ಕಾಪು ಶ್ರೀ ಹೊಸ ಮಾರಿಗುಡಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಏ.9ರಂದು ಚಾಲನೆ

KannadaprabhaNewsNetwork |  
Published : Apr 08, 2024, 01:01 AM IST
ಕಾಪು7 | Kannada Prabha

ಸಾರಾಂಶ

2025ರ ಜ.14ರ ನಂತರ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ದಿನ ನಿಗದಿ ಪಡಿಸುವುದೆಂದು ನಿರ್ಧರಿಸಲಾಗಿದೆ. ಅದಕ್ಕೆ ಪೂರ್ವಭಾವಿಯಾಗಿ ಏ.9ರಂದು ಮಾರಿಯಮ್ಮ ಮತ್ತು ಉಚ್ಚಂಗಿ ದೇವಿಗೆ ಪ್ರಾರ್ಥನೆ ಮೂಲಕ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡಲು ನಿರ್ಧರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕಾಪು

ಇಲ್ಲಿನ ಸಂಪೂರ್ಣ ನವೀಕರಣಗೊಳ್ಳುತ್ತಿರುವ ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಕಾಮಗಾರಿಗಳು ಬಹಳಷ್ಟು ಭರದಿಂದ ಸಾಗುತ್ತಿದ್ದು, ದೇವಿಯ ಪುನಃಪ್ರತಿಷ್ಠೆ ಮತ್ತು ಬ್ರಹ್ಮಲಕಲಶೋತ್ಸವ ಕಾರ್ಯಕ್ರಮಗಳಿಗೆ ಏ.9ರಂದು ಬೆಳಗ್ಗೆ 8.30ಕ್ಕೆ ಮಾರಿಯಮ್ಮ ಮತ್ತು ಉಚ್ಚಂಗಿ ದೇವಿಯಲ್ಲಿ ಪ್ರಾರ್ಥಿಸುವ ಮೂಲಕ ಚಾಲನೆ ನೀಡಲಾಗುವುದು ಎಂದು ದೇವಳದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ತಿಳಿದ್ದಾರೆ.

ಅವರು ದೇವಳದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಏಪ್ರಿಲ್, ಮೇ ತಿಂಗಳಿನಲ್ಲಿಯೇ ಪ್ರತಿಷ್ಠೆ ಹಾಗೂ ಬ್ರಹ್ಮಕಲಶ ಮಾಡಬಹುದೆಂದು ನಿಶ್ಚಯಿಸಿದ್ದರೂ, ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಮಾಡಲು ಹಾಗೂ ಕಾರ್ಯಕ್ರಮದಲ್ಲಿ ಗಣ್ಯರೆಲ್ಲರೂ ಭಾಗವಹಿಸಲು ತೊಂದರೆಯಾಗುತ್ತದೆ. ಜೂ. 12ರಿಂದ ದಕ್ಷಿಣಾಯಣ ಪ್ರಾರಂಭವಾಗುವುದರಿಂದ ಪ್ರತಿಷ್ಠೆಗೆ ಸೂಕ್ತವಾದ ದಿನಗಳು ಲಭ್ಯವಾಗಿರುವುದಿಲ್ಲ. ಆದುದರಿಂದ ಕ್ಷೇತ್ರದ ಪ್ರಧಾನ ತಂತ್ರಿಗಳಾದ ಕುಮಾರಗುರು ತಂತ್ರಿಯವರೊಂದಿಗೆ ಚರ್ಚಿಸಿ 2025ರ ಜ.14ರ ನಂತರ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ದಿನ ನಿಗದಿ ಪಡಿಸುವುದೆಂದು ನಿರ್ಧರಿಸಲಾಗಿದೆ. ಅದಕ್ಕೆ ಪೂರ್ವಭಾವಿಯಾಗಿ ಏ.9ರಂದು ಮಾರಿಯಮ್ಮ ಮತ್ತು ಉಚ್ಚಂಗಿ ದೇವಿಗೆ ಪ್ರಾರ್ಥನೆ ಮೂಲಕ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡಲು ನಿರ್ಧರಿಸಲಾಗಿದೆ ಎಂದರು.

ಅಂದು ನೂತನ ರಾಜಗೋಪುರ, ಭೋಜನ ಶಾಲೆ, ಆಡಳಿತ ಕಚೇರಿ ಹಾಗೂ ಸುಸಜ್ಜಿತ ಶೌಚಾಲಯಕ್ಕೆ ಭೂಮಿಪೂಜೆ ನೆರವೇರಿಸಲಾಗುತ್ತದೆ. ನಂತರ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಸಭೆಯಲ್ಲಿ 9 ದಿನಗಳ ಪರ್ಯಂತ ನಡೆಯುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ತಂತ್ರಿಗಳು ದಿನ ಹಾಗೂ ಸಮಯವನ್ನು ಘೋಷಿಸಲಿದ್ದಾರೆ. ಈ ಸಂದರ್ಭದಲ್ಲಿ ವಿಜೃಂಭಣೆಯಿಂದ ನಡೆಯುವ ಅಮ್ಮನ ಬ್ರಹ್ಮಕಲಶೋತ್ಸವದ 9 ಜನರ ಪ್ರಧಾನ ಸಮಿತಿ ಮತ್ತು ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಘೋಷಣೆಯಾಗಲಿದೆ ಎಂದು ಹೇಳಿದರು.

ಚರಿತ್ರೆಯಲ್ಲಿ ದಾಖಲಾಗಲಿರುವ ಈ ಭವ್ಯ ಸಮಾರಂಭದಲ್ಲಿ ಗಣ್ಯರು, ದಾನಿಗಳು, ಅಮ್ಮನ ಭಕ್ತವೃಂದ, ಎಲ್ಲ ಸಮಿತಿಯ ಸದಸ್ಯರು ಹಾಗೂ ಊರ ಪರವೂರ ಮಹನಿಯರೆಲ್ಲರೂ ಭಾಗವಹಿಸಿ ಕಾಪುವಿನ ಅಮ್ಮನ ಕೃಪೆಗೆ ಪಾತ್ರರಾಗಬೇಕೆಂದು ವಾಸುದೇವ ಶೆಟ್ಟಿ ಅವರು ವಿನಂತಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಯೋಗೀಶ್‌ ಶೆಟ್ಟಿ ಬಾಲಾಜಿ, ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮಾಧವ ಆರ್‌. ಪಾಲನ್ ಉಪಸ್ಥಿತರಿದ್ದರು.

ಪ್ರಾಚೀನ ಸಂಪ್ರದಾಯಕ್ಕೆ ಒತ್ತು

ದೇವಿಯ ಪ್ರತಿಷ್ಠೆಯ ಧಾರ್ಮಿಕ ವಿಧಿವಿಧಾನಗಳನ್ನು ಪ್ರಾಚೀನ ಸಂಪ್ರದಾಯದಂತೆ ನಡೆಸಲು ನಿರ್ಧರಿಸಲಾಗಿದೆ. ಅಮ್ಮನ ದಿವ್ಯ ಸಾನ್ನಿಧ್ಯದಲ್ಲಿ ಕೋಣಗಳಿಂದ ಉಳುಮೆ ಮಾಡಿ, ನವ ಧಾನ್ಯ ಬಿತ್ತನೆ ಮಾಡಲಾಗುತ್ತದೆ. 18 ದಿನಗಳಲ್ಲಿ ಧಾನ್ಯಗಳು ಮೊಳಕೆಯೊಡೆದು, ಗರ್ಭಗಡಿಯಲ್ಲಿ ಗೋನಿವಾಸ ಏರ್ಪಡಿಸಿ, 9 ಅಥವಾ 18 ಗೋವುಗಳನ್ನು ಧಾನ್ಯದ ಗಿಡಗಳನ್ನು ಮೇಯಲು ಬಿಡಲಾಗುತ್ತದೆ. ಗೋವಾಸದ 9ನೇ ದಿನ ಗೋವುಗಳಿಂದ ಹಾಲನ್ನು ಕರೆದು ಪಂಚಗವ್ಯ ತಯಾರಿಸಿ ಅವುಗಳಿಂದ ದೇವಳದ ಆವರಣವನ್ನು ಸಂಪ್ರೋಕ್ಷಣೆ ಮಾಡಿ ಶುದ್ಧಗೊಳಿಸಲಾಗುತ್ತದೆ ಎಂದು ವಾಸುದೇವ ಶೆಟ್ಟಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!