ಅ.10: ಕಲ್ಕೂರ ಪ್ರತಿಷ್ಠಾನದಿಂದ ‘ಕಾರಂತ ಹುಟ್ಟುಹಬ್ಬ’, ಡಾ.ಪ್ರಭಾಕರ ಜೋಶಿಗೆ ‘ಕಾರಂತ ಪ್ರಶಸ್ತಿ’

KannadaprabhaNewsNetwork | Published : Oct 9, 2024 1:31 AM

ಸಾರಾಂಶ

ಹಿರಿಯ ಸಾಹಿತಿ ದಿ. ಕೋಟ ಶಿವರಾಮ ಕಾರಂತರ ಹುಟ್ಟುಹಬ್ಬ ಸಮಾರಂಭ ಕಲ್ಕೂರ ಪ್ರತಿಷ್ಠಾನ ಆಶ್ರಯದಲ್ಲಿ ಅಕ್ಟೋಬರ್ 10ರಂದು ಬೆಳಗ್ಗೆ 9.30ಕ್ಕೆ ನಗರದ ಪತ್ತುಮುಡಿ ಸೌಧದಲ್ಲಿ ನಡೆಯಲಿದೆ. ಬಹುಶ್ರುತ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿಯವರಿಗೆ ಈ ಬಾರಿಯ ‘ಕಾರಂತ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.

ಕನ್ನಡಪ್ರಭ ವಾರ್ತೆ ಮಂಗಳೂರು‘ಕಡಲ ತಡಿಯ ಭಾರ್ಗವ’ ಎಂದೇ ಖ್ಯಾತರಾದ ಹಿರಿಯ ಸಾಹಿತಿ ದಿ. ಕೋಟ ಶಿವರಾಮ ಕಾರಂತರ ಹುಟ್ಟುಹಬ್ಬ ಸಮಾರಂಭ ಕಲ್ಕೂರ ಪ್ರತಿಷ್ಠಾನ ಆಶ್ರಯದಲ್ಲಿ ಅಕ್ಟೋಬರ್ 10ರಂದು ಬೆಳಗ್ಗೆ 9.30ಕ್ಕೆ ನಗರದ ಪತ್ತುಮುಡಿ ಸೌಧದಲ್ಲಿ ನಡೆಯಲಿದೆ.

ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,

ಬಹುಶ್ರುತ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿಯವರಿಗೆ ಈ ಬಾರಿಯ ‘ಕಾರಂತ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ಹೊಟೇಲ್ ಜನತಾ ಡಿಲಕ್ಸ್‌ ಪಾಲುದಾರರಾದ ಪತ್ತುಮುಡಿ ಸೂರ್ಯನಾರಾಯಣ ರಾವ್‌ ಉದ್ಘಾಟಿಸಲಿರುವರು. ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಪಿ.ಎಲ್. ಧರ್ಮರವರು ‘ಕಾರಂತ ಪ್ರಶಸ್ತಿ’ ಪ್ರದಾನ ಮಾಡುವರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಅವರು ಕಾರಂತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವರು. ಕಂಪ್ಯೂಟರ್ ಭಾಷಾ ವಿಜ್ಞಾನಿ ನಾಡೋಜ ಪ್ರೊ. ಕೆ.ಪಿ. ರಾವ್‌ರವರು ಶಿವರಾಮ ಕಾರಂತರ ಸಂಸ್ಮರಣೆ ಮಾಡಲಿರುವರು ಎಂದರು.

ಕಾರಂತ ಹುಟ್ಟುಹಬ್ಬ ಪ್ರಯುಕ್ತ ಏರ್ಪಡಿಸಲಾದ ಪ್ರಬಂಧ ಸ್ಪರ್ಧಾ ವಿಜೇತರಿಗೆ ಶಾರದಾ ವಿದ್ಯಾಲಯದ ಅಧ್ಯಕ್ಷ ಡಾ. ಎಂ.ಬಿ. ಪುರಾಣಿಕ್‌ರವರು ಬಹುಮಾನ ವಿತರಿಸುವರು. ಅಂಚೆ ಕಾರ್ಡಿನಲ್ಲಿ ಕಾರಂತರ ಚಿತ್ರ ರಚನಾ ಸ್ಪರ್ಧೆಯ ವಿಜೇತರಿಗೆ ಉಡುಪಿಯ ಸುಹಾಸಂ ಇದರ ಅಧ್ಯಕ್ಷ ಎಚ್. ಶಾಂತರಾಜ ಐತಾಳ್‌ ಬಹುಮಾನ ವಿತರಿಸುವರು ಎಂದರು.

ಇದೇ ಸಂದರ್ಭ ಗಡಿನಾಡ ಕನ್ನಡಪರ ಹೋರಾಟಗಾರ ತೆಕ್ಕೆಕೆರೆ ಶಂಕರನಾರಾಯಣ ಭಟ್ ಅವರಿಗೆ ‘ಕಲ್ಕೂರ ಗಮಕ ಸಿರಿ’ ಪುರಸ್ಕಾರ ಹಾಗೂ ಹೊರರಾಜ್ಯದ ವಲಸೆ ಕಾರ್ಮಿಕರ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ವಿದ್ಯಾಭ್ಯಾಸ ನೀಡುವಲ್ಲಿ ಮಹತ್‌ ಸಾಧನೆ ಮಾಡಿರುವ ಬೋಳಾರ ವೆಸ್ಟ್ ಉರ್ದು ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಗೀತಾ ಜುಡಿತ್ ಸಲ್ದಾನಾ ಅವರಿಗೆ ‘ಕಲ್ಕೂರ ಶಿಕ್ಷಣ ಸಿರಿ’ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದರು.

ಮೇಘಾಲಯದ ಸರಸ್ವತಿ ಎಜುಕೇಶನ್ ಆ್ಯಂಡ್ ವೆಲ್‌ಫೇರ್ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ಡಾ. ಪಿ. ಅನಂತಕೃಷ್ಣ ಭಟ್, ಭಾರತ ಸೇವಾದಳ ಕೇಂದ್ರ ಸಮಿತಿಯ ಸದಸ್ಯ ಬಶೀರ್ ಬೈಕಂಪಾಡಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ರೋಯ್ ಕ್ಯಾಸ್ಟಲಿನೋ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಉಜಿರೆ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟಿತ್ತೋಡಿ ಹಾಗೂ ಶ್ರೀಶ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ಎಸ್‌. ಗುರುರಾಜ್ ಮೊದಲಾದವರು ಪಾಲ್ಗೊಳ್ಳಲಿರುವರು ಎಂದರು.

ಡಾ.ಪ್ರಭಾಕರ ಜೋಶಿಗೆ ‘ಕಾರಂತ ಪ್ರಶಸ್ತಿ’:ಈ ವರ್ಷದ ‘ಕಾರಂತ ಪ್ರಶಸ್ತಿ’ಯನ್ನು ಖ್ಯಾತ ಅರ್ಥಧಾರಿ, ಬಹುಶ್ರುತ ವಿದ್ವಾಂಸರೆಂದೇ ಖ್ಯಾತರಾದ ಡಾ.ಎಂ. ಪ್ರಭಾಕರ ಜೋಶಿಯವರಿಗೆ ಇದೇ ಸಂದರ್ಭ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಪ್ರಮುಖರಾದ ಜನಾರ್ದನ ಹಂದೆ, ಪೂರ್ಣಿಮಾ ಪೇಜಾವರ, ವಿಜಯಲಕ್ಷ್ಮಿ ಶೆಟ್ಟಿ, ಮಂಜುಳಾ ಶೆಟ್ಟಿ, ಧ್ಯಾನಚಂದ್ ಇದ್ದರು.

Share this article