ಸೋಮವಾರಪೇಟೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ

KannadaprabhaNewsNetwork |  
Published : May 30, 2025, 01:33 AM IST
ಸೋಮವಾರಪೇಟೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ | Kannada Prabha

ಸಾರಾಂಶ

ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಕನ್ನಡ ಸಾಹಿತ್ಯ ಪರಿಷತ್‌ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಟಿ.ಪಿ. ರಮೇಶ್‌ ಹೇಳಿದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಕನ್ನಡ ನಾಡು ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಕನ್ನಡ ಸಾಹಿತ್ಯ ಪರಿಷತ್ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಸಾಹಿತ್ಯ ಪರಿಷತ್‌ನ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ, ಸೋಮವಾರಪೇಟೆ ತಾಲೂಕು ಮತ್ತು ಹೋಬಳಿ ಘಟಕದ ವತಿಯಿಂದ ಬುಧವಾರ ಸಂಜೆ ಪಟ್ಟಣದ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ಸಾಹಿತ್ಯ ಪರಿಷತ್ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

1915ರಲ್ಲಿ ಮೈಸೂರು ಅರಸರಾಗಿದ್ದ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 5 ಸಾವಿರ ರು. ಹಣವನ್ನು ದಾನವಾಗಿ ನೀಡಿ, ಕರ್ನಾಟಕ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ ಮಾಡಿದರು. ಮುಂದೆ 1935ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಎಂದು ನಾಮಕರಣವಾಯಿತು. ಕೊಡಗು ಸಾಹಿತ್ಯ ಕೃಷಿಯಲ್ಲಿ ಬೇರೆ ಜಿಲ್ಲೆಗಳಿಗೆ ಸಮಾನವಾಗಿ ಬೆಳೆದಿದೆ. ಮುಂದೆ ಯುವಜನರಲ್ಲಿ ಕನ್ನಡ ಭಾಷೆಯ ಆಸಕ್ತಿಯನ್ನು ಬೆಳೆಸುವ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ ಮಾಡುತ್ತಿದೆ. ಮುಂದಿನ ಪೀಳಿಗೆ ಕನ್ನಡ ಕಟ್ಟುವ ಜವಾಬ್ದಾರಿಯನ್ನು ಹೊರಬೇಕಿದೆ. ಕೊಡಗಿನಲ್ಲಿ 41 ದತ್ತಿ ಸ್ಥಾಪನೆ ಮಾಡಲಾಗಿದೆ. ವರ್ಷವಿಡಿ ಕನ್ನಡ ಭಾಷಾ ಬೆಳವಣಿಗೆಯ ಬಗ್ಗೆ ಉಪನ್ಯಾಸ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು. ಕನ್ನಡಿಗರಿಗೆ ಕನ್ನಡ ಅನ್ನ ಕೊಡುವ ಭಾಷೆಯಾಗಬೇಕು. ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉನ್ನತ ಹುದ್ದೆಗಳು ಸಿಗುವಂತಾಗಬೇಕು. ಈ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲೇಬೇಕು ಎಂದು ಆಶಿಸಿದರು.

ಸಾಹಿತ್ಯ ಪರಿಷತ್ ನಿರ್ದೇಶಕರುಗಳು ಹಾಗು ಸಹಕಾರ ಸಂಘಗಳು ಚುನಾವಣೆಯಲ್ಲಿ ಗೆಲುವು ಸಾಧಿಸಿದ, ಶಾಂತಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಈ.ಜಯೇಂದ್ರ, ಚೌಡ್ಲು ಸಹಕಾರ ಸಂಘದ ಅಧ್ಯಕ್ಷ ಕೆ.ಟಿ.ಪರಮೇಶ್, ಮಡಿಕೇರಿ ದಿವ್ಯಜ್ಯೋತಿ ಸಹಕಾರ ಸಂಘದ ನಿರ್ದೇಶಕರುಗಳಾದ ಎಸ್.ಎಂ.ಡಿಸಿಲ್ವಾ, ಜೋಕಿಂವಾಸ್, ಡಿಸಿಸಿ ಬ್ಯಾಂಕ್ ನಿರ್ದೇಶಕಿ ಜಲಜಾಶೇಖರ್, ಸೋಮವಾರಪೇಟೆ ಸಹಕಾರ ಸಂಘದ ನಿರ್ದೇಶಕರಾದ ಪಿ.ಕೆ.ರವಿ, ಬಿ.ಕೆ.ಉದಯಕುಮಾರ್, ಹಂಡ್ಲಿ ಸಹಕಾರ ಸಂಘದ ನಿರ್ದೇಶಕ ಮೋಹನ್ ಅವರನ್ನು ಸನ್ಮಾನಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಮಾಜಿ ಅಧ್ಯಕ್ಷ ಎಚ್.ಎಂ.ಶಿವಾನಂದ ನಿಧನರಾಗಿರುವ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಚಿತ್ರನಟ ಕಮಲಹಸನ್ ಅವರ ಕನ್ನಡ ಭಾಷೆ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ಸಭೆಯಲ್ಲಿ ಖಂಡಿಸಲಾಯಿತು. ಮೈಸೂರು ಸ್ಯಾಂಡಲ್ ಸೋಪಿನ ರಾಯಭಾರಿಯನ್ನಾಗಿ ಕನ್ನಡಿಗರನ್ನು ನೇಮಿಸಬೇಕು ಎಂದು ಸರ್ಕಾರವನ್ನು ಸಭೆ ಒತ್ತಾಯಿಸಿತು.

ವೇದಿಕೆಯಲ್ಲಿ ಪರಿಷತ್‌ನ ತಾಲೂಕು ಅಧ್ಯಕ್ಷ ಎಸ್.ಡಿ.ವಿಜೇತ್, ಮಾಜಿ ಅಧ್ಯಕ್ಷ ಜೆ.ಸಿ.ಶೇಖರ್, ಗೌರವ ಕಾರ್ಯದರ್ಶಿಗಳಾದ ಜ್ಯೋತಿ ಅರುಣ್, ಎ.ಪಿ.ವೀರರಾಜು, ಖಚಾಂಚಿ ಕೆ.ಪಿ.ದಿನೇಶ್, ಜಿಲ್ಲಾ ನಿರ್ದೇಶಕ ಶ್ರೀಧರ್ ಹೂವಲ್ಲಿ ಇದ್ದರು.

PREV

Recommended Stories

ಡಾ.ಪ್ರಭಾಕರ್‌ ಕೋರೆ 78ನೇ ಜನ್ಮದಿನ ಅರ್ಥಪೂರ್ಣ ಆಚರಣೆ
ರಾಜಕೀಯ ದುರುದ್ದೇಶಕ್ಕೆ ದೇವಾಲಯಗಳ ಬಳಕೆ ಸಲ್ಲದು