ಪ್ಯಾರಿಸ್‌ ಒಲಂಪಿಕ್ಸ್‌ನಲ್ಲಿ ಭಾರತಕ್ಕೆ ಕೀರ್ತಿ ತಂದ ಕನ್ನಡತಿ ಅರ್ಚನಾ ಕಾಮತ್‌

KannadaprabhaNewsNetwork | Published : Aug 8, 2024 1:33 AM

ಸಾರಾಂಶ

ಟೇಬಲ್‌ ಟೆನಿಸ್‌ನಲ್ಲಿ ಭಾರತ ಇದೇ ಪ್ರಥಮ: ಇದುವರೆಗಿನ ಒಲಂಪಿಕ್ಸ್‌ನಲ್ಲಿ ಟೇಬಲ್‌ ಟೆನಿಸ್‌ನಲ್ಲಿ ಭಾರತ ತಂಡ ಪ್ರವೇಶ ಪಡೆದಿರುವುದು ಒಲಂಪಿಕ್ಸ್‌ ಇತಿಹಾಸದಲ್ಲೇ ಇದು ಪ್ರಥಮ.

ಕನ್ನಡಪ್ರಭ ವಾರ್ತೆ ಮಂಗಳೂರು

ಪ್ಯಾರಿಸ್ ಒಲಂಪಿಕ್ಸ್‌ನ ಟೇಬಲ್‌ ಟೆನಿಸ್‌ ಮಿಕ್ಸ್ಡ್‌ ಟೀಮ್‌ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಕನ್ನಡತಿ ಅರ್ಚನಾ ಕಾಮತ್‌ ಕರ್ನಾಟಕದ ಕರಾವಳಿ ಮೂಲದವರಾಗಿದ್ದು, ಇಡೀ ದೇಶದ ಗಮನ ಸೆಳೆದಿದ್ದಾರೆ.

ಮೂಲತಃ ಕರಾವಳಿಯ ಮಂಗಳೂರು ನಿವಾಸಿಯಾದ ಅರ್ಚನಾ ಕಾಮತ್‌ ಅವರು ಒಲಂಪಿಕ್ಸ್‌ನ ಬಾಲಕಿಯರ ತಂಡದಲ್ಲಿ ಟೇಬಲ್‌ ಟೆನಿಸ್‌ ಮಿಕ್ಸ್ಡ್‌ಟೀಮ್‌ ವಿಭಾಗದ ಮೊದಲ ಸುತ್ತಿನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ನಂತರ ಬುಧವಾರ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲಿ ಜರ್ಮನಿ ಎದುರು ತಂಡ ಸೋಲು ಕಂಡರೂ ಕ್ವಾರ್ಟರ್ ಫೈನಲ್‌ ಪ್ರವೇಶಿಸಿರುವುದು ಇದೇ ಮೊದಲು ಎಂಬ ಹೆಗ್ಗಳಿಕೆಗೆ ಭಾರತ ತಂಡ ಪಾತ್ರವಾಗಿದೆ.

ಟೇಬಲ್‌ ಟೆನಿಸ್‌ನಲ್ಲಿ ಭಾರತ ಇದೇ ಪ್ರಥಮ: ಇದುವರೆಗಿನ ಒಲಂಪಿಕ್ಸ್‌ನಲ್ಲಿ ಟೇಬಲ್‌ ಟೆನಿಸ್‌ನಲ್ಲಿ ಭಾರತ ತಂಡ ಪ್ರವೇಶ ಪಡೆದಿರುವುದು ಒಲಂಪಿಕ್ಸ್‌ ಇತಿಹಾಸದಲ್ಲೇ ಇದು ಪ್ರಥಮ. ಅದರಲ್ಲೂ ಬಾಲಕ ಹಾಗೂ ಬಾಲಕಿಯರ ತಂಡ ಮೊದಲ ಸುತ್ತಿನಿಂದ ಕ್ವಾರ್ಟರ್‌ ಫೈನಲ್‌ ವರೆಗೆ ತಲುಪಿರುವುದು ಕೂಡ ಇತಿಹಾಸವೇ.ಈ ಟೇಬಲ್‌ ಟೆನಿಸ್‌ ಮಿಕ್ಸ್ಡ್‌ಟೀಮ್‌ ಎಂದರೆ ಒಂದು ಟೀಮ್‌ನಲ್ಲಿ ಮೂರು ಮಂದಿ ಆಟಗಾರರು ಇರುತ್ತಾರೆ. ಅದರಲ್ಲಿ ಕನ್ನಡತಿ ಅರ್ಚನಾ ಕೂಡ ಒಬ್ಬರು.

ಮೂಲ ಮಂಗಳೂರು:

ಅರ್ಚನಾ ಕಾಮತ್‌ ಅವರ ಮಂಗಳೂರಿನ ಕೊಂಚಾಡಿ ಪದವಿನಂಗಡಿ. ಈಕೆಯ ತಂದೆ ಡಾ.ಗಿರೀಶ್ ಕಾಮತ್‌ ಹಾಗೂ ತಾಯಿ ಡಾ.ಅನುರಾಧ ಕಾಮತ್‌ ಇಬ್ಬರೂ ಕಣ್ಣಿನ ತಜ್ಞರು. ಇವರ ಪುತ್ರ ಅಭಿನವ್‌ ಅಮೆರಿಕದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದಾರೆ. ಪುತ್ರಿ ಅರ್ಚನಾ ಕಾಮತ್‌ ಜನಿಸಿದ್ದು ಇಂಗ್ಲೆಂಡ್‌ನಲ್ಲಿ. ವ್ಯಾಸಂಗ ಬೆಂಗಳೂರಲ್ಲಿ. ಕ್ರೀಡಾ ಕೋಟಾದಡಿ ಪಿಯುಸಿ ಮುಗಿಸಿ ಪದವಿ ಪ್ರವೇಶ ವೇಳೆ ಇಂಡಿಯನ್ ಆಯಿಲ್‌ ಕಾರ್ಪೊರೇಷನ್‌ ಲಿಮಿಟೆಡ್‌(ಐಒಸಿಎಲ್‌) ಕಂಪನಿಗೆ ಉದ್ಯೋಗಿಯಾಗಿ ಸೇರ್ಪಡೆಯಾದರು. ಕಳೆದ ಐದು ವರ್ಷಗಳಿಂದ ಐಒಸಿಎಲ್‌ ಬೆಂಗಳೂರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಜು.10ರಂದು ಜರ್ಮನಿಯಲ್ಲಿ ನೋಯ್ಡಾದ ಅಂಶುಲ್‌ ಗಾರ್ಗ್‌ ಕೋಚ್‌ ನೆರವಿನಲ್ಲಿ ತರಬೇತಿ ಪಡೆದ ಅರ್ಚನಾ ಕಾಮತ್‌, ಜು.21ರಂದು ಪ್ಯಾರಿಸ್‌ ಒಲಂಪಿಕ್ಸ್‌ಗೆ ತೆರಳಿದ್ದರು. ಒಲಂಪಿಕ್ಸ್‌ ಹಿನ್ನೆಲೆಯಲ್ಲಿ ಕಳೆದ ಮೇ ತಿಂಗಳಲ್ಲಿ ಅರ್ಚನಾ ಕಾಮತ್‌, ಕುಟುಂಬ ಮಂಗಳೂರಿಗೆ ಆಗಮಿಸಿ ದೇವಸ್ಥಾನಗಳಿಗೆ ಭೇಟಿ ನೀಡಿತ್ತಲ್ಲದೆ, ಕುಟುಂಬದ ಹಿರಿಯರ ಆಶೀರ್ವಾದ ಪಡೆದಿದ್ದರು.

ಅರ್ಚನಾ ಕಾಮತ್‌ ಸಾಧನೆ: ಅರ್ಚನಾ ಕಾಮತ್‌ ಅವರು ಇದುವರೆಗೆ 18 ವರ್ಷವರೆಗಿನ ಟೇಬಲ್ ಟೆನಿಸ್‌ನಲ್ಲಿ ಯುವ ರಾಷ್ಟ್ರೀಯ ಚಾಂಪಿಯನ್, ಏಷಿಯನ್ ಜೂನಿಯರ್ ಚಾಂಪಿಯನ್‌ಶಿಪ್ (ಟೀಮ್) , ಕಾಮನ್‌ವೆಲ್ತ್‌ ಚಾಂಪಿಯನ್‌ಶಿಪ್ - ಮಿಕ್ಸ್ಡ್ ಡಬಲ್ಸ್ ಮತ್ತು ಟೀಮ್ ಚಾಂಪಿಯನ್, WTT ಕಂಟೆಂಡರ್ ಲಾಗೋಸ್ - ಮಹಿಳಾ ಡಬಲ್ಸ್ ಚಾಂಪಿಯನ್, WTT ಕಂಟೆಂಡರ್ ಮುಸ್ಕಟ್ - ಮಹಿಳಾ ಡಬಲ್ಸ್ ರನ್ನರ್-ಅಪ್, ವಿಶ್ವ ಚಾಂಪಿಯನ್‌ಶಿಪ್ - ಮಹಿಳಾ ಡಬಲ್ಸ್ ಕ್ವಾರ್ಟರ್ ಫೈನಲ್ ಸಾಧನೆ ಮಾಡಿದ್ದಾರೆ. ಪ್ರಸಕ್ತ ಒಲಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿಗೆ ಪಾತ್ರರಾಗಿದ್ದಾರೆ.

Share this article