ಕೇರಳದ ಕೊಟ್ಟಾಯಂ ಜಿಲ್ಲೆಯ ಪಾಲಾದಿಂದ ಕೊಡಗಿಗೆ ಆಗಮಿಸಿ ಶತಮಾನ ಪೂರೈಸಿರುವ ರಾಮಪುರಂ ಕುಟುಂಬ ಕೃಷಿ, ಪ್ರವಾಸೋದ್ಯಮದ ಜತೆಗೆ ಶಿಕ್ಷಣ, ಆರೋಗ್ಯ, ಪರಿಸರ ಹಾಗೂ ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಸಮಾಜದೊಂದಿಗೆ ಅವಿನಾಭಾವ ನಂಟು ಬೆಳೆಸಿಕೊಂಡಿದೆ. ಈ ಕುಟುಂಬ ವಿರಾಜಪೇಟೆ ತಾಲೂಕು ಗರಡಿಗೋಡು ಗ್ರಾಮದಲ್ಲಿ ವಾಸ್ತವ್ಯ ಇದೆ.
ಕನ್ನಡಪ್ರಭ ವಾರ್ತೆ ಸಿದ್ದಾಪುರ
ಕೇರಳದ ಕೊಟ್ಟಾಯಂ ಜಿಲ್ಲೆಯ ಪಾಲಾದಿಂದ ಕೊಡಗಿಗೆ ಆಗಮಿಸಿ ಶತಮಾನ ಪೂರೈಸಿರುವ ರಾಮಪುರಂ ಕುಟುಂಬ ಕೃಷಿ, ಪ್ರವಾಸೋದ್ಯಮದ ಜತೆಗೆ ಶಿಕ್ಷಣ, ಆರೋಗ್ಯ, ಪರಿಸರ ಹಾಗೂ ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಸಮಾಜದೊಂದಿಗೆ ಅವಿನಾಭಾವ ನಂಟು ಬೆಳೆಸಿಕೊಂಡಿದೆ. ಈ ಕುಟುಂಬ ವಿರಾಜಪೇಟೆ ತಾಲೂಕು ಗರಡಿಗೋಡು ಗ್ರಾಮದಲ್ಲಿ ವಾಸ್ತವ್ಯ ಇದೆ.
1926ರಲ್ಲಿ ಕುಟುಂಬದ ಪೂರ್ವಿಕರು ಕೊಡಗಿಗೆ ಆಗಮಿಸಿ ಬ್ರಿಟಿಷರ ಒಡೆತನದಲ್ಲಿದ್ದ ಜಮೀನು ಖರೀದಿಸಿ ಕೃಷಿ ಚಟುವಟಿಕೆ ಆರಂಭಿಸಿದ್ದರು. ಕುಟುಂಬದ ಶತಮಾನದ ಪಯಣ ಇದೀಗ ನಾಲ್ಕನೇ ತಲೆಮಾರಿಗೆ ತಲುಪಿದ್ದು, ಪ್ರಸ್ತುತ ಕುಟುಂಬದಲ್ಲಿ 103 ಮಂದಿ ಸದಸ್ಯರಿದ್ದಾರೆ.
ಕುಟುಂಬದ ಹಿರಿಯರಾದ ಇಮ್ಯಾನುವೆಲ್ ಟಿ. ರಾಮಪುರಂ, ಪತ್ನಿ ಶೀಲಾ ಇಮ್ಯಾನುವೆಲ್, ಸಹೋದರರಾದ ಚೆರಿಯನ್ ರಾಮಪುರಂ ಹಾಗೂ ಜೋನ್ ರಾಮಪುರಂ ಸೇರಿದಂತೆ ಕುಟುಂಬದ ಸದಸ್ಯರು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಶಿಕ್ಷಣ, ರೋಗಿಗಳಿಗೆ ನೆರವು: ಡಯಾಲಿಸಿಸ್ ರೋಗಿಗಳಿಗೆ ನೆರವು, ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯ, ಕಾರ್ಮಿಕರ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ, ಬಸ್ ತಂಗುದಾಣ ಹಾಗೂ ಸೋಲಾರ್ ದೀಪಗಳ ನಿರ್ಮಾಣ ಸೇರಿದಂತೆ ಹಲವು ಜನಪರ ಕಾರ್ಯಗಳನ್ನು ಕೈಗೊಂಡಿದ್ದಾರೆ. ಕರಡಿಗೋಡು ಸರ್ಕಾರಿ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದು ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ತಮ್ಮ ಒಡೆತನದ ಮಾರ್ನಿಂಗ್ ಗ್ಲೋರಿ ಪ್ರಿಸ್ಕೂಲ್‌ನಲ್ಲಿ ಬಡ ಮಕ್ಕಳಿಗೆ ಆಹಾರ, ಪುಸ್ತಕ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಉಚಿತವಾಗಿ ನೀಡಿ ಶಿಕ್ಷಣ ನೀಡಲಾಗುತ್ತಿದೆ.
ವಿದ್ಯಾರ್ಥಿಗಳಿಗೆ ತರಬೇತಿ: ಹಳ್ಳಿಗಳ ಶುಚಿತ್ವ ಹಾಗೂ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿರುವ ಕುಟುಂಬ, ಶಾಲೆ ಮತ್ತು ರೆಸಾರ್ಟ್‌ಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳ ಬಳಕೆಯನ್ನು ತಪ್ಪಿಸಿದೆ. ಎಚ್‌ಐವಿ ಜಾಗೃತಿಗಾಗಿ ಸುಮಾರು 400 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ. ಸಾಮಾಜಿಕ ಸೇವೆಗಾಗಿ ಅಂತರರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಐದು ಪ್ರಶಸ್ತಿಗಳು ಲಭಿಸಿವೆ. ಕೊಡಗಿನ ಪ್ರಕೃತಿ, ಪರಂಪರೆ ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿಯೊಂದಿಗೆ ಸಮಾಜಸೇವೆ ಮತ್ತು ಪರಿಸರ ಸಂರಕ್ಷಣೆಗೆ ಮುಂದೆಯೂ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಇಮ್ಯಾನುವೆಲ್ ಟಿ. ರಾಮಪುರಂ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.