ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ ನೀಡಿಕೆ, ಶಿಕ್ಷಣದಲ್ಲೂ ಕನ್ನಡಿಗರೆಂದರೆ ತಾತ್ಸಾರ

KannadaprabhaNewsNetwork | Updated : Oct 28 2024, 07:53 AM IST

ಸಾರಾಂಶ

ರಾಜ್ಯದಲ್ಲಿ ಉದ್ಯಮ ಸ್ಥಾಪಿಸುವ ಬಹುರಾಷ್ಟ್ರೀಯ ಕಂಪನಿಗಳು ಕನ್ನಡಿಗರಿಗೆ ಉದ್ಯೋಗ, ಸೂಕ್ತ ಮೀಸಲು ಕೊಡುತ್ತಿಲ್ಲ.

ಮಯೂರ್‌ ಹೆಗಡೆ

 ಬೆಂಗಳೂರು : ‘ಕನ್ನಡಿಗರ ನೆಲ-ಜಲ ಪಡೆದು ಅವರಿಗೆ ಉದ್ಯೋಗ ನೀಡದಿರುವುದು ಆತ್ಮಸಾಕ್ಷಿಗೆ ಚುಚ್ಚಿದಂತೆ. ಹಾಗೆಂದು ಜವಾನ ಉದ್ಯೋಗಗಳಿಗೆ ಅವರನ್ನು ಸೀಮಿತ ಮಾಡುವುದಲ್ಲ. ಬ್ರಿಟಿಷ್‌ ಅಧಿಕಾರಿ ರಾಬರ್ಟ್‌ ಕ್ಲೈವ್‌ ಸ್ಥಳೀಯರನ್ನು ಗ್ರೂಪ್‌ ‘ಸಿ’ ಹುದ್ದೆಗೆ ನೇಮಿಸುತ್ತಿದ್ದರು. ಅದೇ ರೀತಿ ನೀವೂ ಮಾಡಬೇಡಿ.’

ಇದು ಕರ್ನಾಟಕ ಹೈಕೋರ್ಟ್ ಕಿಡಿನುಡಿ. ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಬಳಿಯ ಹಾರ್ಡ್‌ವೇರ್‌ ಪಾರ್ಕ್‌ನಲ್ಲಿ ಜಾಗ ಪಡೆದು ಅಧಿಕಾರಿ ಹುದ್ದೆಗೆ ಕನ್ನಡಿಗರನ್ನು ನೇಮಿಸುವ ಷರತ್ತು ಉಲ್ಲಂಘಿಸಿದ್ದ ಐಡಿಬಿಐ ಬ್ಯಾಂಕ್‌ ಪ್ರಕರಣದ ವಿಚಾರಣೆ ವೇಳೆ ಹೈಕೋರ್ಟ್‌ ಈ ರೀತಿ ಬ್ಯಾಂಕ್‌ನ ಕಿವಿ ಹಿಂಡಿತ್ತು.

ಹೈಕೋರ್ಟ್‌ನ ಈ ಮಾತು ಕೇವಲ ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಅನ್ವಯವಾಗುವುದಿಲ್ಲ. ರಾಜ್ಯದಿಂದ ಎಲ್ಲ ರೀತಿಯ ವಿನಾಯಿತಿ, ರಿಯಾಯಿತಿ ಪಡೆದು ನೆಲೆಯೂರಿರುವ ಬಹುತೇಕ ಕಂಪನಿ, ಸಂಸ್ಥೆಗಳಲ್ಲೂ ಕನ್ನಡಿಗರೆಂದರೆ ಒಂದು ರೀತಿಯಲ್ಲಿ ತಾತ್ಸಾರ. ಆಯಕಟ್ಟಿನ ಹುದ್ದೆಯಲ್ಲಿರುವವರು ತಮ್ಮ ರಾಜ್ಯದವರನ್ನು ಹೇಗಾದರೂ ಮಾಡಿ ಭರ್ತಿ ಮಾಡಿಕೊಳ್ಳುವ ಕೆಲಸವನ್ನು ಮಾಡುತ್ತಾರೆ.

ಕನ್ನಡಿಗರ ನೆಲ-ಜಲ, ತೆರಿಗೆ ವಿನಾಯಿತಿ ಪಡೆದು ರಾಜ್ಯದಲ್ಲಿ ಉದ್ಯಮ ಸ್ಥಾಪಿಸುವ ಬಹುರಾಷ್ಟ್ರೀಯ ಕಂಪನಿಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಕನ್ನಡಿಗರಿಗೆ ಉದ್ಯೋಗ, ಸೂಕ್ತ ಮೀಸಲು ಕೊಡುತ್ತಿಲ್ಲ. ಹುದ್ದೆ ಕೊಟ್ಟರೂ ಅವು ಕೆಳಹಂತದ ‘ಸಿ’, ‘ಡಿ’ ಗ್ರೂಪ್‌ಗೆ ಸೀಮಿತವಾಗಿರುತ್ತಿವೆ. ಮೇಲಿನ ಹುದ್ದೆಗಳು ಗಗನಕುಸುಮವಾಗಿರುವಂತೆ ಕುತಂತ್ರ ಮಾಡುತ್ತಿವೆ. ಖಾಸಗಿ ಕ್ಷೇತ್ರದಲ್ಲಿ ಉದ್ಯೋಗದಲ್ಲಿ ಮೀಸಲು ಪಡೆಯುವ ಕನ್ನಡಿಗರ ಹಕ್ಕು ಇನ್ನೂ ಕನಸಾಗೇ ಉಳಿದಿದೆ. ಕೇಂದ್ರ ಸರ್ಕಾರದ ಅಧೀನದ ಶಿಕ್ಷಣ ಸಂಸ್ಥೆಗಳಲ್ಲೂ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ.ಎಚ್‌ಎಎಲ್‌ ಮೇಲ್ಮಟ್ಟದ ಹುದ್ದೆ ಸಿಗುತ್ತಿಲ್ಲ:

ಈಚೆಗೆ ಬೆಂಗಳೂರಿನ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ ನಿಶ್ಚಿತ ಅವಧಿಗೆ (ಟೆನ್ಯೂರ್‌ ಬೇಸಿಸ್‌) ಎಲ್‌ಸಿಎ ತೇಜಸ್‌, ಎಂಆರ್‌ಒ ವಿಭಾಗ, ದುರಸ್ತಿ ವಿಭಾಗ, ಏರ್‌ಕ್ರಾಫ್ಟ್‌ ಹಾಗೂ ಎಆರ್‌ಡಿಸಿ ವಿಭಾಗಕ್ಕೆ ಮಾಡಿಕೊಂಡ 561 ನೌಕರರ ನೇಮಕಾತಿಯಲ್ಲಿ 350ಕ್ಕೂ ಹೆಚ್ಚಿನ ಹುದ್ದೆ ಹೊರರಾಜ್ಯದವರ ಪಾಲಾಯಿತು. ಪ್ರಸ್ತುತ ಎಚ್‌ಎಎಲ್‌ನಲ್ಲಿ ಶೇ.80 ರಷ್ಟು ಕೆಳಹುದ್ದೆಗಳಲ್ಲಿ ಕನ್ನಡಿಗರಿದ್ದಾರೆ. ಅದೇ ಮೇಲ್ಮಟ್ಟದ ಹುದ್ದೆಗಳಲ್ಲಿ ಶೇ. 10ರಷ್ಟೂ ಕನ್ನಡಿಗರಿಲ್ಲ.

ಎಚ್‌ಎಎಲ್‌ನಲ್ಲಿರುವ 18 ವಿಭಾಗಗಳ ಪೈಕಿ 2 ಹೊರತುಪಡಿಸಿ ಉಳಿದೆಲ್ಲ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರು ಪರರಾಜ್ಯದವರು ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ನೈಋತ್ಯ ರೈಲ್ವೇ ಕರೆದಿದ್ದ ನಾನ್‌ ಗೆಜೆಟೆಡ್‌ನ ಸುಮಾರು 7 ಸಾವಿರ ಹುದ್ದೆಗಳಲ್ಲಿ ಕನ್ನಡಿಗರ ಪಾಲಿಗೆ ದಕ್ಕಿದ್ದು ನೂರಾರು ಹುದ್ದೆಗಳು ಮಾತ್ರ. ಇಲ್ಲಿಯೂ ಸಿ ಮತ್ತು ಡಿ ಹಂತದ ಹುದ್ದೆಗಳಲ್ಲೇ ಕನ್ನಡಿಗರು ತೃಪ್ತಿ ಪಡುವಂತಾಗಿದೆ.

ಇದೇ ಪರಿಸ್ಥಿತಿ ಬಿಇಎಂಎಲ್‌, ಬಿಎಚ್‌ಇಎಲ್‌ಗಳಲ್ಲೂ ಇದೆ. ಅಖಿಲ ಭಾರತ ಮಟ್ಟದಲ್ಲಿ ಪರೀಕ್ಷೆ ನಡೆಯುವುದು ಹಾಗೂ ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಹಿಂದಿ ಭಾಷೆಯಲ್ಲಿ ನೀಡುವ ಮೂಲಕ ಉತ್ತರ ಭಾರತೀಯರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂಬ ಆರೋಪವಿದೆ. ಕನ್ನಡಿಗರು ನಿರ್ಣಯ ಕೈಗೊಳ್ಳುವ ಸ್ಥಾನಕ್ಕೇರುವ ತನಕ ಈ ಸಮಸ್ಯೆ ತಪ್ಪಿದ್ದಲ್ಲ ಎಂದು ಎಚ್‌ಎಎಲ್‌ ಕೇಂದ್ರೀಯ ಕನ್ನಡ ಸಂಘದ ಅಧ್ಯಕ್ಷ ರಾಜೇಶ್‌ ಡಿ. ಹೇಳುತ್ತಾರೆ.ಶಿಕ್ಷಣ ಕ್ಷೇತ್ರದ್ದೂ ಇದೇ ಕಥೆ:

ಉದ್ಯೋಗದ್ದು ಈ ಕಥೆಯಾದರೆ, ಇನ್ನು ಶಿಕ್ಷಣದ ವಿಚಾರದಲ್ಲಿ ಇನ್ನೊಂದು ಸಂಗತಿಯಿದೆ. ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (ಎನ್ಎಲ್ಎಸ್ಐಯು) ದೇಶದ ಇತರ ರಾಜ್ಯಗಳಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಶೇ.50ರಷ್ಟು ಮೀಸಲಾತಿ ನೀಡುತ್ತಿದೆ. ಆದರೆ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 23 ಎಕರೆ ಪಡೆದಿರುವ ಎನ್ಎಲ್ಎಸ್ಐಯು ಸ್ಥಳೀಯ ವಿದ್ಯಾರ್ಥಿಗಳಿಗೆ ಶೇ. 25ರಷ್ಟು ಮಾತ್ರ ಮೀಸಲು ನೀಡುತ್ತಿದೆ.

ಇದು ಇನ್ನೊಂದು ಬಗೆಯ ಮೋಸವನ್ನೂ ಒಳಗೊಂಡಿದೆ. ಮೆರಿಟ್‌ ಮೇಲೆ ಸೀಟು ಪಡೆಯುತ್ತಿರುವ ವಿದ್ಯಾರ್ಥಿಗಳನ್ನೂ ಇದೇ ಶೇ. 25ರಷ್ಟು ಮೀಸಲಾತಿ ಒಳಗೇ ಎನ್ಎಲ್ಎಸ್ಐಯು ಸೇರಿಸುತ್ತಿದೆ. ಇದರಿಂದ ಹಲವು ಸೀಟುಗಳು ಕನ್ನಡಿಗರ ಕೈ ತಪ್ಪುತ್ತಿದೆ. ಇದೀಗ ಪುನಃ 7 ಎಕರೆಯನ್ನು ನೀಡುವಂತೆ ಎನ್ಎಲ್ಎಸ್ಐಯ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಕೋರಿದೆ.

ಕರ್ನಾಟಕದ ವಿದ್ಯಾರ್ಥಿಗಳಿಗೆ ಶೇ.50ರಷ್ಟು ಮೀಸಲಾತಿ ಖಾತ್ರಿಪಡಿಸದೆ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಗೆ ಯಾವುದೇ ಭೂಮಿ ಅಥವಾ ಆರ್ಥಿಕ ಸಹಾಯವನ್ನು ನೀಡದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಬೆಂಗಳೂರು ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ ಅವರಿಗೆ ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ. ರಂಗನಾಥ ಮನವಿ ಮಾಡಿದ್ದಾರೆ. ಕನ್ನಡಿಗರನ್ನು ಸಜ್ಜುಗೊಳಿಸಿ:

ಕೆಐಎ ಬಳಿ ಸುಮಾರು 650 ಎಕರೆಯನ್ನು ವಿಶೇಷ ಆರ್ಥಿಕ ವಲಯದಡಿ ಏರೋಸ್ಪೇಸ್ ಕಂಪನಿಗೆ ನೀಡಲಾಗುತ್ತಿದೆ. ಒಂದು ವೇಳೆ ಇಷ್ಟು ಹೊತ್ತಿಗೆ ಕನ್ನಡಿಗರಿಗೆ ಖಾಸಗಿಯಲ್ಲಿ ಉದ್ಯೋಗ ನೀಡುವ ಮೀಸಲಾತಿಯೂ ಜಾರಿಯಾಯ್ತು ಎಂದಿಟ್ಟುಕೊಳ್ಳಿ. ಆಗ ಎಷ್ಟು ಕನ್ನಡಿಗರು ಇಲ್ಲಿ ಹುದ್ದೆ ಅಥವಾ ಮೇಲಿನ ಹುದ್ದೆಗೇರಲು ಶಕ್ತರಿದ್ದಾರೆ ಎಂಬ ಪ್ರಶ್ನೆಯೂ ಬರುತ್ತದೆ. ಹೀಗಾಗಿ ಐಟಿ-ಬಿಟಿ, ಉತ್ಪಾದನಾ ವಲಯ, ಸೇವಾ ವಲಯದಲ್ಲಿ ನಮ್ಮವರು ಮೇಲ್ಮಟ್ಟದ ಹುದ್ದೆ ಪಡೆಯುವಂತಾಗಬೇಕು. ಕೌಶಲ್ಯಾಭಿವೃದ್ಧಿ ಇಲಾಖೆ ನಾಮ್‌ಕೇ ವಾಸ್ತೆ ಎಂಬಂತೆ ಕೆಲಸ ಮಾಡದೆ ಐಟಿ ಕ್ಷೇತ್ರದ ಸಮನ್ವಯದೊಂದಿಗೆ ಕನ್ನಡಿಗರನ್ನು ತರಬೇತುಗೊಳಿಸುವ ಕೆಲಸ ಆಗಬೇಕು. ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಬೇಕು ಎಂದು ಕನ್ನಡಪರ ಹೋರಾಟಗಾರ ಅರುಣ್‌ ಜಾವಗಲ್‌ ಹೇಳುತ್ತಾರೆ.ಉದ್ಯೋಗ ವಿನಿಮಯ ಕೇಂದ್ರ ನಾಮ್‌ಕೇವಾಸ್ತೆ:

ರಾಜ್ಯದಲ್ಲಿನ ಉದ್ಯೋಗ ವಿನಿಮಯ ಕೇಂದ್ರಗಳು ಕೇವಲ ಹೆಸರಿಗಷ್ಟೆ ಇದೆ ಎಂಬಂತಿದೆ. ಹಿಂದೆ ಮೇಲ್ಮಟ್ಟದ ತಾಂತ್ರಿಕ ಹುದ್ದೆಗಳಿಂದ ಹಿಡಿದು ಕೆಳಹಂತದ ಉದ್ಯೋಗಕ್ಕೂ ಈ ವಿನಿಮಯ ಕೇಂದ್ರ ಉದ್ಯೋಗಾಕಾಂಕ್ಷಿಗಳ ನೆರವಿಗೆ ಬರುತ್ತಿತ್ತು. ಆದರೆ, ಪ್ರಸ್ತುತ ಇವು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಕನ್ನಡಪರ ಹೋರಾಟಗಾರರು ಆಕ್ಷೇಪಿಸಿದ್ದಾರೆ.

Share this article