ಕನ್ನಡಪ್ರಭ ವಾರ್ತೆ ಕೋಲಾರಕನ್ನಡ ಕಾರ್ಯಕ್ರಮಗಳಿಗೆ ಕನ್ನಡ ಭವನ ಉಚಿತವಾಗಿ ಅಥವಾ ಕನಿಷ್ಠ ಶುಲ್ಕ ಪಡೆಯುವ ಮೂಲಕ ನೀಡಿ ಪ್ರೋತ್ಸಾಹಿಸಬೇಕು. ಈ ಸಂಬಂಧವಾಗಿ ಜಿಲ್ಲಾಡಳಿತದೊಂದಿಗೆ ಮಾತನಾಡುವುದಾಗಿ ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಭರವಸೆ ನೀಡಿದರು.ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ರಕ್ಷಣಾ ವೇದಿಕೆಯಿಂದ ೬೯ನೇ ಕನ್ನಡರಾಜ್ಯೋತ್ಸವದ ಅಂಗವಾಗಿ ಕೋಲಾರ ಕನ್ನಡೋತ್ಸವ ಸಾಂಸ್ಕ್ರತಿಕ ಸಂಭ್ರಮ ಮತ್ತು ನಗರದ ಸ್ವಚ್ಚತಾ ಸೇನಾನಿಗಳಾದ ೩೫೦ ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡ ಪರ ಹೋರಾಟ
ಕನ್ನಡ ಪರ ಸಂಘಟನೆಗಳು ಕನ್ನಡ ಭವನ ಸದ್ಬಳಿಸಿಕೊಳ್ಳಬೇಕೆಂದ ಅವರು, ಗಡಿಭಾಗವಾದ ಕೋಲಾರದಲ್ಲಿ ಕನ್ನಡ ಪರ ಸಂಘಟನೆಯಾಗಿ ಹೋರಾಟಗಳು ಮಾಡದಿದ್ದರೆ ಕೋಲಾರವು ಸಹ ಮತ್ತೊಂದು ಬೆಳಗಾವಿಯಾಗುತ್ತಿತ್ತು. ನಾವುಗಳು ವಿದ್ಯಾರ್ಥಿ ದೆಸೆಯಲ್ಲಿ ಡಾ.ರಾಜಕುಮಾರ್ ಅಭಿಮಾನಿಗಳಾಗಿ ಕನ್ನಡ ಪರ ಹೋರಾಟಗಳಲ್ಲಿ ತೊಡಗಿಸಿ ಕೊಂಡಿದ್ದ ನೆನಪುಗಳನ್ನು ಹಂಚಿಕೊಂಡರು.ಕೇಂದ್ರ-ರಾಜ್ಯ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿರುವ ಯಾವುದೇ ಉದ್ದಿಮೆಗಳಾದರೂ ಕರ್ನಾಟಕದಲ್ಲಿ ಸ್ಥಾಪನೆಯಾದರೂ ಅಲ್ಲಿ ಕನ್ನಡವೇ ಸಾರ್ವಭೌಮತ್ವ ಹೂಂದಿದ್ದು ಉದ್ಯೋಗದಲ್ಲಿ ಕನ್ನಡಿಗರಿಗೆ ಪ್ರಥಮ ಆದ್ಯತೆ ನೀಡುವಂತಾಗಬೇಕು. ಇದಕ್ಕೆ ನಮ್ಮ ಸಂಪೂರ್ಣವಾಗಿ ಬೆಂಬಲವಿದೆ ಎಂದು ಸರ್ಕಾರವನ್ನು ಆಗ್ರಹಿಸಿದರು.ಕರವೇ ಹೋರಾಟಕ್ಕೆ ಶ್ಲಾಘನೆಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಕನ್ನಡ ಪರ ಚಟುವಟಿಕೆಗಳ ಜೊತೆಯಲ್ಲಿ ಪೌರ ಕಾರ್ಮಿಕರನ್ನು ಗುರುತಿಸಿ ಗೌರವಿಸುವಂತ ಸಾಮಾಜಿಕ ಕಾಳಜಿಯುಳ್ಳ ಕ.ರ.ವೇ ಅಭಿನಂದನಾರ್ಹ. ಬೆಳಗಾವಿಯ ಎಂ.ಇ.ಎಸ್ ಉಪಟಳ ವಿರುದ್ದ ಕ.ರ.ವೇ ಸೆಟೆದು ನಿಂತು ಹೋರಾಟಗಳ ಹಿನ್ನೆಲೆಯಲ್ಲಿ ಕನ್ನಡ ಕಾಣುವಂತಾಗಿದೆ ಎಂದರು.ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗಿ ಸುವರ್ಣ ಭವನ ನಿರ್ಮಿಸಿದರೆ, ಯಡಿಯೂರಪ್ಪರ ಅವಧಿಯಲ್ಲಿ ಉದ್ಘಾಟನಾ ಸಮಾರಂಭ ನೆರವೇರಿತು. ಕನ್ನಡ ಭಾಷೆಯ ಉಳಿವಿಗಾಗಿ ಪಕ್ಷತೀತವಾಗಿ, ಧರ್ಮತೀತವಾಗಿ ಎಲ್ಲಾ ಮುಖ್ಯಮಂತ್ರಿ ಗಳು ಬೆಂಬಲಿಸಿರುವುದನ್ನು ಕಾಣಬಹುದಾಗಿದೆ ಎಂದರು.ನಾಮಫಲಕದಲ್ಲಿ ಕನ್ನಡ ಕಡ್ಡಾಯ
ವಿಶೇಷವಾಗಿ ಸಿಎಂ ಸಿದ್ದರಾಮಯ್ಯನವರು ಕನ್ನಡ ಪರ ಒಂದು ಹೆಜ್ಜೆ ಮುಂದಿರುವ ಕನ್ನಡದ ಬದ್ದತೆ ಉಳ್ಳವರಾಗಿ ನಾಮ ಫಲಕಗಳು ಶೇ.೬೦ ಕನ್ನಡದಲ್ಲಿರಬೇಕೆಂಬ ಸರ್ಕಾರದ ಆದೇಶ ಜಾರಿ ಮಾಡಿದ್ದಾರೆ. ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತಾಗಭೇಕೆಂದ ಅವರು ತಾವು ಕನ್ನಡ ಪಕ್ಷ ಹಾಗೂ ಇತರೆ ಕನ್ನಡ ಪರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿರುವುದನ್ನು ನೆನಪಿಸಿಕೊಂಡರು.ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ದೇಶದ ಜನತೆಗೆ ಕರ್ನಾಟಕ, ಬೆಂಗಳೂರು ಬೇಕಾಗಿದೆ, ಯಾಕೆಂದರೆ ಶಾಂತಿ ಪ್ರಿಯರು ಎಂಬ ಭಾವನೆ. ಆದರೆ ನಮ್ಮನವರಲ್ಲಿ ಇಂಗ್ಲಿಷ್ ವ್ಯಾಮೋಹದಿಂದ ಕನ್ನಡ ಭಾಷೆ ಬಳಕೆದಾರರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ಸಂಗೀತಾ, ಕೆಯುಡಿಎ ಅಧ್ಯಕ್ಷ ಮಹಮದ್ ಹನೀಫ್, ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷ ನಾಗಾನಂದ ಕೆಂಪರಾಜ್, ಬೆಂಗಳೂರು ಉತ್ತರ ವಿವಿ ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ನಾಗನಾಳ ಸೋಮಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ, ಟಿಎಪಿಸಿಎಂಎಸ್ ಅಧ್ಯಕ್ಷ ವಿ.ರಾಮು, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮೀ, ಸಮಾಜ ಸೇವಕ ಪಲ್ಲವಿಮಣಿ, ಕರವೇ ಜಿಲ್ಲಾಧ್ಯಕ್ಷ ಮೇಡಿಹಾಳ ರಾಘವೇಂದ್ರ, ಪದಾಧಿಕಾರಿಗಳಾದ ಲತಾಬಾಯಿ ಮಡಿಕಾರ್, ಎಂ.ಎಸ್.ಶ್ರೀನಿವಾಸ್ ಇದ್ದರು.