ಬಳ್ಳಾರಿ: ಕನ್ನಡ ಭಾಷೆ ಹಾಗೂ ಸಂಸ್ಕೃತಿ ಪ್ರಗತಿಗೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಸದಸ್ಯರು ಕಾಳಜಿಯಿಂದ ಕಾರ್ಯನಿರ್ವಹಿಸಬೇಕು. ಜಿಲ್ಲೆಯಲ್ಲಿ ಹೆಚ್ಚು ಘಟಕಗಳನ್ನು ಸ್ಥಾಪಿಸಿ, ಹೋರಾಟದ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎಂದು ನಾರಾಯಣಗೌಡ ಬಣದ ಕರವೇ ಜಿಲ್ಲಾಧ್ಯಕ್ಷ ಅಂಗಡಿ ಶಂಕರ ಡಿ. ಕಗ್ಗಲ್ ಹೇಳಿದರು.
ನಗರದಲ್ಲಿ ಜರುಗಿದ ಕರವೇ ಜಿಲ್ಲೆಯ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬಳ್ಳಾರಿ ಜಿಲ್ಲೆಯ ಜನರ ಅದೃಷ್ಟವೆಂಬಂತೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳುವ ಅವಕಾಶ ಸಿಕ್ಕಿದೆ. ಸಮ್ಮೇಳನದಲ್ಲಿ ಎಲ್ಲ ಕರವೇ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಅಪರೂಪಕ್ಕೆ ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕನ್ನಡಮ್ಮ ಸೇವೆಗೆ ಮುಂದಾಗಬೇಕು. ಕರವೇ ಕಾರ್ಯಕರ್ತರು ಗ್ರಾಮೀಣ ಪ್ರದೇಶದಲ್ಲಿ ವಿವಿಧ ಕನ್ನಡಪರ ಕಾರ್ಯಕ್ರಮಗಳನ್ನು ಸಂಘಟಿಸಬೇಕು. ಈ ಮೂಲಕ ಕನ್ನಡ ಸೇವೆಯನ್ನು ಮತ್ತಷ್ಟು ಪ್ರಚುರಗೊಳಿಸಬೇಕು ಎಂದು ಹೇಳಿದರು. ಸಭೆಯಲ್ಲಿ ಭಾಗವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ಸಮ್ಮೇಳನ ಯಶಸ್ವಿಗೊಳಿಸುವ ದಿಸೆಯಲ್ಲಿ ಜಿಲ್ಲೆಯ ಎಲ್ಲ ಸಂಘಟನೆಗಳು ಕಾರ್ಯೋನ್ಮುಖವಾಗಬೇಕು. ಪ್ರತಿಯೊಬ್ಬರೂ ಜವಾಬ್ದಾರಿ ನಿರ್ವಹಿಸಿ ಕಾರ್ಯನಿರ್ವಹಿಸಿದರೆ ಸಮ್ಮೇಳನ ಯಶಸ್ವಿಗೊಳಿಸಬಹುದು ಎಂದರು.ಸಂಘಟನೆಯ ರಾಜ್ಯ ಉಪಾಧ್ಯಕ್ಷ ಚಾನಾಳ್ ಶೇಖರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪದಾಧಿಕಾರಿಗಳಾದ ಕೆ.ಎಂ. ಶಿವಕುಮಾರ್, ಸಂಗನಕಲ್ಲು ಹನುಮಂತರೆಡ್ಡಿ, ವೇಣಿವೀರಾಪುರ ಕಿಶೋರ್, ಕೋಳೂರು ಜಿ. ತಿಪ್ಪಾರೆಡ್ಡಿ, ತೋಟದ ವೀರೇಶ್, ಶಬರಿ ರವಿಕುಮಾರ್, ಹೊನ್ನನಗೌಡ, ಹುಬ್ಬಳಿ ರಾಜಶೇಖರ್, ಸೋಮಶೇಖರ್, ಆನಂದಗೌಡ, ಕುರುಗೋಡು ತಾಲೂಕು ಅಧ್ಯಕ್ಷ ಗೆಣಿಕೆಹಾಳ್ ವೀರೇಶ್, ಕಂಪ್ಲಿ ತಾಲೂಕು ಅಧ್ಯಕ್ಷ ಮೆಟ್ರಿ ರಾಜಶೇಖರ್, ಕುಡತಿನಿ ಹೋಬಳಿ ಅಧ್ಯಕ್ಷ ಬಾವಿ ಶಿವಕುಮಾರ್, ಮಲ್ಲಿಕಾರ್ಜುನ ಚಾನಾಳ್ ಭಾಗವಹಿಸಿದ್ದರು. ಇದೇ ವೇಳೆ ಕರವೇ ಬಳ್ಳಾರಿ ತಾಲೂಕು ಅಧ್ಯಕ್ಷರನ್ನಾಗಿ ಸಿರಿವಾರ ದಿವಾಕರ ಅವರನ್ನು ನೇಮಕ ಮಾಡಲಾಯಿತು.