- ಕ್ಲಬ್‌ನಲ್ಲಿ ಕುಳಿತಿದ್ದ ಕಣುಮನ ಮೇಲೆ ಮಚ್ಚು-ಲಾಂಗ್‌ಗಳಿಂದ ಹಠಾತ್ ದಾಳಿ । ರಕ್ತದ ಮಡುವಲ್ಲೇ ಕೊನೆಯುಸಿರು
- 4 ಬೈಕ್, 1 ಆಟೋದಲ್ಲಿ ಬಂದಿದ್ದ 7ರಿಂದ 10 ಜನರ ಗುಂಪಿನಿಂದ ಕೃತ್ಯ । ಪರಿಚಯಸ್ಥ ಯುವಕರಿಂದಲೇ ಹತ್ಯೆ ಶಂಕೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ನಿಟುವಳ್ಳಿ 60 ಅಡಿ ರಸ್ತೆಯ ವಾಸಿ, ಕಾಂಗ್ರೆಸ್ ಯುವ ಮುಖಂಡ, ರೌಡಿ ಶೀಟರ್ ಕಣುಮ ಅಲಿಯಾಸ್ ಕಣುಮ ಸಂತೋಷ (36) ಕೊಲೆಯಾದ ವ್ಯಕ್ತಿ. ಹದಡಿ ರಸ್ತೆಯ ಸೋಮೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಎದುರಿನ ಪವರ್ ಸ್ಪೋರ್ಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್‌ನಲ್ಲಿ ಕಣುಮ ಸಂತೋಷ ತನ್ನ ಬೆಂಬಲಿಗರೊಂದಿಗೆ ಕುಳಿತಿದ್ದ. ಈ ವೇಳೆ ದಾಳಿ ನಡೆದಿದೆ ಎನ್ನಲಾಗಿದೆ.
ಉಧೋ ಉಧೋ ಘೋಷಣೆ:
ಕಣುಮ ಸಂತೋಷನನ್ನು ಕೊಚ್ಚಿ, ಆತ ಮೃತಪಟ್ಟಿದ್ದು ಖಚಿತವಾಗುತ್ತಿದ್ದಂತೆಯೇ ಹಂತಕರ ಗುಂಪು ಕೈಯಲ್ಲಿದ್ದ ರಕ್ತಸಿಕ್ತ ಮಚ್ಚು, ಲಾಂಗ್‌ಗಳನ್ನು ಗಾಳಿಯಲ್ಲಿ ತೇಲಿಸುತ್ತಾ, ದುಗ್ಗಮ್ಮ ನಿನ್ನಾಲ್ಕು ಉಧೋ ಉಧೋ... ಎಂದು ಘೋಷಣೆಗಳನ್ನು ಕೂಗುತ್ತಾ ಬೈಪಾಸ್ ರಸ್ತೆಯತ್ತ ತೆರಳಿದೆ. ಕೊಲೆ ವಿಚಾರ ಮಿಂಚಿನಂತೆ ಎಲ್ಲೆಡೆ ಹರಡಿದ ಪರಿಣಾಮ ಅಂಗಡಿ ಮುಂಗ್ಗಟ್ಟುಗಳನ್ನು ಬಂದ್ ಮಾಡಿಕೊಂಡು ಹೋದರು. ವಿದ್ಯಾನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಪರಿಶೀಲಿಸಿದಾಗ ಅಲ್ಲಿ ಹತ್ಯೆಯಾಗಿದ್ದು, ರೌಡಿ ಶೀಟರ್, ಕಾಂಗ್ರೆಸ್ ಮುಖಂಡ ಕಣುಮ ಅಲಿಯಾಸ್ ಕಣುಮ ಸಂತೋಷ ಎಂಬುದು ಸ್ಪಷ್ಟವಾಯಿತು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಎಎಸ್‌ಪಿಗಳಾದ ವಿಜಯಕುಮಾರ ಎಂ. ಸಂತೋಷ, ಜಿ.ಮಂಜುನಾಥ, ಡಿವೈಎಸ್‌ಪಿಗಳಾದ ಶರಣ ಬಸವೇಶ್ವರ, ಬಿ.ಎಸ್. ಬಸವರಾಜ, ಸಿಪಿಐಗಳಾದ ಶಿಲ್ಪ, ನಾಗರಾಜ, ಅಧಿಕಾರಿಗಳು- ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು.
ಮೃತ ಕಣುಮ ಸಂತೋಷ್ ಪತ್ನಿ, ಪುತ್ರ, ಬಂಧು-ಬಳಗ, ಸ್ನೇಹಿತರು, ಹಿತೈಷಿಗಳು, ಬೆಂಬಲಿಗರು ಸಾಕಷ್ಟು ಸಂಖ್ಯೆಯಲ್ಲಿ ಸ್ಥಳದಲ್ಲಿ ಜಮಾಯಿಸಿದ್ದರು. ಕಣುಮನ ಪತ್ನಿ, ಪುತ್ರನ ಆಕ್ರಂದನ ಮುಗಿಲು ಮುಟ್ಟಿತ್ತು. ಮಗನಂತೂ ತನ್ನ ತಂದೆ ಹತ್ಯೆಯ ಸಂಗತಿ ಅರಗಿಸಿಕೊಳ್ಳಲಾಗದೇ, ಹಂತಕರು ಯಾರೇ ಆಗಿದ್ದರೂ ಬಿಡಬೇಡಿ ಎಂಬುದಾಗಿ ಪೊಲೀಸ್ ಅಧಿಕಾರಿಗಳ ಬಳಿ ಕಣ್ಣೀರು ಹಾಕುತ್ತಿದ್ದನು. ಕಣುಮನ ಬಂಧು-ಬಳಗ, ಸ್ನೇಹಿತರು ಕಣುಮನ ಮಗನನ್ನು ಸಮಾಧಾನಪಡಿಸಲು ಸಾಕಷ್ಟು ಪ್ರಯತ್ನಿಸಿದರು.
- - - (ಫೋಟೋಗಳಿವೆ.)