ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಯಲಿಯೂರು ಸರ್ಕಲ್ ಸಮೀಪವಿರುವ ಅನಿಕೇತನ ಸ್ಕೂಲ್ ಆಫ್ ಎಜುಕೇಷನ್ ಹಾಗೂ 14ನೇ ಕರ್ನಾಟಕ ಬೆಟಾಲಿಯನ್ ಎಸಿಸಿ ಮೈಸೂರು ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಲೆಫ್ಟಿನೆಂಟ್ ಕರ್ನಲ್ ಆರ್. ಎಚ್. ಸಂದೀಪ್ ಕಾರ್ಗಿಲ್ ಯುದ್ಧ ಸಂದರ್ಭವನ್ನು ವಿವರಿಸಿದರು.
ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಯೋಗೇಂದ್ರ ಸಿಂಗ್ ಯಾದವ್ , ವಿಕ್ರಂ ಭಾತ್ರರಂತಹ ಯೋಧರ ಸಾಹಸವನ್ನು ವರ್ಣಿಸಿದರು. ಅನಿಕೇತನ ಶಾಲೆಯಲ್ಲೂ ಅರ್ಥಪೂರ್ಣವಾಗಿ ಕಾರ್ಯಕ್ರಮ ಆಯೋಜಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಪ್ರಾಂಶುಪಾಲ ಡಾ.ರಾಮಲಿಂಗಯ್ಯ ಮಾತನಾಡಿ, ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ, ಭಾವನೆ ಮೂಡಿಸಲು 14ನೇ ಕರ್ನಾಟಕ ಬೆಟಾಲಿಯನ್ ಮೈಸೂರು ಸಹಯೋಗದಲ್ಲಿ ಕಾರ್ಗಿಲ್ ವಿಜಯೋತ್ಸವವನ್ನು ಪ್ರತಿ ವರ್ಷ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಆಪರೇಷನ್ ಸಿಂದೂರ ಯುದ್ಧದಲ್ಲಿ ಭಾಗಿಯಾಗಿ ರಜೆ ಮೇಲೆ ಆಗಮಿಸಿದ ಯೋಧ ಕಾರ್ತಿಕ್ ಯುದ್ಧದ ನಾಲ್ಕು ದಿನಗಳ ಅನುಭವ ಹಂಚಿಕೊಂಡರು. ಇದೇ ವೇಳೆ ಮೈಸೂರಿನ ಕೀರ್ತನಾ ಎಂಬ ಎರಡು ವರ್ಷದ ಮಗುವಿನ ವೈದ್ಯಕೀಯ ಚಿಕಿತ್ಸೆಗಾಗಿ ಹಣವನ್ನು ಸಂಗ್ರಹ ಮಾಡಿ ಕುಟುಂಬಸ್ಥರಿಗೆ ನೀಡಲಾಯಿತು.ಇದಕ್ಕೂ ಮುನ್ನ ಎನ್ ಸಿಸಿ ಕೆಡೆಟ್ ಗಳು, ಎಸಿಸಿಸಿ ಅಧಿಕಾರಿಗೆ ಸಶಸ್ತ್ರ ಗೌರವ ನೀಡುವ ಮೂಲಕ ಕಾರ್ಗಿಲ್ ಯೋಧರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಈ ವೇಳೆ ಅನಿಕೇತನ ಸ್ಕೂಲ್ ಆಫ್ ಎಜುಕೇಷನ್ ಕಾರ್ಯದರ್ಶಿ ಎಚ್.ಎಸ್.ಚುಂಚೇಗೌಡ ಸೇರಿ ಹಲವರು ಇದ್ದರು. ಎಸಿಸಿ ತಂಡಗಳು ದೇಶದ ಯೋಧರನ್ನು ಬಿಂಬಿಸುವ ಸೃತ್ಯಗಳನ್ನು ಪ್ರದರ್ಶಿಸಿ ಗಮನ ಸೆಳೆದರು.
ಸುಬ್ರಮಣ್ಯೇಶ್ವರ ಸ್ವಾಮಿಗೆ ಪೂಜೆಮಂಡ್ಯನಗರದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದ ಶ್ರೀ ಸುಬ್ರಮಣ್ಯೇಶ್ವರ ಸ್ವಾಮಿಗೆ ನಾಗರ ಪಂಚಮಿ ಪ್ರಯುಕ್ತ ವಿಶೇಷ ಫಲಪಂಚಾಮೃತ ಅಭಿಷೇಕ, 108 ಲೀಟರ್ ಹಾಲಿನ ಅಭಿಷೇಕ, ನಂತರ ಬೆಳ್ಳಿ ಕವಚಧಾರಣೆ, ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ನಡೆಯಿತು.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಾಗದೇವರ ಕೃಪೆಗೆ ಪಾತ್ರರಾದರು. ದೇವಸ್ಥಾನದ ಪ್ರಧಾನ ಅರ್ಚಕರಾದ ಎನ್ ಗೋಪಿನಾಥ್, ಚಿದಂಬರ, ನರಸಿಂಹ, ಹನುಮಂತು ತಂಡದೊಂದಿಗೆ ಪೂಜಾ ಕಾರ್ಯಕ್ರಮ ನೆರವೇರಿತು.ನಾಳೆ, ನಾಡಿದ್ದು ಕುಂಭಾಭಿಷೇಕ, ರಥೋತ್ಸವ
ಮಂಡ್ಯ: ತಾಲೂಕಿನ ಕೆರಗೋಡು ಗ್ರಾಮದ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್‌ನಿಂದ ಆ.1 ಮತ್ತು 2 ರಂದು 8ನೇ ವರ್ಷದ ವಾರ್ಷಿಕೋತ್ಸವ, ಕುಂಭಾಭಿಷೇಕ, ರಥೋತ್ಸವವು ನಡೆಯಲಿದೆ. ದೇಗುಲದ ಆವರಣದಲ್ಲಿ ಅರ್ಚಕ ರಾಕೇಶ್‌ಶಾಸ್ತ್ರಿ ನೇತೃತ್ವದಲ್ಲಿ ದೇವತಾ ಕಾರ್ಯಕ್ರಮಗಳು ನಡೆಯಲಿವೆ. ಮಳೆ, ಬೆಳೆ ಹಾಗೂ ಗ್ರಾಮಾಭಿವೃದ್ಧಿಗಾಗಿ ಆ.1 ರಂದು ಸಂಜೆ ಗೋಧೂಳಿ ಮುಹೂರ್ತದಲ್ಲಿ ತೀರ್ಥ ಸಂಗ್ರಹ, ಯಾಗಶಾಲೆ ಪ್ರವೇಶ, ಗಣಪತಿ ಪೂಜೆ, ದೇವನಂದಿ ಸೇರಿದಂತೆ ಹಲವು ಪೂಜಾ ಕೈಂಕರ್ಯಗಳು ಜರುಗಲಿದೆ. ಆ.2 ರಂದು ಬೆಳಗ್ಗೆ ನವಗ್ರಹ ಮೃತ್ಯುಂಜಯ ಮತ್ತು ಗಣಪತಿ, ಸುಬ್ರಹ್ಮಣ್ಯ, ಅಯ್ಯಪ್ಪಸ್ವಾಮಿಯ ಕಳಸಾರಾಧನೆ, ಹೋಮ, ಮಹಾಪೂರ್ಣಾಹುತಿ, ಪಂಚಾಮೃತಾಭಿಷೇಕ, ಕುಂಭಾಭಿಷೇಕ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ. ನಂತರ ರಥೋತ್ಸವವು ಗ್ರಾಮದ ಪ್ರಮುಖ ರಸ್ತೆಯಲ್ಲಿ ಸಾಗಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಸೋಮಶೇಖರ್ ಕಲ್ಮಂಟಿದೊಡ್ಡಿ, ಬಸಂತ್ ಕುಮಾರ್ ಕೆರಗೋಡು ತಿಳಿಸಿದ್ದಾರೆ.