ಕಾಪು: ಅದಾನಿ ಫೌಂಡೇಶನ್‌ನಿಂದ ಸ್ಯಾನಿಟರಿ ಪ್ಯಾಡ್ ಇನ್ಸಿರಿನೇಟರ್ ಘಟಕಕ್ಕೆ ಚಾಲನೆ

KannadaprabhaNewsNetwork | Published : Sep 20, 2024 1:42 AM

ಅದಾನಿ ಫೌಂಡೇಶನ್‌ ಪಡುಬಿದ್ರಿ ಗ್ರಾಮದಲ್ಲಿ ೧೫ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿದ ಸ್ಯಾನಿಟರ್ ಪ್ಯಾಡ್ ಇನ್ಸಿರಿನೇಟರ್ ಘಟಕ ಸ್ಥಾಪಿಸಿದೆ. ಅದಾನಿ ಸಮೂಹದ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ಕಿಶೋರ್ ಆಳ್ವ, ಪಡುಬಿದ್ರಿ ಗ್ರಾ.ಪಂ. ಅಧ್ಯಕ್ಷರಾದ ಶಶಿಕಲಾ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಕಾಪು

ಇಲ್ಲಿನ ಅದಾನಿ ಸಮೂಹದ ಅದಾನಿ ಪವರ್ ಲಿಮಿಟೆಡ್ ಇದರ ಸಿಎಸ್‌ಆರ್ ಕಾರ್ಯಕ್ರಮಗಳನ್ನು ನಿರ್ವಹಿಸುವ ಅದಾನಿ ಫೌಂಡೇಶನ್‌ ಪಡುಬಿದ್ರಿ ಗ್ರಾಮದಲ್ಲಿ ೧೫ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿದ ಸ್ಯಾನಿಟರ್ ಪ್ಯಾಡ್ ಇನ್ಸಿರಿನೇಟರ್ ಘಟಕವನ್ನು ಬುಧವಾರ ಉದ್ಘಾಟಿಸಲಾಯಿತು.ಅದಾನಿ ಫೌಂಡೇಶನ್‌ನ ಸಿಎಸ್‌ಆರ್ ಯೋಜನೆಗಳಲ್ಲಿ ಒಂದಾದ ಗ್ರಾಮೀಣ ಮೂಲಭೂತ ಸೌಕರ್ಯ ಯೋಜನೆಯಡಿ ಪಡುಬಿದ್ರಿ ಗ್ರಾ.ಪಂ. ೨೦೨೩-೨೪ನೇ ಸಾಲಿನಲ್ಲಿ ನೀಡಿದ ಕ್ರಿಯಾಯೋಜನೆ ಮೇರೆಗೆ ಸ್ಥಾಪಿಸಲ್ಪಟ್ಟ ಈ ಸ್ಯಾನಿಟರಿ ಪ್ಯಾಡ್ ಇನ್ಸಿರಿನೇಟರ್ ಘಟಕವನ್ನು ಅದಾನಿ ಸಮೂಹದ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ಕಿಶೋರ್ ಆಳ್ವ, ಪಡುಬಿದ್ರಿ ಗ್ರಾ.ಪಂ. ಅಧ್ಯಕ್ಷರಾದ ಶಶಿಕಲಾ, ಪಂಚಾಯಿತಿ ಸದಸ್ಯರ ಉಪಸ್ಥಿತಿಯಲ್ಲಿ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಕಿಶೋರ್ ಆಳ್ವ, ಪಡುಬಿದ್ರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಿಎಸ್‌ಆರ್ ಅನುದಾನಡಿ ೩ ಕೋಟಿ ರು.ಗಳ ಮೂಲಸೌಕರ್ಯ ಅಭಿವೃದ್ಧಿಯನ್ನು ಅದಾನಿ ಸಮೂಹವು ಘೋಷಿಸಿದ್ದು, ಇಲ್ಲಿಯ ತನಕ ಸುಮಾರು ೧.೯೦ ಕೋಟಿ ರು.ನಷ್ಟು ಅಭಿವೃದ್ಧಿ ಕೆಲಸಗಳನ್ನು ಸಂಪೂರ್ಣಗೊಳಿಸಿ ಪಂಚಾಯಿತಿಗೆ ಹಸ್ತಾಂತರಿಸಲಾಗಿದೆ ಎಂದು ಆಳ್ವ ತಿಳಿಸಿದರು.

ಈ ಘಟಕದಲ್ಲಿ ಗಂಟೆಗೆ ಸುಮಾರು ೬೦ ಕಿಲೋ ಸ್ಯಾನಿಟರ್ ಪ್ಯಾಡ್‌ಗಳನ್ನು ದಹಿಸಬಹುದಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಇನ್ಸಿನರೇಟರ್ ಯಂತ್ರಗಳನ್ನು ಅಳವಡಿಸುವುದರಿಂದ ಉತ್ತಮ ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣೆಯನ್ನು ಉತ್ತೇಜಿಸಬಹುದು. ಬಳಸಿದ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ತೆರೆದ ಸ್ಥಳಗಳಲ್ಲಿ ಅಥವಾ ಅನೈರ್ಮಲ್ಯದ ರೀತಿಯಲ್ಲಿ ವಿಲೇವಾರಿ ಮಾಡುವುದರಿಂದ ಉಂಟಾಗುವ ಪರಿಸರ ಮತ್ತು ಆರೋಗ್ಯದ ಅಪಾಯಗಳನ್ನು ತಪ್ಪಿಸಲು ಈ ಘಟಕ ಸಹಾಯ ಮಾಡುತ್ತದೆ ಎಂದು ಕಿಶೋರ್ ಆಳ್ವ ಹೇಳಿದರು.ಪಡುಬಿದ್ರಿ ಗ್ರಾ.ಪಂ. ಅಧ್ಯಕ್ಷರಾದ ಶಶಿಕಲಾ, ಅದಾನಿ ಸಮೂಹದ ಸಿಎಸ್‌ಆರ್ ಕಾರ್ಯಕ್ರಮಗಳಿಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಡುಬಿದ್ರಿ ಗ್ರಾ.ಪಂ. ಉಪಾಧ್ಯಕ್ಷ ಹೇಮಚಂದ್ರ, ಸದಸ್ಯರಾದ ನವೀನ್ ಶೆಟ್ಟಿ, ಗಣೇಶ್ ಕೋಟ್ಯಾನ್, ಶೋಭಾ ಶೆಟ್ಟಿ, ಅಶೋಕ್ ಪೂಜಾರಿ, ರಮೀಜ್‌ ಹುಸೈನ್, ನಿಯಾಜ್‌, ಸುನಂದಾ, ವಿದ್ಯಾಶ್ರೀ, ಜ್ಯೋತಿ ಮೆನನ್, ಸಂದೇಶ್ ಶೆಟ್ಟಿ, ಶಾಫಿ, ಅದಾನಿ ಪವರ್ ಲಿಮಿಟೆಡ್‌ನ ಎಜಿಎಂ ರವಿ ಆರ್. ಜೇರೆ, ಅದಾನಿ ಫೌಂಡೇಶನ್‌ನ ಅನುದೀಪ್ ಉಪಸ್ಥಿತರಿದ್ದರು.