಂತಹವರಿಗೆ ಈಗಾಗಲೇ ನ್ಯಾಯಾಲಯವೂ ಸ್ಪಷ್ಟ ಸೂಚನೆ ನೀಡಿದೆ. ಇದರ ಜೊತೆಗೆ ಮುಂದೆ ಈ ರೀತಿ ಸರ್ಕಾರದ ಆದೇಶವನ್ನು ಪ್ರಶ್ನಿಸಲಾಗದಂತೆ ಕಾನೂನನ್ನು ಇನ್ನಷ್ಟು ಬಿಗಿಗೊಳಿಸುವ ಅಗತ್ಯವಿದೆ. ಜೊತೆಗೆ ಈ ಆದೇಶವನ್ನು ಪಾಲಿಸದವರ ಪರವಾನಗಿಯನ್ನು ಮುಲಾಜಿಲ್ಲದೆ ರದ್ದುಪಡಿಸುವ ಕೆಲಸವನ್ನು ಸರ್ಕಾರ ಕಟ್ಟುನಿಟ್ಟಾಗಿ ಮಾಡಬೇಕು. ಆಗ ಮಾತ್ರ ಕನ್ನಡ ನಾಮಫಲಕದ ಆದೇಶ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಲು ಸಾಧ್ಯ ಎಂದರು.

ಇಂಗ್ಲಿಷ್‌ ವ್ಯಾಮೋಹದಿಂದಾಗಿ ಇವತ್ತಿನ ಕಾಲದಲ್ಲಿ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳು ಸೇರಿದಂತೆ ಶ್ರೀಮಂತರು ಮಾತ್ರವಲ್ಲ, ಕೂಲಿ ಕಾರ್ಮಿಕರು, ದಲಿತರು, ಹಿಂದುಳಿದ ವರ್ಗದವರೂ ಕೂಡ ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳುಹಿಸುವ ಆಸಕ್ತಿಯನ್ನು ತೋರುತ್ತಿಲ್ಲ. ನಗರ ಪ್ರದೇಶದಲ್ಲಿ ಕನ್ನಡ ಭಾಷೆಯ ಬಳಕೆ ಕ್ಷೀಣಿಸುತ್ತಿದೆ. ಇದನ್ನು ತಡೆಯಲು ಹೊರಗಿನಿಂದ ಬರುವ ಕನ್ನಡಿಗರದಲ್ಲದವರಿಗೆ ಕನ್ನಡದಲ್ಲಿ ವ್ಯವಹರಿಸಿ ಅವರಿಗೆ ಕನ್ನಡ ಕಲಿಸುವ ಜವಾಬ್ದಾರಿ ಕನ್ನಡಿಗರದ್ದಾಗಿದೆ ಎಂದು ತಿ‍ಳಿಸಿದರು.

ವಿಧಾನ ಪರಿಷತ್‌ ಸದಸ್ಯ ಎಂ. ನಾಗರಾಜು ಮಾತನಾಡಿ, ದೇಶದ ಬೇರೆ ಬೇರೆ ರಾಜ್ಯಗಳಿಂದ ಸಾಕಷ್ಟು ಮಂದಿ ಇವತ್ತು ಕರ್ನಾಟಕದಲ್ಲಿ ವ್ಯಾಪಾರ, ಉದ್ಯಮಗಳ ಮೂಲಕ ನೆಲೆ ಕಂಡುಕೊಂಡಿದ್ದಾರೆ. ಅವರಿಗೆ ನೆಲೆ ನೀಡಿದ ರಾಜ್ಯದ ಋಣ ತೀರಿಸಲು ಸ್ಥಳೀಯ ಭಾಷೆ ಕಲಿಯುವುದು ಅವರ ಕರ್ತವ್ಯ ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ, ಕನ್ನಡ ಗಣಕ ಉಚಿತ ತರಬೇತಿ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಡಾ. ಆರ್.ಎ. ಪ್ರಸಾದ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ