- ಗುನಗುಡುತ್ತಿರುವ ಕರಡಿ
ಕನ್ನಡಪ್ರಭ ವಾರ್ತೆ ಕೊಪ್ಪಳ
ಎಲ್ಲೂ ಹೋಗಲ್ಲ, ಬಿಜೆಪಿ ಬಿಟ್ಟು ಎಲ್ಲೂ ಹೋಗಲ್ಲ ಎಂದು ಸಂಸದ ಸಂಗಣ್ಣ ಕರಡಿ ಗುನುಗುಡುತ್ತಿರುವಂತೆ ಕಾಣುತ್ತಿದೆ. ಇದನ್ನು ಅರಿತಿರುವ ಬಿಜೆಪಿ ನಾಯಕರು ಕರಡಿ ಬೆಂಬಲಿಗರ ಆಕ್ರೋಶ ತಣ್ಣಗಾಗುವಂತೆ ಮಾಡುತ್ತಿದ್ದಾರೆ.ಟಿಕೆಟ್ ಘೋಷಣೆಯಾದ ತಕ್ಷಣ ಇದ್ದ ಕಾವು ಈಗ ಇಲ್ಲದಾಗಿದೆ. ಮೊದಲ ದಿನ ಸಂಗಣ್ಣ ಅವರ ನಿವಾಸಕ್ಕೆ ಬಿಜೆಪಿ ನಾಯಕರು ಆಗಮಿಸಿ, ಮನವೊಲಿಸಲು ಮುಂದಾದಾಗ ಬೆಂಬಲಿಗರ ಆಕ್ರೋಶದ ಬಿಸಿ ತಟ್ಟಿತು. ಎರಡು ದಿನ ಕಳೆಯುತ್ತಿದ್ದಂತೆ ಕರಡಿ ಬೆಂಬಲಿಗರು ಸ್ವಾಭಿಮಾನಿ ಸಭೆ ನಡೆಸಿದಾಗ ಆಕ್ರೋಶ ಸ್ಫೋಟಗೊಳ್ಳುವಂತೆ ಆಗಿತ್ತು. ಆದರೆ, ನಾಲ್ಕು ದಿನ ಕಾದು ನೋಡೋಣ ಎಂದು ತಮ್ಮ ನಾಯಕ ಹೇಳುತ್ತಿದ್ದಂತೆ ಬೆಂಬಲಿಗರಲ್ಲಿದ್ದ ಆಕ್ರೋಶ ತಣ್ಣಗಾಯಿತು.
ಈಗ ರಾಜ್ಯ ನಾಯಕರ ಜತೆಗೆ ಸಭೆ ನಡೆಸಿ, ಸಂಗಣ್ಣ ಅವರ ಮನವೊಲಿಸುವುದಕ್ಕೆ ವೇದಿಕೆ ಸಿದ್ಧ ಮಾಡಿಕೊಂಡಿದ್ದಾರೆ.
ಕರಡಿ ನೋವು ತಣಿಸಲು ಮುಂದಾಗಿರುವ ಬಿಜೆಪಿ ನಾಯಕರು ಬೆಂಗಳೂರಿನಲ್ಲಿ ನಾಯಕರ ಜತೆಯಲ್ಲಿ ಮಾತುಕತೆಗೆ ವೇದಿಕೆ ಸಿದ್ಧ ಮಾಡಿದ್ದಾರೆ. ಅದಕ್ಕಿನ್ನು ದಿನಾಂಕ ನಿಗದಿಯಾಗಿಲ್ಲ. ಈಗ ಇರುವ ಮಾಹಿತಿಯ ಪ್ರಕಾರ ಭಾನುವಾರ ನಡೆಯುವ ಸಾಧ್ಯತೆ ಇದೆ. ಆದರೆ, ಇದಕ್ಕೆ ಸಂಸದರು ಚುನಾವಣಾ ಸಮಿತಿಯ ಎಲ್ಲ ಸದಸ್ಯರು ಇರಬೇಕು ಎನ್ನುವ ಬೇಡಿಕೆ ಇಟ್ಟಿದ್ದಾರೆ. ಇದು ಬಿಜೆಪಿ ನಾಯಕರಿಗೆ ಕಷ್ಟಸಾಧ್ಯ ಎನ್ನುವಂತಾಗಿದೆ. ಸದ್ಯಕ್ಕೆ ಇರುವ ಮಾಹಿತಿಯ ಪ್ರಕಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಉಪಸ್ಥಿತಿಯಲ್ಲಿಯೇ ಮಾತುಕತೆ ನಡೆಯಲಿದೆ.
ಆದರೆ, ಕರಡಿ ತಮ್ಮ ಬೆಂಬಲಿಗರ ಕೋರಿಕೆಯಂತೆ ಟಿಕೆಟ್ ಘೋಷಣೆ ಮರುಪರಿಶೀಲನೆ ಮಾಡುವಂತೆ ಮನವಿ ಮಾಡುವ ಸಾಧ್ಯತೆ ಇದೆ. ಆದರೆ, ಇದು ಎಷ್ಟರ ಮಟ್ಟಿಗೆ ಸಾಧ್ಯವಿದೆ ಎನ್ನುವುದು ಮಾತುಕತೆಯ ವೇಳೆಯೇ ಗೊತ್ತಾಗಲಿದೆ.