ರಾಜ್ಯದೊಳಗೆ ಉತ್ಪಾದನೆ, ಮಾರಾಟವಾಗುವ ಉತ್ಪನ್ನಗಳ ಮೇಲೆ ಕನ್ನಡ ಬಳಕೆ ಕಡ್ಡಾಯ! ರಾಜ್ಯ ಸರ್ಕಾರ ಆದೇಶ

KannadaprabhaNewsNetwork |  
Published : Mar 01, 2025, 01:02 AM ISTUpdated : Mar 01, 2025, 07:58 AM IST
ಕನ್ನಡ ಬಾವುಟ | Kannada Prabha

ಸಾರಾಂಶ

ಕನ್ನಡಪರ ಸಂಘಟನೆಗಳ ಹೋರಾಟದ ಫಲವಾಗಿ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಅಳವಡಿಕೆ ಅನುಷ್ಠಾನದ ಬೆನ್ನಲ್ಲೇ ಇದೀಗ ರಾಜ್ಯದೊಳಗೆ ಉತ್ಪಾದನೆಯಾಗುವ ಹಾಗೂ ಮಾರಾಟವಾಗುವ ಉತ್ಪನ್ನಗಳ ಮೇಲೆ ಕನ್ನಡದಲ್ಲಿ ಹೆಸರು ಮುದ್ರಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಬೆಂಗಳೂರು : ಕನ್ನಡಪರ ಸಂಘಟನೆಗಳ ಹೋರಾಟದ ಫಲವಾಗಿ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಅಳವಡಿಕೆ ಅನುಷ್ಠಾನದ ಬೆನ್ನಲ್ಲೇ ಇದೀಗ ರಾಜ್ಯದೊಳಗೆ ಉತ್ಪಾದನೆಯಾಗುವ ಹಾಗೂ ಮಾರಾಟವಾಗುವ ಉತ್ಪನ್ನಗಳ ಮೇಲೆ ಕನ್ನಡದಲ್ಲಿ ಹೆಸರು ಮುದ್ರಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ರಾಜ್ಯದೊಳಗೆ ಕನ್ನಡಕ್ಕೆ ಮೊದಲ ಆದ್ಯತೆ ಸಿಗಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಸೇರಿದಂತೆ ಇನ್ನಿತರ ಕನ್ನಡಪರ ಸಂಘಟನೆಗಳು ತೀವ್ರ ಹೋರಾಟ ನಡೆಸಿದ್ದವು. ಅದರಲ್ಲೂ ವಾಣಿಜ್ಯ ಉದ್ಯಮಗಳ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಪದ ಬಳಕೆ, ರಾಜ್ಯದಲ್ಲಿ ಮಾರಾಟವಾಗುವ ಯಾವುದೇ ಉತ್ಪನ್ನಗಳ ಹೆಸರು ಮತ್ತು ಉತ್ಪನ್ನದ ಕುರಿತ ನಿರ್ದೇಶನವನ್ನು ಕನ್ನಡದಲ್ಲೂ ಮುದ್ರಿಸುವ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದವು.

ಈ ಹೋರಾಟದ ನಂತರ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2020 ಕಟ್ಟುನಿಟ್ಟಿನ ಜಾರಿಗೆ ಮುಂದಾದ ರಾಜ್ಯ ಸರ್ಕಾರ, ವಾಣಿಜ್ಯ ಉದ್ಯಮಗಳ ನಾಮಫಲಕದಲ್ಲಿ ಶೇ. 60ರಷ್ಟು ಕನ್ನಡ ಪದ ಬಳಕೆಯನ್ನು ಕಡ್ಡಾಯಗೊಳಿಸಿ ಆದೇಶಿಸಿತು. ಒಂದು ವೇಳೆ ಕನ್ನಡ ಬಳಕೆಯನ್ನು ಮಾಡದಿದ್ದರೆ ಅಂತಹ ಉದ್ಯಮಗಳ ಮೇಲೆ ಕ್ರಮ ಕೈಗೊಳ್ಳುವುದಾಗಿಯೂ ಸೂಚಿಸಿತ್ತು.

ಅದರ ಬೆನ್ನಲ್ಲೇ ಇದೀಗ ಕರವೇ ಹೋರಾಟದ ಫಲವಾಗಿ ರಾಜ್ಯದೊಳಗೆ ಉತ್ಪಾದನೆಯಾಗುವ ಉತ್ಪನ್ನಗಳ ಮೇಲೆ ಕನ್ನಡದಲ್ಲಿ ಹೆಸರು ಮುದ್ರಿಸುವುದನ್ನು ಕಡ್ಡಾಯಗೊಳಿಸಿ ಆದೇಶಿಸಲಾಗಿದೆ. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2020ರ ಕಲಂ 17 (7)ರಲ್ಲಿ ರಾಜ್ಯದೊಳಗೆ ತಯಾರಿಸಿದ ಮತ್ತು ಮಾರಾಟವಾಗುವ ಎಲ್ಲ ಕೈಗಾರಿಕಾ ಮತ್ತು ಇತರ ಗ್ರಾಹಕ ಉತ್ಪನ್ನಗಳ ಹೆಸರು ಮತ್ತು ಅವುಗಳ ಬಳಕೆಯ ಕುರಿತಾದ ನಿರ್ದೇಶನಗಳು ಇತರ ಭಾಷೆಯ ಜತೆಗೆ ಕನ್ನಡದಲ್ಲಿಯೂ ಇರಬೇಕು ಎಂಬ ಅಂಶವಿದೆ. ಅದನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು.

ಅದರಂತೆ ರಾಜ್ಯದಲ್ಲಿ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ತಯಾರಾಗುವ ಎಲ್ಲ ಕೈಗಾರಿಕೆ ಮತ್ತು ಗ್ರಾಹಕ ಉತ್ಪನ್ನಗಳ ಮೇಲೆ ಹೆಸರು ಮತ್ತು ಅವುಗಳ ಬಳಕೆಯ ಕುರಿತಾದ ನಿರ್ದೇಶನಗಳನ್ನು ಇತರ ಭಾಷೆಗಳ ಜತೆಗೆ ಕನ್ನಡದಲ್ಲೂ ಮುದ್ರಿಸಬೇಕು ಎಂದು ಉದ್ಯಮಗಳಿಗೆ ಆದೇಶಿಸಿದೆ. ಹಾಗೆಯೇ, ಕೈಗಾರಿಕಾ ಮತ್ತು ಗ್ರಾಹಕ ವಸ್ತುಗಳ ಉತ್ಪನ್ನದಾರರು ಕನ್ನಡ ಬಳಕೆ ಆದೇಶ ಪಾಲಿಸುತ್ತಿದ್ದಾರೆಯೇ ಎಂಬ ಬಗ್ಗೆ ನಿಗದಿತ ಪ್ರಾಧಿಕಾರಿಗಳು ಮೇಲ್ವಿಚಾರಣೆ ಮಾಡುವಂತೆಯೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆದೇಶಿಸಿದೆ.

ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡದ ಜೊತೆಗೆ ಉತ್ಪನ್ನಗಳ ಮೇಲೂ ಕನ್ನಡ ಬಳಕೆ ಕಡ್ಡಾಯಕ್ಕೆ ಆಗ್ರಹಿಸಿದ್ದ ಕನ್ನಡಪರ ಸಂಘಟನೆಗಳು

ಹೋರಾಟಕ್ಕೆ ಮಣಿದ ಸರ್ಕಾರದಿಂದ ವಾಣಿಜ್ಯ ಉದ್ಯಮಗಳ ನಾಮಫಲಕದಲ್ಲಿ ಶೇ 60ರಷ್ಟು ಕನ್ನಡ ಪದ ಬಳಕೆ ಕಡ್ಡಾಯಗೊಳಿಸಿ ಆದೇಶ

ಈಗ ರಾಜ್ಯದಲ್ಲಿ ತಯಾರಿಸಿದ, ಮಾರುವ ಎಲ್ಲ ಉತ್ಪನ್ನದಲ್ಲಿ ಹೆಸರು, ಬಳಕೆ ಕುರಿತ ಮಾಹಿತಿ ಕನ್ನಡದಲ್ಲೂ ನೀಡಿಕೆ ಕಡ್ಡಾಯಗೊಳಿಸಿ ಆದೇಶ

ಉತ್ಪನ್ನದಾರರು ಕನ್ನಡ ಬಳಕೆ ಆದೇಶ ಪಾಲಿಸುತ್ತಿದ್ದಾರೆಯೇ ಎಂಬ ಬಗ್ಗೆ ಮೇಲ್ವಿಚಾರಣೆಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆದೇಶಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಮಬ ಕನ್ನಡ ಪರ ಸಂಘಟನೆಗಳ ಹೋರಾಟಕ್ಕೆ ದೊಡ್ಡ ಜಯ. ಗ್ರಾಹಕರಿಗೂ ಕನ್ನಡದ ಹಕ್ಕು ಲಭ್ಯ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ