ಕನ್ನಡಪ್ರಭ ವಾರ್ತೆ ಹಾಸನ
ನಗರದ ಕುವೆಂಪು ರಸ್ತೆ ಬಳಿ ಇರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಉದ್ಯಾನವನದಲ್ಲಿರುವ ಹುತಾತ್ಮರ ಸ್ಮಾರಕದ ಬಳಿ ಶುಕ್ರವಾರ ಕಾರ್ಗಿಲ್ ವಿಜಯ್ ದಿವಸ್ ಆಚರಣೆಯನ್ನು ಸ್ಮಾರಕಕ್ಕೆ ಪುಷ್ಪವನ್ನು ಅರ್ಪಿಸಿ ನಮನ ಸಲ್ಲಿಸಿ ಎರಡು ನಿಮಿಷ ಮೌನ ಆಚರಿಸಿ ಸಿಹಿ ಹಂಚುವುದರ ಮೂಲಕ ಗೌರವ ಸಲ್ಲಿಸಲಾಯಿತು. ಇದೆ ವೇಳೆ ಡಿವೈಎಸ್ಪಿ ವೆಂಕಟೇಶ್ ನಾಯ್ಡು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ೧೯೯೯ ಮೇ ತಿಂಗಳಿನಲ್ಲಿ ಆರಂಭವಾದ ಕಾರ್ಗಿಲ್ ಯುದ್ಧ ಜುಲೈ ಅಂತ್ಯದ ತನಕ ಅಂದರೆ ಸುಮಾರು ಎರಡು ತಿಂಗಳ ಕಾಲ ನಡೆಯಿತು. ಈ ಯುದ್ಧದಲ್ಲಿ ಭಾರತೀಯ ಸೇನೆ ವಿಜಯ ಸಾಧಿಸಿತ್ತು. ಈ ಯುದ್ದದಲ್ಲಿ ಅನೇಕ ವೀರ ಯೋಧರು ಹುತಾತ್ಮರಾದರು. ಕಾರ್ಗಿಲ್ ವಿಜಯ್ ದಿವಸ್ ವನ್ನು ಪ್ರತಿ ಜುಲೈ ೨೬ ರಂದು ಆಚರಣೆ ಮಾಡಲಾಗುತ್ತದೆ. ಭಾರತೀಯರಿಗೆ ಇದು ಎಂದು ಮರೆಯದ ಮತ್ತು ಮರೆಯದ ಅವಿಸ್ಮರಣೀಯ ದಿನಗಳಲ್ಲಿ ಜುಲೈ ೨೬ ಕೂಡಾ ಹೌದು. ಜಮ್ಮು ಕಾಶ್ಮೀರದ ಕಾರ್ಗಿಲ್‌ನಲ್ಲಿ ನಡೆದ ಈ ಯುದ್ಧದಲ್ಲಿ ಪಾಕಿಸ್ತಾನವನ್ನು ನಮ್ಮ ಭಾರತದ ವೀರ ಯೋಧರು ಸದೆಬಡಿದು ಅವರು ಆಕ್ರಮಿಸಿಕೊಂಡಿದ್ದ ಜಾಗವನ್ನು ವಶಕ್ಕೆ ಪಡೆದ ದಿನವಾಗಿದೆ ಎಂದರು. ನಮ್ಮ ಯೋಧರು ತಮ್ಮ ಜೀವನವನು ಬಲಿದಾನ ಮಾಡಿ ನಮ್ಮನ್ನು ಕಾಪಾಡಿದ್ದಾರೆ. ಈ ದಿವಸವನ್ನು ಮರೆಯುವಾಗಿಲ್ಲ ಎಂದು ತಿಳಿಸಿದರು. ಕರ್ನಲ್ ನಟೇಶ್ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಭಾರತ ವಿಜಯ ಪತಾಕೆಯನ್ನು ಹಾರಿಸಿ ೨೪ ವರ್ಷ ತುಂಬುತ್ತದೆ. ಈ ಯುದ್ಧದಲ್ಲಿ ಲೇಹ್ ಹೆದ್ದಾರಿಯವರೆಗೆ ನುಗ್ಗಿ ಬಂದಿದ್ದ ಪಾಕ್ ಸೇನೆಯನ್ನು ಭಾರತೀಯ ಸೇನೆ ಕೆಚ್ಚೆದೆಯಿಂದ ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು. ಈ ಯುದ್ಧದಲ್ಲಿ ಭಾರತೀಯ ಸೇನೆಯ ಅಧಿಕಾರಿಗಳು ಸೇರಿದಂತೆ ಸುಮಾರು ೫೨೭ ಭಾರತೀಯ ಯೋಧರು ಹುತಾತ್ಮರಾದರು ಎಂದು ಬೇಸರವ್ಯಕ್ತಪಡಿಸಿದರು. ವಿಜಯವನ್ನು ಕೊಟ್ಟಿರುವ ದಿವಸವಾಗಿದ್ದು, ಈ ವಾರ್‌ನಲ್ಲಿ ದೇಶ ಉಳಿಸಲು ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ. ಈಗಿನ ಮಕ್ಕಳು ಈ ಬಗ್ಗೆ ತಿಳಿದು ಸಮಾಜದಲ್ಲಿ ಒಳ್ಳೆ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.ನಿವೃತ್ತ ಯೋಧರ ಸಂಘದ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ನಮ್ಮ ದೇಶವನ್ನು ಕಾಯಲು ತಮ್ಮ ಮಕ್ಕಳನ್ನು ಸೇನೆಗೆ ಸೇರಿಸಿರುವ ತಂದೆ ತಾಯಿಗೆ ಮೊದಲ ನಮಸ್ಕಾರವನ್ನು ತಿಳಿಸುತ್ತೇವೆ. ದೇಶ ಕಾಯುವ ಎಲ್ಲಾ ಅಣ್ಣ-ತಮ್ಮಂದಿರಿಗೂ ಇವತ್ತು ಅವರಿಗೆ ಹಾಸನದಿಂದ ನಮಸ್ಕರಿಸುತ್ತೇವೆ. ಒಂದು ದೇಶ ಕಾಯುವವರು ಇನ್ನೊಂದು ತಂದೆ ತಾಯಿ ಕಾಯುವವರು ಇವೆರಡು ಇದ್ದರೇ ನಾವು ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ಅವರಿಗೆ ಯಾವತ್ತು ತೊಂದರೆ ಆಗುವುದಿಲ್ಲ ಎಂದು ಕಿವಿಮಾತು ಹೇಳಿದರು.
ಇದೆ ವೇಳೆ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ನಿವೃತ್ತ ಯೋಧರ ಮಕ್ಕಳನ್ನು ಅಭಿನಂಧಿಸಿ ಗೌರವ ಧನ ನೀಡಿ ಗೌರವಿಸಿದರು. ಇದೆ ವೇಳೆ ವಿಜಯೋತ್ಸವವನ್ನು ಜೈಕಾರ ಹಾಕುವುದರ ಮೂಲಕ ಗೌರವಿಸಿದರು.ಕಾರ್ಯಕ್ರಮದಲ್ಲಿ ಎನ್.ಸಿ.ಸಿ. ಕಮಾಂಡೆಟ್ ಅಧಿಕಾರಿ ಪುನೀತ್ ಶರ್ಮ, ಮಾಜಿ ಯೋಧರ ಸಂಘದ ಉಪಾಧ್ಯಕ್ಷ ಗೋವಿಂದೇಗೌಡ, ಕಾರ್ಯದರ್ಶಿ ಪ್ರದೀಪ್ ಸಾಗರ್, ದೊರೆರಾಜು, ಪರಮೇಶ್ ಹಾಗೂ ಇನ್ನರ್‌ವ್ಹೀಲ್ ಕ್ಲಬ್ ನೂತನ ಅಧ್ಯಕ್ಷೆ ಡಾ. ತನುಜಾ, ಡಿ.ಆರ್. ನಳಿನಿ, ಚಾರಿಟರ್ ಪ್ರೆಸಿಡೆಂಟ್ ರತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.