ಕಾರಟಗಿ ಬಂದ್‌ ಸಂಪೂರ್ಣ ಯಶಸ್ವಿ

KannadaprabhaNewsNetwork | Published : Jul 5, 2024 12:46 AM

ಸಾರಾಂಶ

ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಿರುವ ೩೭೧(ಜೆ) ಕಲಂ ಸಮರ್ಪಕ ಅನುಷ್ಠಾನಕ್ಕೆ ಒತ್ತಾಯಿಸಿ ಗುರುವಾರ ಕರೆ ನೀಡಿದ್ದ ಕಾರಟಗಿ ಬಂದ್ ಸಂಪೂರ್ಣ ಯಶಸ್ವಿಯಾಯಿತು.

371ಜೆ ಸಮರ್ಪಕ ಜಾರಿಗೆ ಒತ್ತಾಯ । ಬೃಹತ್ ಪ್ರತಿಭಟನೆ, ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗಿ

ಕನ್ನಡಪ್ರಭ ವಾರ್ತೆ ಕಾರಟಗಿ

ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಿರುವ ೩೭೧(ಜೆ) ಕಲಂ ಸಮರ್ಪಕ ಅನುಷ್ಠಾನಕ್ಕೆ ಒತ್ತಾಯಿಸಿ ಗುರುವಾರ ಕರೆ ನೀಡಿದ್ದ ಕಾರಟಗಿ ಬಂದ್ ಸಂಪೂರ್ಣ ಯಶಸ್ವಿಯಾಯಿತು. ರಾಜ್ಯ ಸರ್ಕಾರದ ಗಮನ ಸೆಳೆಯಲು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಇಲ್ಲಿನ ಜಾಗೃತಿ ಯುವಕ ಸಂಘದ ನೇತೃತ್ವದಲ್ಲಿ ಪಟ್ಟಣ ಸೇರಿ ತಾಲೂಕಿನ ವಿವಿಧ ಸಂಘ-ಸಂಸ್ಥೆಗಳು, ಖಾಸಗಿ ವಿದ್ಯಾ ಸಂಸ್ಥೆಗಳು ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿ ಕಲ್ಯಾಣ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಬಾರದು ಎಂಬ ಎಚ್ಚರಿಕೆ ಸಂದೇಶವನ್ನು ರಾಜ್ಯ ಸರ್ಕಾರಕ್ಕೆ ನೀಡಿದರು.

ಇಲ್ಲಿನ ವಿಶೇಷ ಎಪಿಎಂಸಿ ಆವರಣದಲ್ಲಿ ಬೆಳಗ್ಗೆ ಸೇರಿದ ಸಾವಿರಾರೂ ಜನ ವಿದ್ಯಾರ್ಥಿಗಳು, ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು, ಅಕ್ಕಿ ಗಿರಿಣಿ ಉದ್ಯಮಿಗಳು, ಭತ್ತ ಮತ್ತು ಅಕ್ಕಿ ವರ್ತಕರು, ಕಿರಾಣಿ ವರ್ತಕರು, ಬೀದಿಬದಿ ವ್ಯಾಪಾರಿಗಳು, ಮಹಿಳಾ ಸಂಘಟನೆಗಳು, ರೈತ, ಕನ್ನಡ ಪರ, ದಲಿತಪರ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಒಕ್ಕೂರಲಿನಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ವಿಶೇಷ ಎಪಿಎಂಸಿ ಆವರಣದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಗೊಂಡು ಆರ್.ಜಿ. ರಸ್ತೆಯ ಮೂಲಕ ನವಲಿ ವೃತ್ತದ ಬಸ್‌ನಿಲ್ದಾಣದ ಆವರಣದವರೆಗೆ ನಡೆಯಿತು. ಸುಮಾರು ೨ಗಂಟೆಗಳ ಕಾಲ ಬೃಹತ್ ಮೆರವಣಿಗೆ ನಡೆಯಿತು.

ಹೊಸ್ ಬಸ್ ನಿಲ್ದಾಣದ ಆವರಣದಲ್ಲಿ ಮೆರವಣಿಗೆ ವೇದಿಕೆಯಾಗಿ ಮಾರ್ಪಟ್ಟಿತ್ತು. ಈ ವೇಳೆ ನವಲಿ ವೃತ್ತದಲ್ಲಿ ಪ್ರತಿಭಟನಾನಿರತರೆಲ್ಲ ರಸ್ತೆಯ ಮೇಲೆ ಧರಣಿ ನಡೆಸಿ ಬೆಂಗಳೂರಿನ ಹಸಿರು ಪ್ರತಿಷ್ಠಾದ ವಿರುದ್ಧ ಘೋಷಣೆ ಕೂಗಿ ನಿಷೇಧಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಮೆರವಣಿಗೆ ವೇಳೆ ಕೆಲ ರೈತರು ರಸ್ತೆಯ ಮೇಲೆಯೇ ಉರುಳು ಸೇವೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲ ಬಂದ್:

ಬಂದ್ ಕರೆ ನಿಮಿತ್ತ ವಾಣಿಜ್ಯ ಪಟ್ಟಣ ಕಾರಟಗಿ ಸಂಪೂರ್ಣ ಬಂದ್ ಆಗಿತ್ತು. ನವಲಿ ವೃತ್ತ, ಹಳೇ ಬಸ್ ನಿಲ್ದಾಣ, ಬೂದುಗುಂಪಾ ರಸ್ತೆ, ನವಲಿ ರಸ್ತೆ, ದಲಾಲಿ ಬಜಾರ್, ವಿಶೇಷ ಎಪಿಎಂಸಿ ಯಾರ್ಡ್ ಸೇರಿದಂತೆ ಆರ್.ಜಿ. ರಸ್ತೆಯಲ್ಲಿನ ಎಲ್ಲ ಅಂಗಡಿ ಮುಂಗಟ್ಟುಗಳೆಲ್ಲ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲಿಸಿದ್ದವು. ಪಟ್ಟಣದ ಯಾವುದೇ ವಾಹನಗಳು ರಸ್ತೆಗಿಳಿಯಲಿಲ್ಲ. ಇನ್ನು ಪೊಲೀಸರು ಹೊರಗಡೆಯಿಂದ ಬರುವ ಬಸ್‌ಗಳನ್ನು ಬೇರೆ ಮಾರ್ಗದಿಂದ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದರು. ಸುಮಾರು ೫ ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಖಾಸಗಿ ಆಸ್ಪತ್ರೆ, ಬ್ಯಾಂಕ್, ಔಷಧಿ ಅಂಗಡಿಗಳನ್ನು ಹೊರತುಪಡಿಸಿ ಎಲ್ಲ ರೀತಿಯ ಅಂಗಡಿಗಳು, ಖಾಸಗಿ, ಸಹಕಾರಿ ಸಂಘಗಳ ಬ್ಯಾಂಕ್‌ಗಳು ಸಹಿತ ಬಾಗಿಲು ಮುಚ್ಚಿದ್ದವು. ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಹೋಟೆಲ್‌ಗಳು, ಖಾನಾವಳಿಗಳು, ಚಹಾ ಅಂಗಡಿಗಳು ಸಹಿತ ಬಾಗಿಲು ಮುಚ್ಚಿದ್ದವು.

ಹೋರಾಟಗಾರರ ಪರವಾಗಿ ಶಶಿಧರಗೌಡ ಪಾಟೀಲ್, ಶಿವರೆಡ್ಡಿ ನಾಯಕ್ ನಾಯಕ, ವೀರೇಶ ಸಾಲೋಣಿ, ವೀರನಗೌಡ ಬೂದುಗುಂಪಾ, ನಾಗರಾಜ ಬಿಲ್ಗಾರ್ ಮಾತನಾಡಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ಕ್ಯಾ. ಮಹೇಶ ಮಾಲಗತ್ತಿ, ತಹಸೀಲ್ದಾರ್ ಎಂ. ಕುಮಾರಸ್ವಾಮಿ ಮೂಲಕ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

Share this article