ಮಂಡ್ಯ : 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳ - 9 ಉಪ ಸಮಿತಿಗಳಿಗೆ ಸಂಚಾಲಕರ ನೇಮಕ

KannadaprabhaNewsNetwork | Updated : Sep 12 2024, 09:14 AM IST

ಸಾರಾಂಶ

87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಮೆರವಣಿಗೆ ಸಮಿತಿಯು ಉಪ ಸಮಿತಿಗಳಿಗೆ ಕಾರ್ಯ ಚಟುವಟಿಕೆಗಳು, ಅಂದಾಜು ವೆಚ್ಚ ಮತ್ತು ಶಿಫಾರಸುಗಳ ವರದಿ ಸಲ್ಲಿಸುವಂತೆ ಸೂಚಿಸಿದೆ. ಸಮ್ಮೇಳನದ ಮೆರವಣಿಗೆಯನ್ನು ಯಶಸ್ವಿಗೊಳಿಸಲು 9 ಉಪ ಸಮಿತಿಗಳನ್ನು ರಚಿಸಲಾಗಿದೆ.

 ಮಂಡ್ಯ :  ಮೆರವಣಿಗೆ ಸಮಿತಿಯಡಿ ರಚಿಸಿರುವ ಉಪ ಸಮಿತಿಗಳು ತಮ್ಮ ವ್ಯಾಪ್ತಿ ಕಾರ್ಯ ಚಟುವಟಿಕೆಗಳು, ಅಂದಾಜು ವೆಚ್ಚದ ಮಾಹಿತಿಯೊಂದಿಗೆ ಸ್ಪಷ್ಟ ಅಭಿಪ್ರಾಯ, ಶಿಫಾರಸ್ಸು ಒಳಗೊಂಡ ವರದಿ ಸಲ್ಲಿಸುವಂತೆ ಮೆರವಣಿಗೆ ಸಮಿತಿ ಅಧ್ಯಕ್ಷರೂ ಆದ ವಿಧಾನ ಪರಿಷತ್ತಿನ ಶಾಸಕ ಮಧು ಜಿ.ಮಾದೇಗೌಡ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಮೆರವಣಿಗೆ ಸಮಿತಿ ಹಾಗೂ ಉಪ ಸಮಿತಿಗಳ ಸಭೆ ನಡೆಸಿ ಮಾತನಾಡಿ, ಉಪ ಸಮಿತಿಗಳು ಅಗತ್ಯ ಚಟುವಟಿಕೆ ಗುರುತಿಸಿ ಅಂದಾಜು ವೆಚ್ಚ ಒಳಗೊಂಡ ವರದಿ ಮಂಡಿಸಬೇಕು. ವರದಿಯಲ್ಲಿನ ಅಭಿಪ್ರಾಯ ಮತ್ತು ಶಿಫಾರಸುಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಕನ್ನಡ ಹಬ್ಬವಾದ ಸಮ್ಮೇಳನವು ಪಕ್ಷಾತೀತ ಮತ್ತು ಜಾತ್ಯತೀತವಾಗಿದೆ. ಕಲಾತಂಡಗಳ ಆಯ್ಕೆ, ಸ್ತಬ್ಧ ಚಿತ್ರಗಳ ನಿರ್ಮಾಣ ಸೇರಿದಂತೆ ಪ್ರತಿ ಹಂತದಲ್ಲೂ ಇದು ಅನ್ವಯವಾಗಬೇಕು. ಎಲ್ಲೂ ಅಪಸ್ವರ ಕೇಳಿಬರಬಾರದು. ಈ ಬಗ್ಗೆ ಉಪ ಸಮಿತಿಗಳು ಎಚ್ಚರವಹಿಸಬೇಕು ಎಂದರು.

ಸಮ್ಮೇಳನದ ಮೊದಲ ದಿನ ಮೆರವಣಿಗೆ ಬೆಳಗ್ಗೆಯೇ ಆರಂಭವಾಗುವುದರಿಂದ ಹೆಚ್ಚು ಜನರ ಭಾಗವಹಿಸುವಿಕೆ ಮುಖ್ಯ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಕೂಡ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಆಗಲು ಉಪ ಸಮಿತಿಗಳು ಕಾರ್ಯ ನಿರ್ವಹಿಸಬೇಕು ಎಂದರು.

ಸಭೆಯಲ್ಲಿ ಸಮ್ಮೇಳನದ ಸಮನ್ವಯ ಸಮಿತಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ಮೆರವಣಿಗೆ ಸಮಿತಿ ಉಪಾಧ್ಯಕ್ಷ ಡಿ.ಪಿ.ಸ್ವಾಮಿ, ಸಂಚಾಲಕ ಕಾರಸವಾಡಿ ಮಹದೇವು, ಸದಸ್ಯ ಕಾರ್ಯದರ್ಶಿಯೂ ಆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಂದೀಶ್, ಕಸಾಪ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಸಮಿತಿಯ ಸದಸ್ಯರು ಹಾಜರಿದ್ದರು.

ಉಪ ಸಮಿತಿಗಳಿಗೆ ಸಂಚಾಲಕರ ನೇಮಕ:

ಮೆರವಣಿಗೆ ಸಮಿತಿಯ ಪ್ರಕಾರ್ಯಗಳು ಸುಗಮವಾಗಿ ನಡೆಯಲು 9 ಉಪ ಸಮಿತಿ ರಚಿಸಿ ಸಂಚಾಲಕರನ್ನು ನೇಮಿಸಲಾಯಿತು.

ಕಲಾತಂಡ ಆಯ್ಕೆ ಉಪ ಸಮಿತಿ (ಸಂಚಾಲಕರು- ಕಾರಸವಾಡಿ ಮಹದೇವು), ಸ್ತಬ್ಧಚಿತ್ರ ಉಪ ಸಮಿತಿ (ಕೀಲಾರ ಕೃಷ್ಣೇಗೌಡ), ಪೂರ್ಣಕುಂಭ ಉಪ ಸಮಿತಿ (ರಾಜಮೂರ್ತಿ), ಸ್ಕೌಟ್ಸ್ ಮತ್ತು ಗೈಡ್ಸ್ ಉಪ ಸಮಿತಿ (ಜಿ.ಪಿ.ಭಕ್ತವತ್ಸಲ), ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ಎನ್.ಸಿ.ಸಿ. ತಂಡಗಳ ಸಂಯೋಜನಾ ಉಪ ಸಮಿತಿ (ಲಿಂಗರಾಜು), ಎತ್ತಿನಗಾಡಿ ಮತ್ತು ಆನೆಗಳ ಸಂಯೋಜನಾ ಉಪ ಸಮಿತಿ (ಶಿವಶಂಕರ್ ಸಂಪಳ್ಳಿ), ಆಟೋರಿಕ್ಷಾ ಮೆರವಣಿಗೆ ಉಪ ಸಮಿತಿ (ಟಿ.ಕೃಷ್ಣ), ಶಾಲಾ-ಕಾಲೇಜುಗಳ ಸಮನ್ವಯ ಉಪ ಸಮಿತಿ (ಅನಿಲ್ ಕುಮಾರ್) ಹಾಗೂ ಸಂಘ-ಸಂಸ್ಥೆಗಳ ಸಮನ್ವಯ ಉಪ ಸಮಿತಿ (ಎಲ್.ಸಂದೇಶ್).

ಡಿಸಿ ಅವರೊಂದಿಗೆ ಸಭೆ:

ಈ ಸಭೆಗೂ ಮೊದಲು, ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಯಶಸ್ವಿಗೊಳಿಸುವ ಸಂಬಂಧ ಮೆರವಣಿಗೆ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕುಮಾರ ಅವರೊಂದಿಗೆ ಜಿಪಂ ಕಚೇರಿಯಲ್ಲಿ ಸಭೆ ನಡೆಸಿದರು.

Share this article