ಅದೆಷ್ಟೋ ಹೆಣ್ಣು ಮಕ್ಕಳ ಭವಿಷ್ಯ ರೂಪಿಸಿದ ಕರಬಂದಿ ಭವನ

KannadaprabhaNewsNetwork |  
Published : Jul 09, 2025, 12:18 AM IST
ಹೆಣ್ಣು ಮಕ್ಕಳಿಗೆ ಆಸರೆಯಾಗಿದ್ದ ಕರಬಂದಿ ಭವನ  | Kannada Prabha

ಸಾರಾಂಶ

ಹೆಣ್ಣು ಮಕ್ಕಳು ಶಿಕ್ಷಣ ಕೊಡಿಸುವುದಕ್ಕೆ ಮೂಗು ಮುರಿಯುತ್ತಿದ್ದ ದಿನಗಳಲ್ಲಿ ಅಂಕೋಲಾದ ಕಣಗಿಲ ಎಂಬ ಊರಿನ ಜನತೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆಸರೆಯಾಗಿ ನಿಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದರು

ವಸಂತಕುಮಾರ್ ಕತಗಾಲ ಕಾರವಾರ

ಸ್ವಾತಂತ್ರ್ಯ ಹೋರಾಟಕ್ಕೆ ಪ್ರಸಿದ್ಧಿ ಪಡೆದ ಅಂಕೋಲಾದಲ್ಲಿ 60 ವರ್ಷಗಳ ಹಿಂದೆಯೇ ಹೆಣ್ಣು ಮಕ್ಕಳ ಶಿಕ್ಷಣ, ಸುರಕ್ಷತೆ, ಭದ್ರತೆಗಾಗಿ ಹಾಸ್ಟೇಲ್ ವ್ಯವಸ್ಥೆ ಮಾಡುವ ಮೂಲಕ ಅದೆಷ್ಟೋ ಹೆಣ್ಣು ಮಕ್ಕಳಿಗೆ ಭವಿಷ್ಯ ಕಟ್ಟಿಕೊಟ್ಟ "ಕರಬಂದಿ ಭವನ " ಭವ್ಯ ಇತಿಹಾಸವನ್ನು ಹೊತ್ತು ನಿಂತಿದೆ.

ಹೆಣ್ಣು ಮಕ್ಕಳು ಶಿಕ್ಷಣ ಕೊಡಿಸುವುದಕ್ಕೆ ಮೂಗು ಮುರಿಯುತ್ತಿದ್ದ ದಿನಗಳಲ್ಲಿ ಅಂಕೋಲಾದ ಕಣಗಿಲ ಎಂಬ ಊರಿನ ಜನತೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆಸರೆಯಾಗಿ ನಿಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದರು.

ಸತ್ಯಾಗ್ರಹ ಸ್ಮಾರಕ ವಿದ್ಯಾಲಯ ಸ್ವಾತಂತ್ರ್ಯಾನಂತರ ಅಂದರೆ 1961ರಲ್ಲಿ ಅಂಕೋಲಾದ ಸೂರ್ವೆಯಲ್ಲಿ ಸ್ಥಾಪನೆಯಾಯಿತು. ನಂತರ ಇದನ್ನು ಶೆಟಗೇರಿಗೆ ಸ್ಥಳಾಂತರಿಸಲಾಯಿತು. ಇದೆ ಸಂದರ್ಭದಲ್ಲಿ ಸಮೀಪದ ಕಣಗಿಲ ಎಂಬಲ್ಲಿ ಕರಬಂದಿ ಭವನ ತಲೆ ಎತ್ತಿತ್ತು. ಸ್ವಾತಂತ್ರ್ಯ ಗಳಿಸಿದ ಸಂಭ್ರಮದಲ್ಲಿದ್ದ ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರರು ಕರಬಂದಿ ಭವನದಲ್ಲಿ ಸಭೆ ಸೇರಿ ವಿಚಾರ ವಿನಿಮಯ ನಡೆಸುತ್ತಿದ್ದರು. ಸತ್ಯಾಗ್ರಹ ಸ್ಮಾರಕ ವಿದ್ಯಾಲಯಕ್ಕೆ ಶಿರಗುಂಜಿ, ವಾಸರೆ, ಕುದ್ರಗಿ, ಹಿಲ್ಲೂರು ಹೀಗೆ ದೂರ ದೂರದಿಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಬರುತ್ತಿದ್ದರು. ಆದರೆ ಆಗ ಬಸ್ ಸಂಪರ್ಕವೂ ಸರಿಯಾಗಿ ಇರಲಿಲ್ಲ. ದೂರದಿಂದ ಬಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮನೆಗೆ ಹೋಗಿ ಬರುವುದೇ ಕಷ್ಟಕರವಾಯಿತು. ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಕರಬಂದಿ ಭವನದ ಮಹಡಿಯಲ್ಲಿ ಹೆಣ್ಣು ಮಕ್ಕಳಿಗೆ ತಂಗಲು ವ್ಯವಸ್ಥೆ ಮಾಡಿದರು. ಮತ್ತೊಂದು ಪಾರ್ಶ್ವದಲ್ಲಿ ಗಂಡು ಮಕ್ಕಳಿಗೂ ಅವಕಾಶ ಕಲ್ಪಿಸಿದರು. ನೆಲ ಮಹಡಿಯಲ್ಲಿ ಶಿಕ್ಷಕರಿಗೆ ವಾಸ್ತವ್ಯಕ್ಕೆ ಏರ್ಪಾಡು ಮಾಡಿದರು.

ಅಕ್ಕಿ, ಬೇಳೆ, ತೆಂಗಿನಕಾಯಿ, ಮೆಣಸು ಹೀಗೆ ಅಡುಗೆಗೆ ಬೇಕಾದ ದಿನಸಿಗಳನ್ನು ಊರಿನವರೇ ಸಂಗ್ರಹಿಸಿ ಕೊಡುತ್ತಿದ್ದರು. ಅಡುಗೆಗೆ ರಾಮಕ್ಕ ಎಂಬ ಮಹಿಳೆಯನ್ನು ನೇಮಿಸಿದ್ದರು. ಅಡುಗೆಯ ಜೊತೆ ಹೆಣ್ಣು ಮಕ್ಕಳ ಯೋಗಕ್ಷೇಮವನ್ನೂ ಅವರು ನೋಡಿಕೊಳ್ಳುತ್ತಿದ್ದರು. ಹಬ್ಬದ ಸಂದರ್ಭದಲ್ಲಿ ಊರಿನ ಮನೆಯವರು ತಲಾ ಇಬ್ಬರು ಹೆಣ್ಣು ಮಕ್ಕಳನ್ನು ತಮ್ಮ ಮನೆಗೆ ಕರೆದು ಉಣಬಡಿಸುತ್ತಿದ್ದರು. ಮನೆಯಿಂದ ಹೊರಗಡೆ ಇದ್ದರೂ ಹಬ್ಬದ ಸಂಭ್ರಮದಿಂದ ಅವರು ವಂಚಿತರಾಗುತ್ತಿರಲಿಲ್ಲ.

ಹೀಗೆ ಸುಮಾರು 20 ವರ್ಷಗಳ ಕಾಲ ಹಾಸ್ಟೇಲ್ ನಡೆಯಿತು. ನಂತರ ಪ್ರೌಢಶಾಲೆಗಳು ಗ್ರಾಮೀಣ ಪ್ರದೇಶದಲ್ಲಿ ತಲೆ ಎತ್ತಿದವು. ಸಾರಿಗೆ ಸಂಪರ್ಕವೂ ಹೆಚ್ಚಾಯಿತು. ದೂರದಿಂದ ಬರುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿತು. ಹಾಗಾಗಿ ವಿದ್ಯಾರ್ಥಿ ನಿಲಯ ಕೂಡ ಸ್ಥಗಿತವಾಯಿತು.

ಇಂದಿಗೂ ಕರಬಂದಿ ಭವನ ಅದೆಷ್ಟೋ ಹೆಣ್ಣು ಮಕ್ಕಳಿಗೆ ಭವಿಷ್ಯ ಒದಗಿಸಿದ ತಾಣವಾಗಿದೆ. ಈ ಭವನ ಅವರ ಹೃದಯದಲ್ಲಿ ಸ್ಥಾನ ಪಡೆದಿದೆ. ಕರಬಂದಿ ಭವನ ನಿರ್ವಹಣೆಗಾಗಿ ಸಮಿತಿ ರಚಿಸಲಾಗಿದ್ದು, ದೇವಿದಾಸ ನಾಯಕ ಅಧ್ಯಕ್ಷರಾಗಿದ್ದು, ಶಾಂತಾರಾಮ ನಾಯಕ ಹಿಚ್ಕಡ ಸೇರಿದಂತೆ ಹಲವರು ಸದಸ್ಯರಾಗಿದ್ದಾರೆ. ಇಲ್ಲೊಂದು ವಾಚನಾಲಯ ಆರಂಭಿಸಲೂ ಸಿದ್ಧತೆ ನಡೆದಿದೆ.

ಸ್ವಾತಂತ್ರ್ಯ ಹೋರಾಟಗಾರರ ವಿಚಾರ ವಿನಿಮಯದ ಕೇಂದ್ರವಾಗಿ, ಅದೆಷ್ಟೋ ವಿದ್ಯಾರ್ಥಿ ವಿದ್ಯಾರ್ಥಿನಿಯರ ಭವಿಷ್ಯದ ನೆಲೆಯಾಗಿ ಅಪೂರ್ವ ಇತಿಹಾಸ ಹೊತ್ತಿರುವ ಈ ಕರಬಂದಿ ಭವನ ಮ್ಯೂಜಿಯಂ ಮಾದರಿಯಲ್ಲಿ ರೂಪುಗೊಂಡು ಮುಂದಿನ ತಲೆಮಾರಿಗೆ ಸ್ಫೂರ್ತಿಯ ತಾಣವಾಗಬೇಕಿದೆ.

ಆಗ ನಾನು ಶಿರಗುಂಜಿ ನಿವಾಸಿಯಾಗಿದ್ದೆ. ಕರಬಂದಿ ಭವನದಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡದಿದ್ದರೆ ಶಿಕ್ಷಣ ಮುಂದುವರಿಸುವ ಸಾಧ್ಯತೆಯೇ ಇರಲಿಲ್ಲ. ಅದೇ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಈಗ ನಾನು ಮುಖ್ಯಾಧ್ಯಾಪಕಿಯಾಗಿ ನಿವೃತ್ತನಾಗಿದ್ದು, ಅಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಕೃತಜ್ಞನಾಗಿದ್ದೇನೆ ಎಂದು ನಿವೃತ್ತಿ ಶಿಕ್ಷಕಿ ನಾಗವೇಣಿ ನಾಯಕ ತಿಳಿಸಿದ್ದಾರೆ.

PREV

Recommended Stories

ಚಪ್ಪಲಿಯೊಳಗೆ ಸೇರಿಕೊಂಡಿದ್ದ ಕೊಳಕು ಮಂಡಲ ಕಚ್ಚಿ ಸಾವು!
ಪೊಲೀಸರು ಶೋಷಿತರ ಮೇಲಿನ ದೌರ್ಜನ್ಯ ತಡೆಯಲಿ: ಸಿಎಂ