ಕಮಲ್‌ ಹಾಸನ್ ವಿರುದ್ಧ ಕನ್ನಡ ಸಂಘಟನೆಗಳು ಕಿಡಿ

KannadaprabhaNewsNetwork |  
Published : May 30, 2025, 12:17 AM IST
೨೯ಕೆಎಂಎನ್‌ಡಿ-೬ಕನ್ನಡ ವಿರೋಧಿ ಹೇಳಿಕೆ ನೀಡಿರುವ ನಟ ಕಮಲಹಾಸನ್ ಮತ್ತು ಮೈಸೂರು ಸ್ಯಾಂಡಲ್ ಸೋಪ್ ಉತ್ಪನ್ನಗಳಿಗೆ ಪರಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿ ಮಾಡಿರುವುದರ ವಿರುದ್ಧ ಕದಂಬ ಸೈನ್ಯ ಹಾಗೂ ಇತರೆ ಸಂಘಟನೆಯವರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಪಾರಂಪರಿಕ ಮೈಸೂರ್ ಸ್ಯಾಂಡಲ್ ಸೋಪ್ ಉತ್ಪನ್ನಗಳಿಗೆ ಪರಭಾಷೆ ನಟಿ ತಮನ್ನಾ ಭಾಟಿಯಾಗೆ ೬.೨೦ ಕೋಟಿ ರು. ನೀಡಿ ರಾಯಭಾರಿಯಾಗಿ ನೇಮಕ ಮಾಡುವ ಅಗತ್ಯವಾದರೂ ಏನಿತ್ತು, ಇದರ ಬದಲು ಕನ್ನಡ ನಟಿಯರಿಗೆ ಅವಕಾಶ ನೀಡಬಹುದಿತ್ತಲ್ಲವೇ. ಹಾಗಾಗಿ ಇವರ ಹೆಸರನ್ನು ತಕ್ಷಣವೇ ಕೈಬಿಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಕನ್ನಡ ಭಾಷೆಗೆ ಅವಮಾನಕಾರಿ ಹೇಳಿಕೆ ನೀಡಿರುವ ತಮಿಳು ನಟ ಕಮಲ್‌ ಹಾಸನ್ ಕ್ಷಮೆ ಕೇಳುವುದು ಹಾಗೂ ಮೈಸೂರ್ ಸ್ಯಾಂಡಲ್ ಸೋಪ್ ರಾಯಭಾರಿಯನ್ನಾಗಿ ತೆಲುಗು ನಟಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿರುವುದನ್ನು ವಿರೋಧಿಸಿ ಕದಂಬ ಸೈನ್ಯ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಭಾವಚಿತ್ರಗಳನ್ನು ಸುಟ್ಟು ಗುರುವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಕಾರ್ಯಕರ್ತರು ಕಮಲ್‌ ಹಾಸನ್ ಮತ್ತು ರಾಜ್ಯಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪಾರಂಪರಿಕ ಮೈಸೂರ್ ಸ್ಯಾಂಡಲ್ ಸೋಪ್ ಉತ್ಪನ್ನಗಳಿಗೆ ಪರಭಾಷೆ ನಟಿ ತಮನ್ನಾ ಭಾಟಿಯಾಗೆ ೬.೨೦ ಕೋಟಿ ರು. ನೀಡಿ ರಾಯಭಾರಿಯಾಗಿ ನೇಮಕ ಮಾಡುವ ಅಗತ್ಯವಾದರೂ ಏನಿತ್ತು, ಇದರ ಬದಲು ಕನ್ನಡ ನಟಿಯರಿಗೆ ಅವಕಾಶ ನೀಡಬಹುದಿತ್ತಲ್ಲವೇ. ಹಾಗಾಗಿ ಇವರ ಹೆಸರನ್ನು ತಕ್ಷಣವೇ ಕೈಬಿಡಬೇಕು ಎಂದು ಆಗ್ರಹಿಸಿದರು.

ಕನ್ನಡ ಭಾಷೆ, ಸಂಸ್ಕೃತಿಯ ಅಸ್ಮಿತೆಯನ್ನು ಉಳಿಸಲು ಸ್ವಾಭಿಮಾನಿ ಕನ್ನಡಿಗರು ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ, ದ್ರಾವಿಡ ಭಾಷೆಗಳಲ್ಲಿ ಅತಿ ಹೆಚ್ಚು ದೌರ್ಜನ್ಯಕ್ಕೆ ಒಳಗಾಗುತ್ತಿರುವುದು ಕನ್ನಡ ಮತ್ತು ಕನ್ನಡಿಗರು ಎಂಬುದು ಜಗಜ್ಜಾಹಿರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಮಿಳು ಭಾಷೆಯಿಂದಲೇ ಕನ್ನಡ ಹುಟ್ಟಿದ್ದು ಎನ್ನುವ ಮಾತನ್ನು ಕನ್ನಡ ಕಡು ವಿರೋಧಿ ಕಮಲ್‌ ಹಾಸನ್ ಅವರ ಎಲ್ಲ ಚಲನಚಿತ್ರಗಳನ್ನು ಬಹಿಷ್ಕರಿಸಿ ಆ ಮೂಲಕ ಒಬ್ಬ ಪರಭಾಷಾ ನಟನಿಗೆ ರಾಜ್ಯ ಸರ್ಕಾರ ತಕ್ಕ ಉತ್ತರ ನೀಡಬೇಕು. ಈ ರೀತಿ ಮಾಡಿದರೆ ಕನ್ನಡ ಭಾಷೆ ಬಗ್ಗೆ ಹಗುರವಾಗಿ ಮಾತನಾಡುವುದಿಲ್ಲ ಎಂದು ಒತ್ತಾಯಿಸಿದರು.

ಈ ಹಿಂದೆ ತಮಿಳುನಾಡಿನ ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್ ಬೆಂಗಳೂರು ಕೇಂದ್ರ ಆಡಳಿತ ಮಾಡಬೇಕು ಎಂದು ಹೇಳಿಕೆ ನೀಡಿದಾಗ ವರನಟ ಡಾ.ರಾಜ್‌ಕುಮಾರ್ ತೀವ್ರವಾಗಿ ವಿರೋಧಿಸಿದ್ದರು. ತಮಿಳುನಾಡಿನ ಬಹಿರಂಗ ಸಭೆಯಲ್ಲಿ ಡಾ.ರಾಜ್‌ಕುಮಾರ ಎದುರು ಕ್ಷಮೆ ಕೇಳಿದ್ದರು. ಕನ್ನಡಕ್ಕೆ ದೊಡ್ಡ ಶಕ್ತಿಯಾಗಿದ್ದವರು ಡಾ.ರಾಜಕುಮಾರ್. ಆದರೆ, ಇವರ ಮಗ ನಟ ಶಿವರಾಜ್‌ಕುಮಾರ್ ಅವರ ಎದುರೇ ಕನ್ನಡ ಭಾಷೆ ಹುಟ್ಟಿರುವುದು ತಮಿಳುನಿಂದ ಎಂದು ಹೇಳಿದಾಗ ಖಂಡಿಸಿದೆ ಮೌನ ವಹಿಸಿರುವುದು ಏಕೆ ಎಂದು ಪ್ರಶ್ನಿಸಿದರು.

ಕದಂಬಸೈನ್ಯ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಬೇಕ್ರಿ ರಮೇಶ್, ಭಾರತೀಯ ಕಿಸಾನ್ ಸಂಘ ಜಿಲ್ಲಾ ಪ್ರಮುಖ್ ಶಿವಣ್ಣ ಹೊಳಲು, ಮುಖಂಡರಾದ ಉಮೇಶ್ ರಾಂಪುರ, ಜೋಸೆಫ್, ರಾಮು ಕೀಲಾರ, ಉಮ್ಮಡಹಳ್ಳಿ ನಾಗೇಶ್, ಅಕ್ರಂ ಪಾಷಾ, ಸಲ್ಮಾನ್, ಆರಾಧ್ಯ ಗುಡಿಗೇನಹಳ್ಳಿ, ಎಲ್.ಜಯರಾಮ, ಮೋಹನ್ ಚಿಕ್ಕಮಂಡ್ಯ ಸೇರಿದಂತೆ ಇತರರಿದ್ದರು.

PREV

Recommended Stories

ದರ್ಶನ್‌ ಅಶ್ಲೀಲ ಫ್ಯಾನ್ಸ್‌ ವಿರುದ್ಧ ರಮ್ಯ ಸಮರ
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ನಾಲ್ವರು ಐಪಿಎಸ್‌ ಸಸ್ಪೆಂಡ್‌ ವಾಪಸ್‌