ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಜಾರಿ ತರುವ ಮಸೂದೆ ಮುಂದೂಡಿಕೆ ಭಾರೀ ಆಕ್ರೋಶ - ಹೆಚ್ಚಾದ ಕಿಚ್ಚು

KannadaprabhaNewsNetwork | Updated : Jul 19 2024, 05:42 AM IST

ಸಾರಾಂಶ

 ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಜಾರಿಗೆ ತರುವ ಮಸೂದೆ ಜಾರಿ ಪ್ರಕ್ರಿಯೆ ಮುಂದೂಡಿರುವ  ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ, ರಾಜ್ಯ ರೈತ ಸಂಘ ಸಂಘ ಸೇರಿ ಹಲವು ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶಗೊಂಡಿದ್ದು, ಮಸೂದೆ ಜಾರಿ ಮಾಡದಿದ್ದರೆ ಕನ್ನಡಿಗರ ದಂಗೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿವೆ.

 ಬೆಂಗಳೂರು :  ಉದ್ಯಮಿಗಳ ಆಕ್ಷೇಪದ ಹಿನ್ನೆಲೆಯಲ್ಲಿ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಜಾರಿಗೆ ತರುವ ಮಸೂದೆ ಜಾರಿ ಪ್ರಕ್ರಿಯೆ ಮುಂದೂಡಿರುವ ರಾಜ್ಯ ಸರ್ಕಾರದ ನಿಲುವು ಮತ್ತು ಮಸೂದೆಗೆ ವಿರೋಧಿಸಿದ ಉದ್ಯಮಿಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ, ರಾಜ್ಯ ರೈತ ಸಂಘ ಸಂಘ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶಗೊಂಡಿದ್ದು, ಮಸೂದೆ ಜಾರಿ ಮಾಡದಿದ್ದರೆ ಕನ್ನಡಿಗರ ದಂಗೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿವೆ.

ಇದೇ ವೇಳೆ ರಾಜ್ಯ ಸರ್ಕಾರ ಉದ್ಯಮಿಗಳ ಲಾಬಿಗೆ ಮಣಿಯದೇ ಮಸೂದೆ ಜಾರಿ ಮಾಡಿದರೆ ನಾಡಿನ ಎಲ್ಲ ಕನ್ನಡಿಗರು ಜೊತೆಗೆ ನಿಲ್ಲಲಿದ್ದಾರೆ ಎಂದು ಕನ್ನಡಪರ ಸಂಘಟನೆಗಳ ನಾಯಕರು, ಮುಖಂಡರು ಅಭಯ ನೀಡಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ವಿಧೇಯಕವನ್ನು ಮತ್ತೆ ಸಚಿವ ಸಂಪುಟದಲ್ಲಿ ಅನುಮೋದಿಸಬೇಕು. ಮುಂದಿನ 15 ದಿನಗಳೊಳಗೆ ವಿಧೇಯಕ ಜಾರಿಗೊಳಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಕನ್ನಡಿಗರು ದಂಗೆ ಏಳುವಂತೆ ಕರೆ ನೀಡಬೇಕಾಗುತ್ತದೆ ಎಚ್ಚರಿಸಿದರು.

ಕಾರ್ಪೊರೇಟ್‌ ಲಾಬಿಯ ಒತ್ತಡಕ್ಕೆ ಮಣಿದು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದಿದ್ದ ವಿಧೇಯಕವನ್ನು ತಡೆಹಿಡಿದಿರುವುದು ಕನ್ನಡಿಗರ ಪಾಲಿಗೆ ಕರಾಳ ನಿರ್ಧಾರವಾಗಿದೆ. ಸರ್ಕಾರ ಇಂತಹ ಶಕ್ತಿಗಳ ಎದುರು ಮಂಡಿಯೂರಿ ನಿಲ್ಲುವುದು ಶೋಚನೀಯ. ಇಂತಹ ಶಕ್ತಿಗಳಿಗೆ ಮುಖ್ಯಮಂತ್ರಿಯವರು ಅಂಜಬಾರದು. ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ತೆಗೆಯಬಾರದು ಎಂದರು.

ಮುಖ್ಯಮಂತ್ರಿಯವರು ಮುಂದಿನ ಕ್ಯಾಬಿನೆಟ್‌ ಸಭೆಯಲ್ಲೇ ಈ ವಿಧೇಯಕ ಕುರಿತು ಕೂಲಂಕುಶ ಚರ್ಚೆ ನಡೆಸಿ ಜಾರಿಗೆ ತರಬೇಕು. ಕಾಯ್ದೆ ಮತ್ತೆ ನೆನೆಗುದಿಗೆ ಬಿದ್ದರೆ ರಾಜ್ಯ ಸರ್ಕಾರ ಮತ್ತು ಕಾಯ್ದೆಗೆ ಅಡ್ಡಿಯಾಗಿರುವ ದುಷ್ಟಶಕ್ತಿಗಳ ವಿರುದ್ಧ ತೀವ್ರ ಸ್ವರೂಪದ ಹೋರಾಟ ನಡೆಸುತ್ತೇವೆ. ಈ ಕುರಿತು ಬುಧವಾರ (ಜುಲೈ 24) ರಾಜ್ಯಮಟ್ಟದ ಸಭೆ ಕರೆದಿದ್ದು, ಹೋರಾಟದ ರೂಪರೇಷೆ ತೀರ್ಮಾನಿಸುತ್ತೇವೆ ಎಂದು ತಿಳಿಸಿದರು.

ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರು, ರಾಜ್ಯ ಸರ್ಕಾರ ಮಸೂದೆ ತರಲು ಮುಂದಾಗಿದ್ದು ಸರಿಯಾದ ಕ್ರಮ. ಉದ್ಯಮಿಗಳಿಗೆ ಹೆದರಿ ಹಿಂದೇಟು ಹಾಕುತ್ತಿರುವುದು ಸರ್ಕಾರ ದುರ್ಬಲವಾಗಿದೆ ಎಂಬುದಕ್ಕೆ ಸಾಕ್ಷಿ. ಇಷ್ಟೊಂದು ಹಣ ಸಂಪಾದಿಸುವ ಉದ್ಯಮಿಗಳಿಗೆ ನಾಡಿನ ನೆಲದವರು ಬೇಡವಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಪ್ರತಿಭಟನೆ:

ಕೆಲ ಕನ್ನಡ ಸಂಘಟನೆಗಳು ಸರ್ಕಾರದ ಈ ನಿಲುವಿನ ವಿರುದ್ಧ ಗುರುವಾರವೇ ರಸ್ತೆಗಿಳಿದು ಹೋರಾಟ ನಡೆಸಿದವು. ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ನೇತೃತ್ವದಲ್ಲಿ ಕನ್ನಡಪರ ಹೋರಾಟಗಾರ ಸಾ.ರಾ.ಗೋವಿಂದು, ಶಿವರಾಮೇಗೌಡ ಸೇರಿದಂತೆ ಮತ್ತಿತರ ಕನ್ನಡಪರ ಕಾರ್ಯಕರ್ತರು ಮಲ್ಲೇಶ್ವರದ ಕುವೆಂಪು ವೃತ್ತದಲ್ಲಿ ಪ್ರತಿಭಟನೆ ನಡೆಸಿ ಉದ್ಯಮಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಜಯಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಬಿ.ಎಂ.ಜಗದೀಶ್‌, ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ.ಚನ್ನೇಗೌಡ ಹಾಗೂ ಕನ್ನಡ ಒಕ್ಕೂಟಗಳು ಉದ್ಯಮಿಗಳ ಧೋರಣೆ ವಿರುದ್ಧ ಮತ್ತು ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದವು.

ಇಂದು ಪ್ರತಿಕೃತಿ ದಹನ:

ಕನ್ನಡಿಗರಿಗೆ ಖಾಸಗಿ ವಲಯದ ಸಂಸ್ಥೆಗಳ ಉದ್ಯೋಗ ಮೀಸಲಾತಿ ನೀಡುವ ವಿಧೇಯಕವನ್ನು ವಿರೋಧಿಸುತ್ತಿರುವ ಉದ್ಯಮಿಗಳ ವಿರುದ್ಧ ಶುಕ್ರವಾರ (ಜುಲೈ 19) ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಲು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ ಶೆಟ್ಟಿ ಬಣ) ನಿರ್ಧರಿಸಿದೆ. ಪ್ರತಿಭಟನೆಯಲ್ಲಿ ಖಾಸಗಿ ಕಂಪನಿ ಉದ್ಯಮಿಗಳ ಭೂತ ದಹನ ಮಾಡುವುದಾಗಿ ಕರವೇ ರಾಜ್ಯ ಅಧ್ಯಕ್ಷ ಪ್ರವೀಣ್‌ಕುಮಾರ್ ಶೆಟ್ಟಿ ಘೋಷಿಸಿದ್ದಾರೆ.

Share this article