ಕನ್ನಂಬಾಡಿ ಕಟ್ಟೆ ನಮ್ಮೆಲ್ಲರ ಅನ್ನದ ತಟ್ಟೆ : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

KannadaprabhaNewsNetwork |  
Published : Jul 30, 2024, 12:45 AM ISTUpdated : Jul 30, 2024, 12:56 PM IST
ಕನ್ನಂಬಾಡಿ ಕಟ್ಟೆ ನಮ್ಮೆಲ್ಲರ ಅನ್ನದ ತಟ್ಟೆ | Kannada Prabha

ಸಾರಾಂಶ

ಮೇಕೆದಾಟು ಅಣೆಕಟ್ಟು ನಿರ್ಮಾಣದಿಂದ ನಮಗಿಂತಲೂ ತಮಿಳುನಾಡಿಗೆ ಹೆಚ್ಚು ಅನುಕೂಲವಾಗಲಿದೆ. ೬೫ ಟಿಎಂಸಿ ನೀರು ಸಂಗ್ರಹಿಸಬಹುದು. ತಮಿಳುನಾಡಿನವರಿಗೆ ಒಳ್ಳೆಯ ಬುದ್ಧಿ ಕೊಟ್ಟು ಅಣೆಕಟ್ಟು ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಿ.

  ಮಂಡ್ಯ : ಮುಂಬರುವ ವರ್ಷದಿಂದ ಕಾವೇರಿಗೆ ಬಾಗಿನ ಸಲ್ಲಿಸುವ ಕಾರ್ಯಕ್ರಮದಲ್ಲಿ ಮೂವರು ರೈತರು, ಒಬ್ಬ ಪ್ರಗತಿಪರ ಕೃಷಿಕ ಮತ್ತು ಎಂಜಿನಿಯರ್ ಸೇರಿ ಐವರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯದಲ್ಲಿ ಕಾವೇರಿ ಮಾತೆಗೆ ಪೂಜೆ ಮತ್ತು ಬಾಗಿನ ಸಲ್ಲಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಶಸ್ತಿಯ ಸ್ವರೂಪ ಹೇಗಿರಬೇಕು, ಯಾರ ಹೆಸರಿನಲ್ಲಿ ನೀಡಬೇಕು ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಯಾರು ಅಧಿಕಾರದಲ್ಲಿದ್ದಾರೆಂದು ಗೊತ್ತಿಲ್ಲ:

ಕನ್ನಂಬಾಡಿ ಕಟ್ಟೆ ನಮ್ಮೆಲ್ಲರ ಅನ್ನದ ತಟ್ಟೆ. ಎಲ್ಲರೂ ಈ ಕಟ್ಟೆಯಿಂದಲೇ ಅನ್ನದ ತಟ್ಟೆ ಇಟ್ಟುಕೊಂಡಿದ್ದಾರೆ. ಮೇಲಿರುವ ತಾಯಿಗೆ ಯಾರು ಅಧಿಕಾರದಲ್ಲಿ ಇದ್ದಾರೆ ಎಂದು ಗೊತ್ತಿಲ್ಲ. ಮನುಷ್ಯನ ಪ್ರಯತ್ನಕ್ಕೆ ಫಲ ಸಿಗದಿರಬಹುದು. ಪ್ರಾರ್ಥನೆಗೆ ಫಲ ಸಿಕ್ಕೇ ಸಿಗುತ್ತದೆ ಎನ್ನುವುದಕ್ಕೆ ಅಣೆಕಟ್ಟು ಭರ್ತಿಯಯಾಗಿರುವುದೇ ಸಾಕ್ಷಿ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬರಗಾಲ ಬರುತ್ತದೆ ಎಂದು ವಿಪಕ್ಷದವರು ಟೀಕೆ ಮಾಡುತ್ತಾರೆ. ಆ ಟೀಕೆಗಳಿಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ, ಟೀಕೆಗಳು ಸಾಯುತ್ತವೆ. ನಾವು ಮಾಡುವ ಕೆಲಸಗಳು ಉಳಿಯುತ್ತವೆ ಎಂದರು.

ಮೇಕೆದಾಟು ಯೋಜನೆಯೇ ಪರಿಹಾರ:

ಕಾವೇರಿ ಸಮಸ್ಯೆಗೆ ಮೇಕೆದಾಟು ಅಣೆಕಟ್ಟು ನಿರ್ಮಾಣವೊಂದೇ ಪರಿಹಾರ. ಇದಕ್ಕಾಗಿ ನಾವು ಹೋರಾಟ ಮಾಡಿದ್ದೇವೆ. ಪಾದಯಾತ್ರೆ ಮಾಡಿದ್ದೇವೆ. ಆ ಸಮಯದಲ್ಲಿ ನಮ್ಮ ಮೇಲೆ ಕೇಸ್ ಹಾಕಿದರು. ಜೈಲಿಗೆ ಹೋದರೂ ಚಿಂತೆ ಇಲ್ಲ, ಕೇಸ್ ಹಾಕಿದರೂ ಪರವಾಗಿಲ್ಲವೆಂದು ಬೆಂಗಳೂರುವರೆಗೂ ಪಾದಯಾತ್ರೆ ನಡೆಸಿದೆವು. ಜನರು ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿದ್ದು ಜನರ ಋಣ ತೀರಿಸುವ ಕೆಲಸ ಮಾಡುತ್ತೇವೆ ಎಂದು ವಿಶ್ವಾಸದಿಂದ ನುಡಿದರು.

ಮೇಕೆದಾಟು ಅಣೆಕಟ್ಟು ನಿರ್ಮಾಣದಿಂದ ನಮಗಿಂತಲೂ ತಮಿಳುನಾಡಿಗೆ ಹೆಚ್ಚು ಅನುಕೂಲವಾಗಲಿದೆ. ೬೫ ಟಿಎಂಸಿ ನೀರು ಸಂಗ್ರಹಿಸಬಹುದು. ತಮಿಳುನಾಡಿನವರಿಗೆ ಒಳ್ಳೆಯ ಬುದ್ಧಿ ಕೊಟ್ಟು ಅಣೆಕಟ್ಟು ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಿ ಎಂದ ಅವರು, ಉತ್ತಮ ಮಳೆಯಿಂದಾಗಿ ಇಲ್ಲಿಯವರೆಗೆ ೪೦ ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕಿತ್ತು. ಆದರೆ, ೮೩ ಟಿಎಂಸಿ ನೀರು ಹರಿದುಹೋಗಿದೆ. ಮುಂದೆಯೂ ಇದೇ ರೀತಿ ಮಳೆಯಾದರೆ ರೈತರಿಗೆ ಅನುಕೂಲವಾಗಲಿದೆ ಎಂದರು.

ಬೃಂದಾವನಕ್ಕೆ ಹೊಸ ರೂಪ:

ಕೆಆರ್‌ಎಸ್ ಅಣೆಕಟ್ಟೆಯನ್ನು ವಿಶ್ವದರ್ಜೆಯ ಮಟ್ಟದಲ್ಲಿ ಅಭಿವೃದ್ಧಿಪಡಿಸಲಾಗುವುದು. ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಿಸಲು ಯೋಜನೆ ರೂಪಿಸಿದ್ದೇವೆ. ಪಿಪಿಪಿ ಮಾದರಿಯಲ್ಲಿ ಬೃಂದಾವನಕ್ಕೆ ಹೊಸ ರೂಪ ಕೊಡಲಾಗುತ್ತದೆ. ನಮಗೆ ರೈತರು, ಸಾರ್ವಜನಿಕರ ಜಮೀನಿನ ಅವಶ್ಯಕತೆ ಇಲ್ಲ. ಸರ್ಕಾರದ ಜಮೀನೇ ಸಾಕಾಗುತ್ತದೆ. ಜಲಾಶಯದ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸುವುದಾಗಿ ಹೇಳಿದರು.

ಪ್ರತಿ ವಾರ ಕಾವೇರಿ ಆರತಿ:

ಪ್ರವಾಸಿಗರನ್ನು ಆಕರ್ಷಿಸುವ ದೃಷ್ಟಿಯಿಂದ ಕೆಆರ್‌ಎಸ್‌ನಲ್ಲಿ ಪ್ರತಿ ವಾರ ಕಾವೇರಿ ಆರತಿ ಮಾಡಲಾಗುವುದು. ಇದಕ್ಕಾಗಿ ಎನ್.ಚಲುವರಾಯಸ್ವಾಮಿ ನೇತೃತವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಅವರು ಪ್ರವಾಸ ನಡೆಸಿ ಒಂದು ತಿಂಗಳಲ್ಲಿ ವರದಿ ನೀಡಲಿದ್ದಾರೆ. ಅದನ್ನು ಆಧರಿಸಿ ಕಾವೇರಿ ಆರತಿಗೆ ಚಾಲ ನೆ ನೀಡಲಾಗುವುದು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!