ನರೇಗಲ್ಲ: ನರೇಗಲ್ಲ ಭಾಗದ ಜನರ ಜೀವನಾಡಿಯಾಗಿರುವ ನರೇಗಲ್ಲ-ತೊಂಡಿಹಾಳ ರಸ್ತೆಯನ್ನು ಡಾಂಬರೀಕರಣ ಮಾಡಬೇಕು ಮತ್ತು ಪಟ್ಟಣದಲ್ಲಿ ನ್ಯಾಯಬೆಲೆ ಅಂಗಡಿಯನ್ನು ತೆರೆಯಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಸದಸ್ಯರು ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.ಹಳೆ ಬಸ್‌ನಿಲ್ದಾಣದಿಂದ ನಾಡಕಚೇರಿಯವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳಿಗೆ ಗಜೇಂದ್ರಗಡ ತಹಸೀಲ್ದಾರ್ ಮೂಲಕ ಮನವಿ ಅರ್ಪಿಸಿದರು. ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಹನಮಂತ ಅಬ್ಬಿಗೇರಿ ನರೇಗಲ್ಲದಿಂದ ಕೊಪ್ಪಳ, ಹೊಸಪೇಟೆ, ಬೆಂಗಳೂರಿಗೆ ಹೋಗಲು ಸಮೀಪದ ಮಾರ್ಗಕೊಂಡಿಯಾಗಿರುವ ನರೇಗಲ್ಲ-ತೊಂಡಿಹಾಳ ರಸ್ತೆ ಕೆಟ್ಟು ಸಂಚಾರಕ್ಕೆ ಬಾರದಂತಾಗಿ ಎಷ್ಟೋ ವರ್ಷಗಳಾದವು.
8 ಕಿಮೀ ದೂರವನ್ನು ಕ್ರಮಿಸಲು ಏನಿಲ್ಲವೆಂದರೂ ಒಂದೂವರೆ ತಾಸು ಬೇಕಾಗುತ್ತದೆ. ಇದರಿಂದ ಈ ದಾರಿಯಲ್ಲಿ ಸಾಗುವ ಎಲ್ಲರಿಗೂ ಬಹಳ ಪ್ರಯಾಸವಾಗುತ್ತಿದೆ. ಅಲ್ಲದೆ ತೊಂಡಿಹಾಳ, ಬಿನ್ನಾಳ, ಬಂಡಿಹಾಳದ ಜನತೆಗೆ ಅತ್ಯಂತ ಹತ್ತಿರದ ದೊಡ್ಡ ಊರೆಂದರೆ ಅದು ನರೇಗಲ್ಲ. ಹೀಗಾಗಿ ಅವರು ರೇಶನ್‌ಗಾಗಿ, ಆಸ್ಪತ್ರೆಗಾಗಿ, ಚಿಕ್ಕಪುಟ್ಟ ಕೆಲಸಗಳಿಗಾಗಿ ನರೇಗಲ್ಲನ್ನೇ ಆಶ್ರಯಿಸಿದ್ದಾರೆ ಎಂದರು.ನರೇಗಲ್ಲದ ಬಹುತೇಕ ಜಮೀನುಗಳು ಇದೇ ರಸ್ತೆಯಲ್ಲಿದ್ದು, ಅದಕ್ಕೂ ಇದು ಸಂಪರ್ಕದ ರಸ್ತೆಯಾಗಿದೆ. ರೈತರೂ ಸಹ ತಮ್ಮ ಹೊಲಗಳಿಗೆ ಹೋಗಲು ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ಆದ್ದರಿಂದ ಈ ತಕ್ಷಣವೇ ನರೇಗಲ್ಲ-ಬಂಡಿಹಾಳ ರಸ್ತೆಯನ್ನು ದುರಸ್ತಿಗೊಳಿಸಿ ಡಾಂಬರೀಕರಣ ಮಾಡಬೇಕೆಂದು ಅಬ್ಬಿಗೇರಿ ಆಗ್ರಹಿಸಿದರು. ಪಟ್ಟಣದ ಜನಸಂಖ್ಯೆ ಈಗ ಇಪ್ಪತ್ತೈದು ಸಾವಿರವನ್ನೂ ಮಿಕ್ಕಿದೆ. ಇಲ್ಲಿ ಮೊದಲು ನಾಲ್ಕು ನ್ಯಾಯಬೆಲೆ ಅಂಗಡಿಗಳಿದ್ದವು. ಒಂದು ಅಂಗಡಿ ರದ್ದಾಗಿರುವದರಿಂದ ಇರುವ ಮೂರು ಅಂಗಡಿಗಳಲ್ಲಿ ಜನಸಂದಣಿ ಹೆಚ್ಚಾಗುವುದರ ಜೊತೆಗೆ, ಸಮಯವೂ ವ್ಯರ್ಥವಾಗುತ್ತಿದೆ. ನಾಲ್ಕನೆ ನ್ಯಾಯಬೆಲೆ ಅಂಗಡಿಗೆ ಬೇಕಾದ ಎಲ್ಲ ಸಿದ್ಧತೆಗಳು ಮುಗಿದಿದ್ದರೂ ಅಧಿಕಾರಿಗಳು ಅದಕ್ಕೆ ಇನ್ನೂ ಅಂಗೀಕಾರ ನೀಡುತ್ತಿಲ್ಲ. ಆದ್ದರಿಂದ ನಾಲ್ಕನೆ ನ್ಯಾಯಬೆಲೆ ಅಂಗಡಿಯನ್ನು ತಕ್ಷಣವೆ ಪ್ರಾರಂಭಿಸಬೇಕು. ಇಲ್ಲವಾದರೆ ಕರವೇ ಈ ಎರಡೂ ಬೇಡಿಕೆಗಳಿಗಾಗಿ ನರೇಗಲ್ಲ ಬಂದ್ ಮಾಡಿ ಉಗ್ರ ಹೋರಾಟ ಪ್ರಾರಂಭಿಸಬೇಕಾದೀತು ಎಂದು ಸರ್ಕಾರವನ್ನು ಎಚ್ಚರಿಸಿದರು. ಈ ವೇಳೆ ಜಿಲ್ಲಾ ಗೌರವಾಧ್ಯಕ್ಷ ಉಮೇಶ ಮೇಟಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಹೊಗೆಸೊಪ್ಪಿನ, ರೈತ ಘಟಕಾಧ್ಯಕ್ಷ ಶರಣಪ್ಪ ಕರಮುಡಿ, ಕಾರ್ಮಿಕ ಘಟಕಾಧ್ಯಕ್ಷ ತೌಸಿಫ್ ಢಾಲಾಯತ್, ನರೇಗಲ್ಲ ಘಟಕಾಧ್ಯಕ್ಷ ಸಿರಾಜ ಹೊಸಮನಿ, ನರಗುಂದ ತಾಲೂಕಾಧ್ಯಕ್ಷ ನಬಿಸಾಬ ಕಿಲ್ಲೇದಾರ, ರೋಣ ತಾಲೂಕಾಧ್ಯಕ್ಷ ಶರಣಪ್ಪ ಉಪ್ಪಾರ, ಗದಗ ತಾಲೂಕಾಧ್ಯಕ್ಷ ಮುತ್ತಣ್ಣ ಚೌಡನವರ, ಲಕ್ಷ್ಮೇಶ್ವರ ತಾಲೂಕಾಧ್ಯಕ್ಷ ಲೋಕೇಶ ಸುತಾರ, ಮಹಿಳಾಧ್ಯಕ್ಷೆ ಸಾವಿತ್ರಿ ಅತ್ತಿಗೇರಿ, ರಾಮನಗೌಡ ಸೇರಿದಂತೆ ನಗರ ಘಟಕ ಅಧ್ಯಕ್ಷರು, ಗ್ರಾಮ ಘಟಕದ ಅಧ್ಯಕ್ಷರು, ನೂರಾರು ಮಹಿಳೆಯರು, ಕಾರ್ಯಕರ್ತರು ಪಾಲ್ಗೊಂಡಿದ್ದರು.