ಕುಷ್ಟಗಿ:
ಕನ್ನಡಪ್ರಭ ದಿನಪತ್ರಿಕೆ ವಿದ್ಯಾರ್ಥಿಗಳ ಕಾಳಜಿ ಮತ್ತು ಶೈಕ್ಷಣಿಕ ಅಭಿವೃದ್ಧಿಯ ಹಿತದೃಷ್ಟಿಯಿಂದ ಯುವ ಆವೃತ್ತಿ ಹೊರಗಡೆ ತಂದಿದ್ದು ಇದನ್ನು ಅಧ್ಯಯನ ಮಾಡಿ ಉತ್ತಮ ಸಾಧನೆ ಮಾಡಬೇಕು ಎಂದು ಶಿಕ್ಷಣಪ್ರೇಮಿ ರವಿಕುಮಾರ ಹಿರೇಮಠ ಹೇಳಿದರು.ಪಟ್ಟಣದ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಕುಡುಮಶ್ರೀ 4ಜಿ ದಿವ್ಯಾಂಗರ ಶಿಕ್ಷಣ ಹಾಗೂ ಕಲ್ಯಾಣ ಸಂಸ್ಥೆ ಸಹಯೋಗದಲ್ಲಿ ಕನ್ನಡಪ್ರಭ ಯುವ ಆವೃತ್ತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
10ನೇ ತರಗತಿ ವಿದ್ಯಾರ್ಥಿಗಳು ಉತ್ತಮ ಅಂಕಗಳಿಸುವ ಮೂಲಕ ಉನ್ನತ ಮಟ್ಟದಲ್ಲಿ ಸಾಧನೆಗೈದು ಪಾಲಕರಿಗೆ, ಕಲಿಸಿದ ಗುರುಗಳಿಗೆ ಉತ್ತಮ ಹೆಸರು ತಂದುಕೊಡಬೇಕು ಎಂದರು.ರೈತ ಸಂಘದ ಮುಖಂಡ ನಜೀರಸಾಬ ಮೂಲಿಮನಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಮಾನವೀಯ ಮೌಲ್ಯ ಅಳವಡಿಸಿಕೊಳ್ಳಬೇಕು. ದುಶ್ಚಟಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆ ದಿನಂಪ್ರತಿ ಹೆಚ್ಚಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಹಲವು ವರ್ಷಗಳ ಹಿಂದೆ ಶಿಕ್ಷಣ ಕಲಿಯುವುದು ಕಷ್ಟಕರವಾಗಿತ್ತು. ಆದರೆ, ಇಂದು ಎಲ್ಲ ತರಹದ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದ್ದು ಅವುಗಳನ್ನು ಬಳಸಿಕೊಂಡು ಉತ್ತಮ ಶಿಕ್ಷಣವಂತರಾಗಿ ಸಮಾಜಕ್ಕೆ ಮಹತ್ವದ ಕೊಡುಗೆ ಕೊಡಬೇಕು ಎಂದು ತಿಳಿಸಿದರು.ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ರೈತರು, ವಿಶೇಷ ಸಾಧಕರನ್ನು ಗುರುತಿಸುತ್ತಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ₹ 1 ರುಪಾಯಿಯಲ್ಲಿ ಯುವ ಆವೃತ್ತಿ ದಿನಪತ್ರಿಕೆ ನೀಡುವ ಮೂಲಕ ಶೈಕ್ಷಣಿಕ ಪ್ರೇಮ ಮರೆದಿದ್ದಾರೆ ಎಂದರು.
ಕುಡುಮಶ್ರೀ 4ಜಿ ದಿವ್ಯಾಂಗರ ಶಿಕ್ಷಣ ಹಾಗೂ ಕಲ್ಯಾಣ ಸಂಸ್ಥೆ ಅಧ್ಯಕ್ಷ ಕಿರಣಜ್ಯೋತಿ ಮಾತನಾಡಿ, ವಿದ್ಯಾರ್ಥಿಗಳು ಯುವ ಆವೃತ್ತಿ ಓದುವ ಮೂಲಕ ಶೈಕ್ಷಣಿಕ ಬದುಕು ರೂಪಿಸಿಕೊಳ್ಳಬೇಕು ಎಂದು ಹೇಳಿದರು.ಮುಖ್ಯಶಿಕ್ಷಕ ಯಮನೂರಪ್ಪ ಚೂರಿ ಮಾತನಾಡಿ, ನಮ್ಮ ಜೀವನಕ್ಕೆ ನಾವೇ ದಾರಿದೀಪವಾಗಬೇಕು. ಶಿಕ್ಷಣದ ಜತೆಗೆ ಮಾನವೀಯ ಮೌಲ್ಯ ಅಳವಡಿಸಿಕೊಳ್ಳಬೇಕು. ಕನ್ನಡಪ್ರಭ ಯುವ ಆವೃತ್ತಿ 10ನೇ ತರಗತಿಗೆ ಸಂಬಂಧಿಸಿದ ಎಲ್ಲ ವಿಷಯಗಳ ಕುರಿತು ಮಾಹಿತಿ ಹಾಗೂ ಪ್ರಶ್ನೆಪತ್ರಿಕೆಯನ್ನು ದಿನಪತ್ರಿಕೆಯಲ್ಲಿ ನೀಡುತ್ತಿದ್ದು ಇದನ್ನು ಬಳಸಿಕೊಂಡು ಉತ್ತಮ ಅಂಕ ಗಳಿಸುವ ಮೂಲಕ ನಮ್ಮ ದಾರಿಯನ್ನು ಸಗುಮಗೊಳಿಸಿಕೊಳ್ಳಬೇಕು ಎಂದರು.
ಕುಡುಮಶ್ರೀ 4ಜಿ ದಿವ್ಯಾಂಗರ ಶಿಕ್ಷಣ ಹಾಗೂ ಕಲ್ಯಾಣ ಸಂಸ್ಥೆಯ ಕಾರ್ಯದರ್ಶಿ ಬಸವರಾಜ ಗಾಣಿಗೇರ, ಪ್ರಗತಿಪರ ಚಿಂತಕ ಶ್ರೀನಿವಾಸ ಕಂಟ್ಲಿ ಮಾತನಾಡಿದರು. ಈ ವೇಳೆ ಶಿಕ್ಷಕರಾದ ಶಂಕ್ರಪ್ಪ ಅಂಚಡಿ, ಸುರೇಶ ಮಬ್ರುಮಕರ, ಕರಿಮಸಾಬ್ ಇದ್ದಲಗಿ, ಯಮನೂರಪ್ಪ ಹಿರೇಮನಿ, ಹೊನ್ನಮ್ಮ, ಬಸವರಾಜೇಶ್ವರಿ, ಕನ್ನಡಪ್ರಭ ವರದಿಗಾರ ಪರಶಿವಮೂರ್ತಿ ದೋಟಿಹಾಳ, ವಿತರಕ ಜಮದಗ್ನಿ ಗುರಿಕಾರ ಸೇರಿದಂತೆ ವಿದ್ಯಾರ್ಥಿಗಳಿದ್ದರು.