ಜಿಲ್ಲೆಯ ಇಬ್ಬರು ಸಾಧಕರಿಗೆ ಒಲಿದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

KannadaprabhaNewsNetwork |  
Published : Oct 31, 2026, 01:30 AM IST
30ಕೆಪಿಆರ್‌ಸಿಆರ್‌ 01 ರಿಂದ 03: ಈರಣ್ಣ ರುದ್ರಾಕ್ಷಿ | Kannada Prabha

ಸಾರಾಂಶ

ಕನ್ನಡ ರಾಜ್ಯೋತ್ಸವದ ನಿಮಿತ್ತ ರಾಜ್ಯ ಸರ್ಕಾರ ಪ್ರಕಟಿಸಿರುವ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಜಿಲ್ಲೆಯ ಇಬ್ಬರು ಸಾಧಕರು ಭಾಜನರಾಗಿದ್ದು, ಜಾನಪದ ಕ್ಷೇತ್ರದಲ್ಲಿ ಸುದೀರ್ಘ ಸೇವೆಗೈದ ಈರಣ್ಣ ರುದ್ರಾಕ್ಷಿ ಅವರಿಗೆ ಅದೇ ರೀತಿ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆಯನ್ನು ಮಾಡಿರುವ ವೀರ ಹನುಮಾನ್ ಅವರನ್ನು ಗುರುತಿಸಿರುವ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಕನ್ನಡ ರಾಜ್ಯೋತ್ಸವದ ನಿಮಿತ್ತ ರಾಜ್ಯ ಸರ್ಕಾರ ಪ್ರಕಟಿಸಿರುವ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಜಿಲ್ಲೆಯ ಇಬ್ಬರು ಸಾಧಕರು ಭಾಜನರಾಗಿದ್ದು, ಜಾನಪದ ಕ್ಷೇತ್ರದಲ್ಲಿ ಸುದೀರ್ಘ ಸೇವೆಗೈದ ಈರಣ್ಣ ರುದ್ರಾಕ್ಷಿ ಅವರಿಗೆ ಅದೇ ರೀತಿ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆಯನ್ನು ಮಾಡಿರುವ ವೀರ ಹನುಮಾನ್ ಅವರನ್ನು ಗುರುತಿಸಿರುವ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಜಾನಪದ ಕ್ಷೇತ್ರದಲ್ಲಿ ಹಗಲುವೇಷ ಕಲಾವಿದರಾಗಿ ತಮ್ಮದೇ ಆದ ಕೊಡುಗೆ ನೀಡಿರುವ ಈರಣ್ಣ ರುದ್ರಾಕ್ಷಿ ಅವರು ಜಾನಪದ ಪರಂಪರೆ, ಕಲೆ ಮತ್ತು ಸಂಸ್ಕೃತಿಯ ಉಳಿವು ಹಾಗೂ ಬೆಳವಣಿಗೆಗೆ ಶ್ರಮಿಸಿದ್ದಾರೆ. ಮತ್ತೊಂದೆಡೆ, ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಬರಹ ಹಾಗೂ ಸಾಹಿತ್ಯಿಕ ಸೇವೆಯ ಮೂಲಕ ಗುರುತಿಸಿಕೊಂಡಿರುವ ವೀರ ಹನುಮಾನ್ ಅವರಿಗೆ ರಾಜ್ಯಮಟ್ಟದ ಗೌರವ ಲಭಿಸಿರುವುದು ಜಿಲ್ಲೆಯ ಹಿರಿಮೆ-ಗರಿಮೆಯನ್ನು ಇನ್ನಷ್ಟು ಹೆಚ್ಚಿಸುವಂತೆ ಮಾಡಿದೆ.

ಕಡುಬಡತನ, ಅಲೆಮಾರಿ ಬದುಕಿನ ಸವಾಲುಗಳ ನಡುವೆ ಕಲಾ ಸೇವೆ: ಜಿಲ್ಲೆ ದೇವದುರ್ಗದಲ್ಲಿ ನೆಲೆಸಿರುವ ಈರಣ್ಣ ರುದ್ರಾಕ್ಷಿ ಅವರು ಕಳೆದ ಐದು ದಶಕಗಳಿಂದ ಅಪರೂಪದ ಹಾಗೂ ನಶಿಸುತ್ತಿರುವ ಹಗಲುವೇಷ ಜಾನಪದ ಕಲೆಯನ್ನು ತಮ್ಮ ಜೀವನದ ಕಾಯಕವನ್ನಾಗಿ ಮಾಡಿಕೊಂಡು, ಕಡುಬಡತನ ಹಾಗೂ ಅಲೆಮಾರಿ ಬದುಕಿನ ಸವಾಲುಗಳ ನಡುವೆಯೂ ಕಲೆಯನ್ನೇ ಜೀವನಾಧಾರವನ್ನಾಗಿ ಮಾಡಿಕೊಂಡು ಜಾನಪದ ಸೇವೆ ಸಲ್ಲಿಸುತ್ತಿದ್ದಾರೆ.

ಪರಿಶಿಷ್ಟ ಜಾತಿಯ ಅಲೆಮಾರಿ ಬುಡ್ಗ ಜಂಗಮ ಸಮುದಾಯಕ್ಕೆ ಸೇರಿರುವ ಇವರು ಕೇವಲ 5ನೇ ತರಗತಿಯನ್ನು ಮಾತ್ರ ಓದಿಕೊಂಡಿದ್ದರು ಸಹ ಸಾಂಪ್ರದಾಯಿಕ ಕಲಾ ಪರಂಪರೆಯ ಹಗಲುವೇಷವನ್ನು ಆಧುನಿಕ ಕಾಲಘಟ್ಟದಲ್ಲೂ ನೈಜ ವೇಷಭೂಷಣ, ಆಂಗಿಕ-ವಾಚಿಕ ಅಭಿನಯ, ಜಾನಪದ ಗಾಯನ, ಹಾರ್ಮೋನಿಯಂ ವಾದನ ಮತ್ತು ಪೌರಾಣಿಕ ಕಥನವನ್ನು ಹಳ್ಳಿ-ಗ್ರಾಮಗಳ ಬೀದಿ ರಂಗಭೂಮಿಯಿಂದ ಹಿಡಿದು ರಾಜ್ಯ, ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಉತ್ಸವಗಳಷ್ಟೇ ಅಲ್ಲದೇ ಕರ್ನಾಟಕದ ಜೊತೆಗೆ ಹೊರ ರಾಜ್ಯಗಳಲ್ಲಿಯೂ ತಮ್ಮ ಕಲೆಯನ್ನು ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ. ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ನಾಟಕಗಳಲ್ಲಿ ನೂರಾರು ವೈವಿಧ್ಯಮಯ ಪಾತ್ರಗಳನ್ನು ಜೀವಂತವಾಗಿ ಪ್ರದರ್ಶಿಸಿದ ಹೆಗ್ಗಳಿಕೆ ಪಡೆದಿರುವ ಇವರು ಈರಣ್ಣ ರುದ್ರಾಕ್ಷಿ ಅವರು ಪ್ರಸ್ತುತ ದೇವದುರ್ಗದ ಶ್ರೀ ರುದ್ರಾಕ್ಷಿ ಹಗಲುವೇಷ ಕಲಾ ಸಂಸ್ಕೃತಿ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ.

----

ಪಡೆದ ಪ್ರಶಸ್ತಿಗಳು: ಪ್ರಸಕ್ತ ಸಾಲಿನಲ್ಲಿ ನಡೆದ ರಾಯಚೂರು ಜಿಲ್ಲಾ ಉತ್ಸವ ಪ್ರಶಸ್ತಿ ಜೊತೆಗೆ 2025 ರಲ್ಲಿ ರಾಷ್ಟ್ರ ಮಟ್ಟದ ಕಲಾ ರತ್ನ, 2024ರಲ್ಲಿ ಮಹಾಂತಶ್ರೀ, ಎಡದೊರೆ ನಾಡಿನ ಜಾನಪದ ಸಾಧಕರು, ಕರ್ನಾಟಕ ಜಾನಪದ ಪರಿಷತ್ತು ಪ್ರಶಸ್ತಿ, 2022ರಲ್ಲಿ ಮಹಿಳಾ ರಾಷ್ಟ್ರೀಯ ಕಲಾ ಸೇವಾ ರತ್ನ,2018 ರಲ್ಲಿ ಸುಗ್ಗಿ-ಹುಗ್ಗಿ, ರಾಜ್ಯ ಜಾನಪದ ಪ್ರವಂತ .2015 ರಲ್ಲಿ ಸಂಗೊಳ್ಳಿ ರಾಯಣ್ಣ ಉತ್ಸವ ಪ್ರಶಸ್ತಿ (ಬೆಳಗಾವಿ) 2014 ರಲ್ಲಿ ರಾಯಚೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಪ್ರೇರಣಾ ಉತ್ಸವ,ಕಿತ್ತೂರು ಉತ್ಸವ ಪ್ರಶಸ್ತಿ (ಬೆಳಗಾವಿ) 2011 ಮತ್ತು 2014 ರಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗಳು,ವಿಶ್ವ ಕನ್ನಡ ಸಮ್ಮೇಳನ ಗೌರವ ಪ್ರಶಸ್ತಿ,ಹಂಪಿ ಉತ್ಸವ ಗೌರವ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಇವರ ಮುಡಿಗೇರಿವೆ.

ಬಹುಮುಖ ಪ್ರತಿಭೆ ಸಾಹಿತಿ ವೀರ ಹನುಮಾನ್: ರಾಯಚೂರು:ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಕಷ್ಟು ಸೇವೆ ಸಲ್ಲಿಸಿರುವ ವೀರ ಹನುಮಾನ್‌ ಅವರು ಬಹುಮುಖ ಪ್ರತಿಭೆಯುಳ್ಳ ವ್ಯಕ್ತಿಯಾಗಿದ್ದಾರೆ. ರಾಯಚೂರು ಮೂಲದ ಇವರು 1955 ರಲ್ಲಿ ಜನ್ಮಿಸಿ, ಬಿಎ ಕಾನೂನು ಪದವಿ ಪಡೆದುಕೊಂಡ ಇವರು, ಮನೆತನದ ವೃತ್ತಿಯಾದ ಕಟ್ಟಡ ನಿರ್ಮಾಣ (ವಾಸ್ತುಶಿಲ್ಪದಲ್ಲಿ ಪರಿಣತಿ) ಅನೇಕ ಕಟ್ಟಡಗಳ ನಕಾಶೆ ರಚನೆ, ಪರಿವೀಕ್ಷಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಎಸ್ಎಫ್ಐ ಮತ್ತು ಡಿವೈಎಫ್ಐ, ಸಮುದಾಯದಲ್ಲಿ ಸಕ್ರಿಯರಾಗಿದ್ದರು. ಮುಂದೆ ವಿವಿಧ ಕ್ಷೇತ್ರಗಳಲ್ಲಿ ಅನೇಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ರಾಯಚೂರು ಶಿಕ್ಷಣ ಇಲಾಖೆಯ ಡಯಟ್ನಲ್ಲಿ ಅಧಿಕ್ಷರಾಗಿ ಸೇವೆ ಸಲ್ಲಿಸಿದರು. ಸಾಕ್ಷರತಾ ಆಂದೋಲನದಲ್ಲಿ ಲೇಖಕರಾಗಿ, ಸಂಯೋಜಕರಾಗಿ, ತರಬೇತುದಾರರಾಗಿ, ಉಪನ್ಯಾಸಕರಾಗಿ, ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

ಸಾಹಿತ್ಯ ರಚನೆ, ವಾಸ್ತುಶಿಲ್ಪ, ಚಿತ್ರಕಲೆ, ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಸುಮಾರು 25 ವರ್ಷಗಳಿಂದ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆಲಸ ಮಾಡುತ್ತಿದ್ದಾರೆ.

ಮಾನವ ಇತಿಹಾಸ ಮತ್ತು ಸಮಾಜ ವಿಕಾಸ, ಒಂದು ಹಳ್ಳಿಯ ಕತೆ, ಆದಾಯೋತ್ಪಾದನೆ ಪುಸ್ತಕ ಮಾಲೆ 1, 2ಎನ್ನುವ ಕೃತಿಗಳ ರಚನೆ, ಮೂಕದನಿ ಕವನ ಸಂಕಲನ, ಆತ್ಮಗರ್ಭ, ದಿವಿಸೀಮೆ, ಸತ್ಯಕ್ಕೆ ಇದೀಗ ಗ್ರಹಣ, ಬೆಳದಿಂಗಳು, ಪಾತರಗಿತ್ತಿ ಸೇರಿದಂತೆ ವಿವಿಧ ಹೈಕು ಸಂಕಲನಗಳು, ಮಡಿವಾಳ ಮಾಚಿದೇವ ಜೀವನ ಚರಿತ್ರೆ, ಧಮ್ಮಪದ ಪಾಲಿ ಸಂಸ್ಕೃತ ಕನ್ನಡ ಅನುವಾದಿತ ಕೃತಿ ಸೇರಿದಂತೆ ಅನೇಕ ಕೃತಿಗಳನ್ನು ರಚನೆಯಲ್ಲಿ ತೊಡಗಿದ್ದಾರೆ. ಅದರ ಜತೆಗೆ 11 ಸಂಪಾದಿತ ಕೃತಿಗಳನ್ನು ಹೊರತಂದಿದ್ದಾರೆ. ಎಂಟು ಕಥೆಗಳನ್ನು ಬರೆದಿದ್ದಾರೆ. ಇವರ ರಚನೆಯ ಚಲುವಿ ಎನ್ನುವ ಧಾರವಾಹಿ ದೂರದರ್ಶನದಲ್ಲಿ ಪ್ರಸಾರವಾಗಿತ್ತು. ನಾಟಕಗಳಲ್ಲೂ ಅಭಿನಯಿಸಿ ಸೈ ಎನಿಸಿಕೊಂಡ ವ್ಯಕ್ತಿತ್ವ ಇವರದ್ದಾಗಿದ್ದು, ರಾಯಚೂರಿನಲ್ಲಿ ಪ್ರಥಮ ಬಾರಿಗೆ ಚಿತ್ರಕಲಾ ಮಹಾವಿದ್ಯಾಲಯ ಆರಂಭಿಸಿದ ಹಿರಿಮೆಯನ್ನು ಇವರು ಹೊಂದಿದ್ದಾರೆ.

ನಿರಂತರವಾಗಿ ಸಾಹಿತ್ಯ, ಸಂಸ್ಕೃತಿ ಚಟುವಟಿಕೆಗಳಲ್ಲಿ ತಮ್ಮದೇ ಆದ ಸೇವೆ ಸಲ್ಲಿಸುತ್ತಿರುವ ಇವರು ಸದ್ಯ ರಾಯಚೂರಿನ ಐತಿಹಾಸಿಕ ಕೋಟೆಗಳ ಸಂರಕ್ಷಣೆ ಮತ್ತು ಅಧ್ಯಯನ ಸಮಿತಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಒಲಿದ ಪ್ರಶಸ್ತಿಗಳು: ವೀರ್ ಹನುಮಾನ್ ಅವರ ಸೇವೆ ಗುರುತಿಸಿ ಈಗಾಗಲೇ ಸಾಕಷ್ಟು ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ರತ್ನ, ಮಹಾಂತಪ್ರಿಯ, ಮಂತ್ರಾಲಯ ಮಠದಿಂದ ವಿಜಯೀಂದ್ರ ಅನುಗ್ರಹ ಪ್ರಶಸ್ತಿ, ದಮ್ಮಪದ ಗ್ರಂಥಕ್ಕೆ ಗುಲ್ಬರ್ಗ ವಿವಿಯಿಂದ ರಾಜ್ಯೋತ್ಸವ ಪ್ರಶಸ್ತಿಗಳು ಸೇರಿದಂತೆ ಅನೇಕ ಸಂಘ-ಸಂಸ್ಥೆಗಳು ಪ್ರಶಸ್ತಿಗಳು ಲಭಿಸಿವೆ. 2022ರಲ್ಲಿ ನಡೆದ 11 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಅಳಿವಿನ ಅಂಚಿನಲ್ಲಿರುವ ಅಲೆಮಾರಿಗಳ ಹಗಲುವೇಷ ಜಾನಪದ ಕಲೆಯನ್ನೇ ಐದು ದಶಕಗಳ ಕಾಲ ನಂಬಿಕೊಂಡಿದ್ದೇನೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಕಳೆದ ವರ್ಷ ಅರ್ಜಿ ಸಲ್ಲಿಸಲಾಗಿತ್ತು, ಆದರೆ ಆಯ್ಕೆಯಾಗಿರಲಿಲ್ಲ. ಈ ಬಾರಿ ಅರ್ಜಿ ಸಲ್ಲಿಸದಿದ್ದರೂ ಸಹ ರಾಜ್ಯ ಸರ್ಕಾರವು ಪ್ರಶಸ್ತಿಗೆ ನಮನ್ನು ಪರಿಗಣಿಸಿರುವುದು ಅಪಾರ ಸಂತೋಷ ನೀಡಿದೆ ಎಂದು ಈರಣ್ಣ ರುದ್ರಾಕ್ಷಿ ಹೇಳಿದರು.

ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವುದು ಖುಷಿಕೊಟ್ಟಿದೆ. ನಮ್ಮ ಭಾಗದಲ್ಲಿ ಸಾಹಿತ್ಯ ಕ್ಷೇತ್ರವನ್ನು ಗುರುತಿಸಿ, ಹೆಚ್ಚಿನ ಪ್ರೋತ್ಸಾಹ ನೀಡುವ ಕಾರ್ಯವಾಗಬೇಕಾಗಿದೆ. ನನಗೆ ಲಭಿಸಿರುವ ಪ್ರಶಸ್ತಿಯನ್ನು ಈ ಭಾಗದ ಸಾಹಿತಿಗಳಿಗೆ ಅರ್ಪಿಸುತ್ತೇನೆ ಎಂದು ವೀರ ಹನುಮಾನ್‌ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಡೆಯಾಜ್ಞೆ ಇದ್ದರೂ ಪೊಲೀಸರಿಂದ ಚಾರ್ಜ್‌ಶೀಟ್‌: ಹೈಕೋರ್ಟ್‌ ಗರಂ
ಪ್ರೀತಿಗೆ ಪೋಷಕರು ವಿರೋಧ: ಪ್ರೇಮಿಗಳಿಂದ ಆತ್ಮಹತ್ಯೆ ಯತ್ನ