ಕನ್ನಡ ಮಾತನಾಡಲು ಹಿಂಜರಿಯುವ ಕನ್ನಡಿಗರೇ ಕನ್ನಡಕ್ಕೆ ಅಪಾಯಕಾರಿ

KannadaprabhaNewsNetwork |  
Published : Nov 02, 2024, 01:31 AM IST
1ಎಚ್ಎಸ್ಎನ್11 : ಆಲೂರು ಕ್ರೀಡಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಇತರೆ ಭಾಷೆಗಳ ಬಗ್ಗೆ ವ್ಯಾಮೋಹ ಬೇಡ. ಆದರೆ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು. ದೇಶದಲ್ಲಿರುವ ಹಲವಾರು ದೇವಾಲಯಗಳನ್ನು ನಿರ್ಮಾಣ ಮಾಡಿರುವವರು ಕನ್ನಡಿಗರು. ಕನ್ನಡ ನಾಡಿನಲ್ಲಿ ಹುಟ್ಟಿ ಕನ್ನಡ ಭಾಷೆ ಗೊತ್ತಿದ್ದರೂ ಮಾತನಾಡಲು ಹಿಂಜರಿಯುವವರಿಂದ ಭಾಷೆ ಉಳಿಯಲು ತೊಡಕಾಗುತ್ತಿದೆ ಎಂದು ಶಾಸಕ ಸಿಮೆಂಟ್ ಮಂಜು ವಿಷಾದ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಆಲೂರು

ಕನ್ನಡ ನಾಡಿನಲ್ಲಿ ಹುಟ್ಟಿ ಕನ್ನಡ ಭಾಷೆ ಗೊತ್ತಿದ್ದರೂ ಮಾತನಾಡಲು ಹಿಂಜರಿಯುವವರಿಂದ ಭಾಷೆ ಉಳಿಯಲು ತೊಡಕಾಗುತ್ತಿದೆ ಎಂದು ಶಾಸಕ ಸಿಮೆಂಟ್ ಮಂಜು ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಕನ್ನಡ ಧ್ವಜಾರೋಹಣ ಮಾಡಿ ಮಾತನಾಡಿ, ಇತರೆ ಭಾಷೆಗಳ ಬಗ್ಗೆ ವ್ಯಾಮೋಹ ಬೇಡ. ಆದರೆ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು. ದೇಶದಲ್ಲಿರುವ ಹಲವಾರು ದೇವಾಲಯಗಳನ್ನು ನಿರ್ಮಾಣ ಮಾಡಿರುವವರು ಕನ್ನಡಿಗರು. ಶೇ. ೬೦ರಷ್ಟು ನಾಮಫಲಕಗಳು ಕನ್ನಡ ಭಾಷೆಯಲ್ಲಿರಬೇಕು ಎಂಬ ಸರ್ಕಾರದ ನಿಯಮ ಪಾಲನೆಯಾಗುತ್ತಿಲ್ಲ. ವಿದ್ಯಾರ್ಥಿಗಳು ಸಾಧ್ಯವಾದಷ್ಟು ಕನ್ನಡ ಪುಸ್ತಕಗಳನ್ನು ಓದುವ ಮೂಲಕ ರಾಜ್ಯದ ಇತಿಹಾಸ ತಿಳಿಯಬೇಕು. ರಾಜ್ಯದ ಉನ್ನತಿಗೆ ಕೊಡುಗೆ ನೀಡಿದ ಮೈಸೂರು ಮಹಾರಾಜರ ಕೊಡುಗೆಯನ್ನು ಮರೆಯಲಾಗದು. ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡ ಭಾಷೆ ಬಳಸಲು ಅವಕಾಶ ಕಲ್ಪಿಸಲಾಗಿದೆ. ಖಾಸಗಿ ಶಾಲೆಯಲ್ಲಿಯೂ ಕನ್ನಡ ಭಾಷೆ ಬಗ್ಗೆ ಗೌರವ ಕೊಡಬೇಕು ಎಂದರು. ತಹಸೀಲ್ದಾರ್ ಸಿ. ಪಿ. ನಂದಕುಮಾರ್‌ರವರು ಧ್ಜಜಾರೋಹಣ ನೆರವೇರಿಸಿ ಮಾತನಾಡಿ, ರಾಜ್ಯದ ಏಕೀಕರಣಕ್ಕೆ ಹಲವಾರು ಗಣ್ಯರು ಶ್ರಮಿಸಿರುವ ಕರ್ನಾಟಕದ ಮೂಲ ಕನ್ನಡ ಭಾಷೆಯನ್ನು ಉಳಿಸಬೇಕು ಎಂದರು.ಸಾಹಿತಿ ಮತ್ತು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಂ. ಜಿ. ಪರಮೇಶ್ ಮಡಬಲುರವರು ಮುಖ್ಯ ಭಾಷಣ ಮಾಡಿದರು. ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಪಿ. ಚಂದ್ರು, ಮಾಜಿ ಸೈನಿಕ ವೆಂಕಟೇಶ್, ಪತ್ರಿಕಾ ಕ್ಷೇತ್ರದಲ್ಲಿ ಹರೀಶ್, ಸಮಾಜ ಸೇವೆಯಲ್ಲಿ ಬಾಲಕೃಷ್ಣ, ಸೋಮಶೇಖರ್‌ ಮತ್ತು ಶಿಕ್ಷಕಿ ಪುಷ್ಪಲತಾರವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ಧ್ವಜವಂದನೆ, ಸಾಮೂಹಿಕ ಕವಾಯತು ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಸಮಾರಂಭದಲ್ಲಿ ತಾ. ಪಂ. ಕಾರ್ಯ ನಿರ್ವಹಣಾಧಿಕಾರಿ ಪಿ. ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಎ. ಜೆ. ಕೃಷ್ಣೇಗೌಡ, ಸಿಡಿಪಿಒ ಎ. ಟಿ. ಮಲ್ಲೇಶ್, ಕೆ. ಎಸ್. ಮಂಜೇಗೌಡ, ನಟರಾಜ್, ಡಿ. ಎಸ್. ಜಯಣ್ಣ, ಡಾ. ಜಯರಾಜ್, ರಂಗಯ್ಯ, ಬಸವರಾಜ್, ಉಮಾ ರವಿಪ್ರಕಾಶ್, ಗೋಪಾಲಕೃಷ್ಣ ಇತರರು ಉಪಸ್ಥಿತರಿದ್ದರು. ಆಟೋ ಚಾಲಕರ ಸಂಘದ ವತಿಯಿಂದ ಕನ್ನಡ ಧ್ವಜಾರೋಹಣ ನಡೆಸಿ, ಆಟೋಟಗಳಲ್ಲಿ ಕನ್ನಡ ಧ್ವಜದೊಂದಿಗೆ ಮೆರವಣಿಗೆ ನಡೆಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ