ರಸಗೊಬ್ಬರ ಲಭ್ಯತೆ ಬಗ್ಗೆ ವಿಪಕ್ಷಗಳಿಂದ ಗೊಂದಲ ಸೃಷ್ಟಿ: ಸಚಿವ ಚಲುವರಾಯಸ್ವಾಮಿ

KannadaprabhaNewsNetwork |  
Published : Aug 16, 2025, 12:00 AM IST
೧ಕೆಎಂಎನ್‌ಡಿ-೧ಮಂಡ್ಯದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸಂದೇಶ ಭಾಷಣ ಮಾಡಿದರು. | Kannada Prabha

ಸಾರಾಂಶ

ವಿಶ್ವೇಶ್ವರಯ್ಯ ನಾಲೆ ಎರಡನೇ ಹಂತದ ಆಧುನೀಕರಣ ಪ್ಯಾಕೇಜ್-೧ ಕಾಮಗಾರಿ, ಮದ್ದೂರು ತಾಲೂಕಿನಲ್ಲಿ ಬರುವ ಕೆಮ್ಮಣ್ಣುನಾಲೆ, ಲೋಕಸರ ಶಾಖಾ ನಾಲೆ, ಹೆಬ್ಬಕವಾಡಿ ಶಾಖಾ ನಾಲೆ ಕಾಮಗಾರಿ, ನಿಡಘಟ್ಟ ಶಾಖಾ ನಾಲೆ ಆಧುನೀಕರಣ ಕಾಮಗಾರಿ ಹಾಗೂ ಸಂಪರ್ಕ ನಾಲೆ ಅಭಿವೃದ್ಧಿ ಕಾಮಗಾರಿಗಳನ್ನು ಒಟ್ಟು ೬೬೭ ಕೋಟಿ ರು. ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಸಗೊಬ್ಬರ ಲಭ್ಯತೆಯ ಬಗ್ಗೆ ವಿರೋಧ ಪಕ್ಷಗಳು ಇಲ್ಲದ ಗೊಂದಲಗಳನ್ನು ಅನಗತ್ಯವಾಗಿ ಸೃಷ್ಟಿಸುತ್ತಿವೆ. ಆದರೆ, ರಸಗೊಬ್ಬರವನ್ನು ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಶುಕ್ರವಾರ ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ೭೯ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ಮುಂಗಾರಿಗೆ ಒಟ್ಟು ೨೮, ೬೦೭ ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳ ದಾಸ್ತಾನು ಲಭ್ಯವಿದೆ. ಇದರಲ್ಲಿ ಯೂರಿಯಾ ಒಟ್ಟು ೪,೪೨೧ ಮೆಟ್ರಿಕ್ ಟನ್ ಲಭ್ಯವಿದೆ. ಆದ್ದರಿಂದ ರೈತರಿಗೆ ಯಾವುದೇ ತೊಂದರೆಯಾಗದಂತೆ ರಸಗೊಬ್ಬರ ಪೂರೈಸಲು ಕ್ರಮವಹಿಸುವುದಾಗಿ ಹೇಳಿದರು.

ವಿಶ್ವೇಶ್ವರಯ್ಯ ನಾಲೆ ಎರಡನೇ ಹಂತದ ಆಧುನೀಕರಣ ಪ್ಯಾಕೇಜ್-೧ ಕಾಮಗಾರಿ, ಮದ್ದೂರು ತಾಲೂಕಿನಲ್ಲಿ ಬರುವ ಕೆಮ್ಮಣ್ಣುನಾಲೆ, ಲೋಕಸರ ಶಾಖಾ ನಾಲೆ, ಹೆಬ್ಬಕವಾಡಿ ಶಾಖಾ ನಾಲೆ ಕಾಮಗಾರಿ, ನಿಡಘಟ್ಟ ಶಾಖಾ ನಾಲೆ ಆಧುನೀಕರಣ ಕಾಮಗಾರಿ ಹಾಗೂ ಸಂಪರ್ಕ ನಾಲೆ ಅಭಿವೃದ್ಧಿ ಕಾಮಗಾರಿಗಳನ್ನು ಒಟ್ಟು ೬೬೭ ಕೋಟಿ ರು. ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯ ೫ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ಅರೆಯುವ ಕಾರ್ಯ ಪ್ರಾರಂಭಿಸಲಾಗಿದೆ. ಇದುವರೆಗೂ ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆಗಳಲ್ಲಿ ೫,೧೩,೯೨೧ ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿರುತ್ತದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ರೈತರ ಪಹಣಿಗಳಿಗೆ ಆಧಾರ್ ಜೋಡಣೆ ಮಾಡುವ ಸಂಬಂಧ ಈಗಾಗಲೇ, ೨೩ ಲಕ್ಷ ಪಹಣಿಗಳ ಪೈಕಿ ಸುಮಾರು ೧೮ ಲಕ್ಷ ಪಹಣಿಗಳಿಗೆ ಆಧಾರ್ ಜೋಡಣೆ ಮಾಡಲಾಗಿರುತ್ತದೆ. ಹಾಗೂ ೧೧೬ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿ ಅಧಿಸೂಚನೆ ಹೊರಡಿಸಿದ್ದು, ಈಗಾಗಲೇ ೩೪೮೪ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.

ಕಂದಾಯ ದಾಖಲೆಗಳನ್ನು ಸಂರಕ್ಷಿಸುವ ದೃಷ್ಟಿಯಿಂದ ಭೂ ಸುರಕ್ಷಾ ಯೋಜನೆಯಡಿ ಕಂದಾಯ ದಾಖಲೆಗಳ ಗಣಕೀಕರಣವನ್ನು ಜಾರಿಗೊಳಿಸಿದ್ದು, ಈಗಾಗಲೇ ಜಿಲ್ಲೆಯಾದ್ಯಂತ ಒಟ್ಟು ೧.೨೦ ಕೋಟಿ ಪುಟಗಳನ್ನು ತಂತ್ರಾಶದಲ್ಲಿ ಸ್ಕ್ಯಾನ್ ಮಾಡಿ ಅಪ್ರೋಡ್ ಮಾಡಿ ಗಣಕೀಕರಣ ದಾಖಲೆಗಳನ್ನು ನೀಡಲಾಗುತ್ತಿದೆ ಎಂದರು.

ಮಳವಳ್ಳಿ ತಾಲೂಕಿನ ತಾಲೂಕು ಕಚೇರಿಗೆ ೧೬.೦೦ ಕೋಟಿ ರು. ಮೊತ್ತದಲ್ಲಿ ನೂತನವಾಗಿ ಪ್ರಜಾಸೌಧ ನಿರ್ಮಿಸಲು ನಮ್ಮ ಸರ್ಕಾರದಿಂದ ಈಗಾಗಲೇ ಅನುಮೋದನೆ ನೀಡಲಾಗಿದ್ದು, ಶೀಘ್ರವೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ಪಿ.ರವಿಕುಮಾರ್, ವಿಧಾನಪರಿಷತ್ ಶಾಸಕ ದಿನೇಶ್ ಗೂಳಿಗೌಡ, ಮುಡಾ ಅಧ್ಯಕ್ಷ ನಯೀಮ್, ನಗರಸಭೆ ಅಧ್ಯಕ್ಷ ಪ್ರಕಾಶ್, ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ, ಜಿಲ್ಲಾಧಿಕಾರಿ ಡಾ.ಕುಮಾರ್, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಉಪ ವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ವಿಶ್ವನಾಥ್ ಇತರರಿದ್ದರು.

ಪಥಸಂಚಲನದಲ್ಲಿ ೩೮ ತಂಡಗಳು:

ಸ್ವಾತಂತ್ರ್ಯೋತ್ಸವ ಪ್ರಯುಕ್ತ ನಡೆದ ಪಥಸಂಚಲನ ಕಾರ್ಯಕ್ರಮದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ನಾಗರಿಕ ಪುರುಷ ಪೊಲೀಸ್ ಪಡೆ, ನಾಗರಿಕ ಮಹಿಳಾ ಪೊಲೀಸ್ ಪಡೆ, ಪುರುಷರ ಗೃಹರಕ್ಷಕ ದಳ, ಅಬಕಾರಿ ದಳ ಹಾಗೂ ಅಗ್ನಿಶಾಮಕ ದಳದ ತಂಡಗಳು, ವಿವಿಧ ಶಾಲಾ- ಕಾಲೇಜುಗಳ ಎನ್‌ಸಿಸಿ ಹಾಗೂ ಹಲವು ಶಾಲೆಗಳ ವಿದ್ಯಾರ್ಥಿನಿಯರು ಸೇರಿ ೩೮ ತಂಡಗಳು ಭಾಗವಹಿಸಿದ್ದವು.

ಸಾಂಸ್ಕೃತಿಕ ಕಾರ್ಯಕ್ರಮ:

ಕಾರ್ಮಲ್ ಪ್ರೌಢ ಶಾಲೆ, ರೋಟರಿ ಪ್ರೌಢಶಾಲೆ, ಅಭಿನವ ಭಾರತಿ ವಿದ್ಯಾಕೇಂದ್ರ, ಅನಿಕೇತನ ಪ್ರೌಢಶಾಲೆ ಹಾಗೂ ಮಾಂಡವ್ಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು.

ಪ್ರತಿಭಾ ಪುರಸ್ಕಾರ:

೨೦೨೫- ೨೬ ನೇ ಸಾಲಿನಲ್ಲಿ ಮೌಲಾನಾ ಅಬ್ದುಲ್ ಕಲಾಂ ಅಜಾದ್ ಪ್ರತಿಭಾ ಪುರಸ್ಕಾರ ಯೋಜನೆಯಡಿ ಅತಿ ಹೆಚ್ವು ಅಂಕ ಪಡೆದ ಎಸ್ಸೆಸ್ಸೆಲ್ಸಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಾದ ಜುಬಿಯಾ ಖಾನಂ, ಅದಿಬಾ ಫಾತೀಮಾ, ಅಭಿಗೈಲ್ ಗ್ರೈಸ್, ರೋಹಿತ್ ಹಾಗೂ ಕೆ.ಗೌತಮ್ ಅವರಿಗೆ ೧೦ ಸಾವಿರ ರು. ನಗದು ಹಾಗೂ ಪಿಯುಸಿ ವಿದ್ಯಾರ್ಥಿನಿ ಶಫೀಯಾ ಬಾನು ಅವರಿಗೆ ೧೫ ಸಾವಿರ ರು. ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಅಂಗಾಂಗ ದಾನ ಮಾಡಿದ ಶ್ರೀರಂಗಪಟ್ಟಣ ತಾಲೂಕಿನ ಕಾರ್ತಿಕ್ ಹಾಗೂ ಕೆ.ಆರ್.ಪೇಟೆ ತಾಲೂಕಿನ ಎನ್.ರಘು ಕುಟುಂಬಸ್ಥರನ್ನು ಗೌರವಿಸಲಾಯಿತು.

ಲ್ಯಾಪ್ ಟಾಪ್ ವಿತರಣೆ:

ಮಂಡ್ಯ ದಕ್ಷಿಣ ಹಾಗೂ ಉತ್ತರ ವಲಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಎಚ್.ಕೆ. ವಿನಯ್, ವೇದಿಕಾ, ಎಸ್.ಹರ್ಷಿತಾ, ಕೆ.ದಿಶಾ, ಜೆ.ಹರ್ಷಿತಾ, ಲಕ್ಷ್ಮೀ, ಕವಿತಾ, ಮಮತಾ ಹಾಗೂ ಸಂಜನಾ ಅವರಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಲಾಯಿತು

ಪಥಸಂಚಲನ ವಿಜೇತರು:

ಇಲಾಖಾ ತಂಡಗಳಲ್ಲಿ ಅಗ್ನಿಶಾಮಕ ದಳ ಪ್ರಥಮ, ಅಬಕಾರಿ ಇಲಾಖೆ ದ್ವಿತೀಯ, ಗೃಹರಕ್ಷಕ ದಳ ತೃತೀಯ, ಎನ್‌ಸಿಸಿ ವಿಭಾಗದಲ್ಲಿ ಮಂಡ್ಯ ವಿಶ್ವವಿದ್ಯಾಲಯದ ಎನ್‌ಸಿಸಿ ತಂಡ ಪ್ರಥಮ, ಪಿಇಎಸ್ ಕಾಲೇಜಿನ ಎನ್‌ಸಿಸಿ ತಂಡ ದ್ವಿತೀಯ, ಅನಿಕೇತನ ಪ್ರೌಢಶಾಲೆ ಎನ್‌ಸಿಸಿ ತಂಡ ತೃತೀಯ ಬಹುಮಾನ ಪಡೆದಿದೆ. ಸ್ಕೌಟ್ಸ್ ಗೈಡ್ಸ್ ವಿಭಾಗದಲ್ಲಿ ಸೇಂಟ್ ಜೋಸೆಫ್ ಬಾಲಕಿಯರ ಪ್ರೌಢಶಾಲೆ ಪ್ರಥಮ, ಪೊಲೀಸ್ ಕಾಲೋನಿ ಪ್ರೌಢಶಾಲೆ ದ್ವಿತೀಯ ಬಹುಮಾನ ಪಡೆದಿದೆ.

ಪಿಯು ಕಾಲೇಜು ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಪಿಇಎಸ್ ಪ್ರೌಢಶಾಲೆಯ ಬಾಲಕರ ತಂಡ ಪ್ರಥಮ, ಸೇಂಟ್ ಜೋಸೆಫ್ ಪ್ರೌಢಶಾಲೆಯ ಬಾಲಕಿಯರ ತಂಡ ದ್ವಿತೀಯ, ಕಾರ್ಮೆಲ್ ಕಾನ್ವೆಂಟ್ ಪ್ರೌಢಶಾಲೆಯ ಬಾಲಕಿಯರ ತಂಡ ತೃತೀಯ ಹಾಗೂ ಎಂಇಎಸ್ ಪ್ರೌಢಶಾಲೆಯ ಬಾಲಕಿಯರ ತಂಡ ಸಮಾಧಾನಕರ ಬಹುಮಾನ ಪಡೆದಿದೆ.

ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕಾರ್ಮೆಲ್ ಕಾನ್ವೆಂಟ್ ಬಾಲಕಿಯರ ಇಂಗ್ಲಿಷ್ ಮಾಧ್ಯಮ ತಂಡ ಪ್ರಥಮ, ಸೇಂಟ್ ಜೋಸೆಫ್ ಪ್ರಾಥಮಿಕ ಶಾಲೆಯ ಬಾಲಕಿಯರ ತಂಡ ದ್ವಿತೀಯ ಹಾಗೂ ಅಭಿನವ ಭಾರತಿ ಬಾಲಕರ ತಂಡ ತೃತೀಯ ಬಹುಮಾನ ಪಡೆದಿದೆ.

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ