ಬೆಳ್ತಂಗಡಿ: ದಕ್ಷಿಣದ ಅಯೋಧ್ಯೆಯೆಂದೇ ಕರೆಯಲ್ಪಡುವ ಧರ್ಮಸ್ಥಳ ಸಮೀಪದ ನಿತ್ಯಾನಂದ ನಗರದಲ್ಲಿರುವ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದಲ್ಲಿ ಮಾ. 20 ರಿಂದ 27ರವರೆಗೆ 66ನೇ ವರ್ಷದ ಶ್ರೀ ರಾಮ ನಾಮ ತಾರಕ ಮಂತ್ರ ಸಪ್ತಾಹ ಸಮಾರಂಭ ಹಾಗೂ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಪ್ರತಿಷ್ಠಾ ಜಾತ್ರಾ ಮಹೋತ್ಸವ ಮತ್ತು ಮಹಾ ಬ್ರಹ್ಮ ರಥೋತ್ಸವ ನಡೆಯಲಿರುವುದು.
20ರಂದು ಬೆಳಗ್ಗೆ 9.30 ಗಂಟೆಗೆ ಶ್ರೀ ರಾಮ ನಾಮ ಸಪ್ತಾಹದ ಅಖಂಡ ನಂದಾ ದೀಪವನ್ನು ಬೆಳಗಿಸುವ ಮುಖೇನ ಜಾತ್ರೋತ್ಸವದ ಉದ್ಘಾಟನೆ ನಡೆಯಲಿರುವುದು. ‘ಶ್ರೀ ರಾಮ ಜಯ ರಾಮ ಜಯ ಜಯ ರಾಮ’ ಎಂಬ ತಾರಕ ಮಂತ್ರದ ನಾಮೋಚ್ಛಾರಣೆ ಸಮಾರಂಭದಲ್ಲಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು,ಸಂಸದರು,ಶಾಸಕರು,ಎಂಎಲ್ ಸಿಗಳ ಸಹಿತ ಅನೇಕರು ಪಾಲ್ಗೊಳ್ಳಲಿರುವರು.
ಜಾತ್ರೋತ್ಸವದಲ್ಲಿ ದಿನಂಪ್ರತಿ ಕ್ಷೇತ್ರದಲ್ಲಿ ಆರಾಧಿಸಲ್ಪಡುವ ಎಲ್ಲಾ ಪರಿವಾರ ದೇವರ ಬಲಿ, ಉತ್ಸವಗಳು ಹಾಗೂ ಚಂದ್ರಮಂಡಲ ರಥ, ಪಷ್ಪರಥ, ಬೆಳ್ಳಿರಥ, ಹನುಮಾನ್ ರಥೋತ್ಸವಗಳು ನಡೆಯಲಿದ್ದು 27 ರಂದು ಸಂಜೆ 6 ಗಂಟೆಯಿಂದ ಕ್ಷೇತ್ರದಲ್ಲಿ ದೇವರ ಪಾಲಕಿ ಬಲಿ ಉತ್ಸವ, ಬ್ರಹ್ಮ ರಥೋತ್ಸವ ಹಾಗೂ ರಕ್ತೇಶ್ವರಿ, ಗುಳಿಗ ದೈವಗಳಿಗೆ ನೇಮೋತ್ಸವ ನಡೆಯಲಿರುವುದು ಎಂದು ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ,ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ತಿಳಿಸಿದ್ದಾರೆ.