ಕನ್ನಡಪ್ರಭ ವಾರ್ತೆ ಹುನಗುಂದ
ಹುನಗುಂದ ಸಾರಿಗೆ ಘಟಕ ಪ್ರಾರಂಭವಾಗಿದ್ದರೂ ನ್ಯಾಯುತವಾಗಿ ಸಿಗಬೇಕಾದ ಸಾರಿಗೆ ಮಾರ್ಗಗಳು ಸಿಕ್ಕಿಲ್ಲ. ಹೊಸ ಮಾರ್ಗಗಳಲ್ಲಿ ಬಸ್ ಓಡಿಸುತ್ತಿಲ್ಲ. ಸಿಬ್ಬಂದಿ ಕೊರತೆ ಸಮಸ್ಯೆಯೂ ಅತಿಯಾಗಿದೆ. ಈ ಎಲ್ಲದರ ಕುರಿತು ಹುನಗುಂದ ನಾಗರಿಕ ಸೇವಾ ಸಮಿತಿ ನಿರಂತರ ಪತ್ರ ವ್ಯವಹಾರ ಮಾಡಿದರೂ ಸಂಸ್ಥೆಯ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಅನಿವಾರ್ಯವಾಗಿ ಈಗ ಬೀಗ ಹಾಕಿ ಪ್ರತಿಭಟನೆ ಮಾಡುವ ಸ್ಥಿತಿ ಬಂದಿದೆ ಎಂದು ಕರವೇ ತಾಲೂಕು ಘಟಕದ ಅಧ್ಯಕ್ಷ ರೋಹಿತ ಬಾರಕೆರ ಆರೋಪಿಸಿದರು.
ಹುನಗುಂದ ಮತ್ತು ಬದಾಮಿ ಘಟಕಗಳಿಂದ ಗುಡೂರ ಮಾರ್ಗವಾಗಿ ಬದಾಮಿ-ಹುನಗುಂದ ಬಸ್ ಸೇವೆ ಆರಂಭಿಸುವ ಗಜೇಂದ್ರಗಡ ಮತ್ತು ಲಿಂಗಸೂರ ಘಟಕಗಳಿಂದ ಇಳಕಲ್‌ಗೆ ಬರುವ ಎಲ್ಲ ಬಸ್‌ಗಳನ್ನು ಹುನಗುಂದವರೆಗೆ ಮುಂದುವರಿಸುವ ಬೇಡಿಕೆ ಬೇಡಿಕೆಯಾಗಿಯೇ ಉಳಿದಿದೆ. ಗಂಗಾವತಿಯಿಂದ ವಿಜಯಪುರಕ್ಕೆ ಚಲಿಸುವ ಕೆಲವು ಬಸ್‌ಗಳು ಹುನಗುಂದ ಪಟ್ಟಣಕ್ಕೆ ಬರದೇ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಪ್ರಯಾಣಿಕರನ್ನು ಇಳಿಸಿ ಹೋಗುತ್ತಿದ್ದಾರೆ. ಇದರಿಂದ ರಾತ್ರಿ ಸಮಯದಲ್ಲಿ ಮಹಿಳೆಯರು ಮತ್ತು ಮಕ್ಕಳು ಒಂದು ಕಿಮೀ ನಡೆದು ಬರುವ ಸ್ಥಿತಿ ನಿರ್ಮಾಣವಾಗಿದೆ. ಡಿಲಕ್ಸ್, ಐರಾವತ್ ಸಾರಿಗೆ ಸೇರಿ ಸಂಸ್ಥೆಯ ಅವತಾರ ಬುಕಿಂಗ್ ಆ್ಯಪ್‌ನಲ್ಲಿ ಹುನಗುಂದ ಪಟ್ಟಣದ ಹೆಸರೇ ಇಲ್ಲ. ಇವೆಲ್ಲವೂ ಸೇರಿ ಹುನಗುಂದ ಪಟ್ಟಣದಿಂದ ಆರಂಭಿಸಬೇಕಾದ ನೂತನ ಮಾರ್ಗಗಳ ಕುರಿತು ಪ್ರತಿಭಟನಾಕಾರರು ಒತ್ತಾಯಿಸಿದರು.ಸ್ಥಳಕ್ಕಾಗಮಿಸಿದ ಘಟಕ ವ್ಯವಸ್ಥಾಪಕ ಅರವಿಂದ ಭಜಂತ್ರಿ, ಮೆಲಧಿಕಾರಿಗಳ ಗಮನಕ್ಕೆ ತಂದು ಬೇಡಿಕೆ ಈಡೇರಿಸುವ ಭರವಸೆ ನೀಡಿದರಾದರೂ ಪ್ರತಿಭಟನಾಕಾರರು ಒಪ್ಪಲಿಲ್ಲ. ಘಟಕ ಆರಂಭವಾದಾಗಿನಿಂದಲೂ ಈ ಬೇಡಿಕೆಗಳಿದ್ದು, ಅಧಿಕಾರಿಗಳು ಈಡೇರಿಸಿಲ್ಲ. ವಿಭಾಗೀಯ ನಿಯಂತ್ರಣಾಧಿಕಾರಿಗಳು ಸ್ಥಳಕ್ಕಾಗಿಮಸುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಘಟಕ ವ್ಯವಸ್ಥಾಪಕರು ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಪ್ರತಿಭಟನಾಕಾರರ ಕೈಗೆ ಕೊಟ್ಟರು, ಈ ಕುರಿತು ಚರ್ಚಿಸಲು ಗುರುವಾರ ಹುನಗುಂದ ಘಟಕಕ್ಕೆ ಬರುವ ಭರವಸೆಯನ್ನು ಡಿಸಿ ನೀಡಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು.