ಹಿಂದಿ ಹೇರಿಕೆ ವಿರುದ್ಧ ಕನ್ನಡ ಸಂಘಟನೆಗಳ ಪ್ರತಿಭಟನೆ

KannadaprabhaNewsNetwork | Published : Sep 15, 2024 1:46 AM

ಸಾರಾಂಶ

ಸಂವಿಧಾನದ ಆರ್ಟಿಕಲ್ ೩೪೩ ರಿಂದ ೩೫೧ವರಗಿನ ಪರಿಚ್ಛೇಧಗಳು ಭಾರತದ ಎಲ್ಲ ನುಡಿಗಳನ್ನು ಸಮಾನವಾಗಿ ನೋಡುವುದನ್ನು ನಿರಾಕರಿಸುತ್ತವೆ. ಹಿಂದಿಗೆ ಹೆಚ್ಚಿನ ಅವಕಾಶವನ್ನು ನೀಡುತ್ತವೆ. ಇದು ಬದಲಾಗಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಎಲ್ಲಾ ಭಾಷೆಗಳಿಗೂ ಸಮಾನ ಆದ್ಯತೆ ನೀಡದೆ ಆಡಳಿತದ ವಿವಿಧ ಹಂತಗಳಲ್ಲಿ ಕೇಂದ್ರ ಸರ್ಕಾರ ಬಲವಂತವಾಗಿ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಆರೋಪಿಸಿ ಕನ್ನಡಪರ ಸಂಘಟನೆಗಳು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದವು.

ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ), ನಾವು ದ್ರಾವಿಡ ಕನ್ನಡಿಗರು- ಕರುನಾಡ ಸೇವಕರು ಸಂಘಟನೆ ಪದಾಧಿಕಾರಿಗಳು ಜಂಟಿಯಾಗಿ ಪ್ರತಿಭಟನೆ ನಡೆಸಿದರು. ನಗರದ ಪ್ರಧಾನ ಅಂಚೆ ಕಚೇರಿ ಎದುರು ಸೇರಿ ಕೇಂದ್ರದ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ನಾವು ದ್ರಾವಿಡ ಕನ್ನಡಿಗರ ಸಂಘಟನೆಯ ಅಭಿಗೌಡ, ಒಕ್ಕೂಟ ವ್ಯವಸ್ಥೆಯೊಳಗೆ ಎಲ್ಲಾ ಪ್ರಾದೇಶಿಕ ಭಾಷೆಗಳನ್ನು ಸಮಾನವಾಗಿ ಕಾಣಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ಹಿಂದಿ ಹೆಸರಿನಲ್ಲಿ ಭಾರತವನ್ನು ಒಗ್ಗೂಡಿಸುವುದಾಗಿ ಹೇಳುತ್ತಾ ಬರಲಾಗಿತ್ತು. ಈಗ ಹಿಂದಿ ಹೇರಿಕೆಯ ಕಾರಣದಿಂದಲೇ ಒಕ್ಕೂಟ ವ್ಯವಸ್ಥೆಯು ಛಿದ್ರಗೊಳ್ಳುವ ಸಂಧರ್ಭ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಂವಿಧಾನದ ಆರ್ಟಿಕಲ್ ೩೪೩ ರಿಂದ ೩೫೧ವರಗಿನ ಪರಿಚ್ಛೇಧಗಳು ಭಾರತದ ಎಲ್ಲ ನುಡಿಗಳನ್ನು ಸಮಾನವಾಗಿ ನೋಡುವುದನ್ನು ನಿರಾಕರಿಸುತ್ತವೆ. ಹಿಂದಿಗೆ ಹೆಚ್ಚಿನ ಅವಕಾಶವನ್ನು ನೀಡುತ್ತವೆ. ಇದು ಬದಲಾಗಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಎಚ್.ಡಿ.ಜಯರಾಂ ಮಾತನಾಡಿ, ಗ್ರಾಮೀಣಾ ಬ್ಯಾಂಕುಗಳಲ್ಲೂ ಹಿಂದಿ ಭಾಷಿಕರು, ಕನ್ನಡಿಗರ ಕೆಲಸಕ್ಕೆ ಕುತ್ತು ತಂದಿದ್ದಾರೆ.ಇದು ಇಂಡಿಯಾ ಸರ್ಕಾರವಾಗಿಲ್ಲ. ಬದಲಿಗೆ ಹಿಂದಿಯ ಸರ್ಕಾರವಾಗಿದೆ ಎಂದು ಲೇವಡಿ ಮಾಡಿದರು.

ಕರುನಾಡ ಸೇವಕರು ಸಂಘಟನೆಯ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ತೆರಿಗೆ ಸಲ್ಲಿಸುವ ರಾಜ್ಯವಾಗಿದೆ. ನಾವು ಸಲ್ಲಿಸುವ ಲಕ್ಷಾಂತರ ರು. ತೆರಿಗೆಗೆ ಕೇಂದ್ರದಿಂದ ವಾಪಸ್ ಬರುವ ಅನುದಾನ ಹದಿನೈದು ಸಾವಿರ ಕೋಟಿ ರು. ಮಾತ್ರವಾಗಿದೆ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ೧.೮೭ ಲಕ್ಷ ಕೋಟಿ ರು.ಬಾಕಿ ನೀಡಬೇಕಿದೆ. ಜಿಎಸ್‌ಟಿ ಹೆಸರಿನಲ್ಲಿ ಲಕ್ಷಾಂತರ ಕೋಟಿ ರು. ಆದಾಯ ಒಕ್ಕೂಟ ಸರಕಾರಕ್ಕೆ ಸಿಗುತ್ತಿದೆ. ಆದರೆ ಇದರ ಲಾಭ ರಾಜ್ಯಕ್ಕೆ ಸಿಗುತ್ತಿಲ್ಲ. ಯುಪಿಎಸ್‌ಸಿ ಸೇರಿ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶ ನಿರಾಕರಿಸಲಾಗಿದೆ ಎಂದು ಟೀಕಿಸಿದರು.

ಅಂಚೆ ಕಚೇರಿಯಲ್ಲಿ ಹಿಂದಿ ದಿವಸ ಆಚರಿಸದಂತೆ ಹಾಗೂ ವಹಿವಾಟುಗಳನ್ನು ಸಂಪೂರ್ಣವಾಗಿ ಕನ್ನಡದಲ್ಲೆ ನಡೆಸುವಂತೆ ಅಂಚೆ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದ ಪ್ರತಿಭಟನಾಕಾರರು ಬೆಂಗಳೂರು- ಮೈಸೂರು ಹೆದ್ದಾರಿಯ ಮಹಾವೀರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆತಡೆ ನಡೆಸಿ ದಾಸಪ್ಪನ ಮೂಲಕ ಶಂಖ- ಜಾಗಟೆ ಮೊಳಗಿಸಿ ಸಾಂಕೇತಿಕವಾಗಿ ಹಿಂದಿ ತಿಥಿ ದಿವಸ ಆಚರಿಸಿದರು.

ಪ್ರತಿಭಟನೆಯಲ್ಲಿ ಕಲಾವಿದ ಪ್ರಕಾಶ್, ಕರುನಾಡ ಸೇವಕರು ಸಂಘದ ನಗರಾಧ್ಯಕ್ಷ ಚಂದ್ರು ಎಂ.ಎನ್.ಪದ್ಮ ಬೆಟ್ಟಯ್ಯ, ಸಂಜು ಆಲಕೆರೆ, ಧನುಷ್, ದರ್ಶನ್, ಮುದ್ದೇಗೌಡ, ಭಾಸ್ಕರ್, ನಾಥಪ್ಪ ಮೊದಲಾದವರಿದ್ದರು.

Share this article