ಮುಂಡರಗಿ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮುಂಡರಗಿ ತಾಲೂಕಿನ ಸಾಹಿತ್ಯದ ಸೇವೆ ಸಲ್ಲಿಸಿದವರ ಹಾಗೂ ಸಲ್ಲಿಸುತ್ತಿರುವ ಪ್ರತಿಭಾವಂತ ಸಾಹಿತಿಗಳ ಹಾಗೂ ಸಾಧಕರ ಕೃತಿಗಳ ಅವಲೋಕನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಮಾದರಿ ಕಾರ್ಯವಾಗಿದೆ. ಈ ಹಿನ್ನಲೆಯಲ್ಲಿ ಸಾಹಿತಿ, ಸ್ಥಳೀಯ ಕ.ರಾ.ಬೆಲ್ಲದ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಎಸ್.ಬಿ. ಕರಿಭರಮಗೌಡರ ಅವರು ಈ ಭಾಗದಲ್ಲಿ ಸಾಹಿತ್ಯ ಚಟುವಟಿಕೆಗಳು ವಿಸ್ತಾರವಾಗಲು ಕಾರಣೀಕರ್ತರಾಗಿದ್ದಾರೆ ಎಂದು ಕೆಸಿಸಿ ಬ್ಯಾಂಕ್ ವಿಶ್ರಾಂತ ನೌಕರ ಪ್ರೊ.ಎಸ್.ವಿ.ಪಾಟೀಲ ಹೇಳಿದರು.ಅವರು ಪಟ್ಟಣದ ಜ.ಅನ್ನದಾನೀಶ್ವರ ಕನ್ನಡ ಸಾಹಿತ್ಯ ಭವನದಲ್ಲಿ ಸಾಹಿತಿಗಳ ಕೃತಿ ಅವಲೋಕನ ಕಾರ್ಯಕ್ರಮದಲ್ಲಿ ಸಾಹಿತಿ ಎಸ್.ಬಿ.ಕರಿಭರಮಗೌಡರ ಬದುಕು ಬರಹ ಕುರಿತು ಉಪನ್ಯಾಸ ನೀಡಿದರು. ಎಸ್.ಬಿ.ಕರಿಭರಮಗೌಡರ್ ಅನೇಕ ಗ್ರಂಥಗಳನ್ನು ರಚಿಸುವುದರ ಜೊತೆಗೆ ಸ್ಥಳೀಯ ಕ.ರಾ.ಬೆಲ್ಲದ ಮಹಾವಿದ್ಯಾಲಯ ಸಾಂಸ್ಕೃತಿಕ ಮತ್ತು ಸಾಹಿತ್ಯದ ಚಟುವಟಿಕೆಗಳ ಕೇಂದ್ರವಾಗಿಸಲು ಅನೇಕ ಪ್ರತಿಭಾವಂತರು, ಸಾಹಿತಿಗಳು, ಕವಿಗಳು ಹೊರಹೊಮ್ಮಲು ಕಾರಣವಾಗಿದ್ದಾರೆ, ಅವರು ಜ.ಡಾ.ಅನ್ನದಾನೀಶ್ವರ ಸ್ವಾಮಿಗಳು ಸೇರಿದಂತೆ ನಾಡಿನ ಅನೇಕ ದಾರ್ಶನಿಕರ, ಸಾಹಿತಿಗಳ ಕುರಿತು ಕೃತಿ ರಚಿಸಿ ನಾಡಿಗೆ ನೀಡಿದ್ದಾರೆ. ಉತ್ತಮ ವಾಗ್ಮಿ ಮತ್ತು ಆಡಳಿತ ನಡೆಸಿದ ಕೀರ್ತಿ ಎಸ್.ಬಿ.ಕರಿಭರಮಗೌಡರ್ ಅವರಿಗೆ ಸಲ್ಲುತ್ತದೆ ಎಂದರು.ಹಿರಿಯರಾದ ಬಸಯ್ಯ ಗಿಂಡಿಮಠ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಲೂಕು ಕಸಾಪ ಕಳೆದ 5 ವರ್ಷಗಳಿಂದ ನಿರಂತರವಾಗಿ ಸಾಹಿತ್ಯದ ಚಟುವಟಿಕೆಗಳನ್ನು ಮಾಡಿಕೊಂಡು ಬರುತ್ತಿದೆ. ಇದೀಗ ಸ್ಥಳೀಯ ಸಾಹಿತಿಗಳ ಕೃತಿ ಅವಲೋಕ ಕಾರ್ಯಕ್ರಮ ಸ್ಥಳೀಯ ಸಾಹಿತಿಗಳ ಸಾಹಿತ್ಯವನ್ನು ಎಲ್ಲರಿಗೂ ಪರಿಚಯಿಸಲು ಪೂರಕವಾಗಿದೆ ಎಂದರು. ಸಾಹಿತಿ, ವಿಶ್ರಾಂತ ಪ್ರಾ.ಎಸ್.ಬಿ.ಕರಿಭರಮಗೌಡರ ಮಾತನಾಡಿ, ರಾಜ್ಯದಲ್ಲಿಯೇ ಮುಂಡರಗಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಜಿ.ಗಚ್ಚಣ್ಣವರ ಹಾಗೂ ಅವರ ಬಳಗ ಸಾಹಿತಿಗಳನ್ನು ಗುರುತಿಸುವ, ಅವರ ಸಾಹಿತ್ಯ ಕೃತಿಗಳನ್ನು ನಾಡಿಗೆ ಪರಿಚಯಿಸಿ, ಪ್ರೋತ್ಸಾಹಿಸುವ ಕಾರ್ಯ ಮಾದರಿಯಾಗಿದೆ ಎಂದರು.