ಬಿಜೆಪಿಗೆ ತೀವ್ರ ಮುಖಭಂಗ: ಚುನಾವಣೆಯಲ್ಲಿ ಪಾಲ್ಗೊಂಡ ಸಚಿವ-ಸಂಸದ
ಇಲ್ಲಿನ ಪುರಸಭೆಯ ೨ನೇ ಅವಧಿ ಸಹ ಕೈ ಪಾಲಾಗಿದ್ದು, ಅಧ್ಯಕ್ಷರಾಗಿ ರೇಖಾ ಆನೆಹೊಸೂರು ಮತ್ತು ಉಪಾಧ್ಯಕ್ಷರಾಗಿ ದೇವಮ್ಮ ಛಲವಾದಿ ಆಯ್ಕೆಯಾದರು. ಬಿಜೆಪಿ ತೀವ್ರ ಮುಖಭಂಗ ಅನುಭವಿಸಿತು.
ಪುರಸಭೆ ಎರಡನೇ ಅವಧಿ ಆಡಳಿತಕ್ಕೆ ಅಧ್ಯಕ್ಷ ಹಿಂದುಳಿದ ವರ್ಗ ಎ ಮತ್ತು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ವರ್ಗಕ್ಕೆ ಮೀಸಲಾಗಿತ್ತು. ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿ ಕಾಂಗ್ರೆಸ್‌ದಿಂದ ರೇಖಾ ರಾಜಶೇಖರ ಆನೆಹೊಸೂರು ಮತ್ತು ಬಿಜೆಪಿಯಿಂದ ಮೌನಿಕಾ ಧನಂಜಯ್, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ದೇವಮ್ಮ ಛಲವಾದಿ ಹಾಗೂ ಬಿಜೆಪಿಯ ಆನಂದ ಮ್ಯಾಗಳಮನಿ ನಾಮಪತ್ರ ಸಲ್ಲಿಸಿದ್ದರು.ಹೀಗಾಗಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಕೊನೆ ಗಳಿಗೆಯಲ್ಲಿ ತೀವ್ರ ಕುತೂಹಲ ಕೆರಳಿಸಿತ್ತು. ನಾಮಪತ್ರ ಪ್ರಕ್ರಿಯೆ ಮುಗಿದ ಬಳಿಕ ನಡೆದ ಚುನಾವಣೆಯಲ್ಲಿ ಸದಸ್ಯರೆಲ್ಲರೂ ಕೈ ಎತ್ತುವ ಮೂಲಕ ಅಧ್ಯಕ್ಷ-ಉಪಾಧ್ಯಕ್ಷರನ್ನು ಆಯ್ಕೆ ಮಾಡಿದರು.
ಮುಖಭಂಗ:ಒಟ್ಟು ೨೩ ಸದಸ್ಯರ ಪೈಕಿ ೧೧-ಕಾಂಗ್ರೆಸ್, ೧೧-ಬಿಜೆಪಿ ಒಬ್ಬರು ಜೆಡಿಎಸ್‌ದಿಂದ ಆಯ್ಕೆಯಾಗಿದ್ದರು. ೨೧ನೇ ವಾರ್ಡಿನ ಕಾಂಗ್ರೆಸ್ ಸದಸ್ಯ ರಾಮಣ್ಣ ಭಜಂತ್ರಿ ಇತ್ತೀಚೆಗೆ ಮೃತಪಟ್ಟಿದ್ದರಿಂದ ಕಾಂಗ್ರೆಸ್ ಸದಸ್ಯರ ಬಲ 10ಕ್ಕೆ ಕುಸಿದಿತ್ತು. ಬಿಜೆಪಿ ೧೧ ಸದಸ್ಯರ ಪೈಕಿ ೩ ಕಾಂಗ್ರೆಸ್‌ದಿಂದ ಗುರುತಿಸಿಕೊಂಡಿದ್ದರು. ಅವರಿಗೆ ಪಕ್ಷ ವಿಪ್ ಜಾರಿ ಮಾಡಿದ್ದ ಹಿನ್ನೆಲೆ ಅವರು ಚುನಾವಣೆಗೆ ಗೈರಾಗಿದ್ದರು. ಹೀಗಾಗಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಬಿಜೆಪಿ ತೀವ್ರ ಮುಖಭಂಗ ಅನುಭವಿಸುವಂತಾಯಿತು.
ವಿಜಯೋತ್ಸವ:
ಪುರಸಭೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಅಧ್ಯಕ್ಷರಾಗಿ ರೇಖಾ ಆನೆಹೊಸೂರು ಆಯ್ಕೆ ಬಹುತೇಕ ಖಚಿತ ಎಂದು ಕನ್ನಡಪ್ರಭ ಅ.26ರಂದು ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.ಎಂದೂ ಸೇಡಿನ ರಾಜಕೀಯ ಮಾಡಿಲ್ಲ:
ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಸಚಿವ ತಂಗಡಗಿ, ರಾಜಕೀಯ ಜಿದ್ದಾಜಿದ್ದಿ, ರಾಜಕೀಯ ಸೇಡು ನನಗೆ ಗೊತ್ತಿಲ್ಲ. ರಾಜಕೀಯದಲ್ಲಿ ಜಿದ್ದಾಜಿದ್ದಿ ಸಹಜವಾಗಿರುತ್ತೆ. ಆದರೆ ನನ್ನ ರಾಜಕೀಯ ಜೀವನದಲ್ಲಿ ನಾನು ಎಂದೂ ಸೇಡಿನ ರಾಜಕೀಯ ಮಾಡಿಲ್ಲ. ವಿರೋಧಪಕ್ಷವನ್ನು ಕೂಡಾ ನಾನು ಅಭಿವೃದ್ಧಿ ವಿಷಯದಲ್ಲಿ ಜೊತೆ ಜೊತೆಯಾಗಿ ಕರೆದುಕೊಂಡು ಹೋಗುತ್ತೇನೆ. ನಮ್ಮ ಪಕ್ಷದ ರೇಖಾ ರಾಜಶೇಖರ ಮತ್ತು ಉಪಾಧ್ಯಕ್ಷರಾಗಿ ನಮ್ಮ ಅಭ್ಯರ್ಥಿ ದೇವಮ್ಮ ಗೆಲುವು ಸಾಧಿಸಿದ್ದಾರೆ. ಕಾರಟಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪುರಸಭೆಯ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರೊಂದಿಗೆ ಶ್ರಮಿಸುವುದಾಗಿ ತಿಳಿಸಿದರು.