ಕನ್ನಡಪ್ರಭ ವಾರ್ತೆ ಮಡಿಕೇರಿ
ಕರಿಕೆ ಗ್ರಾ.ಪಂ ವ್ಯಾಪ್ತಿಯ ಗ್ರಾಮಸ್ಥರು, ವಿದ್ಯಾರ್ಥಿಗಳು, ಖಾಸಗಿ ಸಂಸ್ಥೆಗಳು, ಗ್ರಾಮ ಪಂಚಾಯ್ತಿ ಕಚೇರಿ ಹಾಗೂ ಸರ್ಕಾರಿ ಕಚೇರಿ ಸಿಬ್ಬಂದಿ ನೆಟ್ವರ್ಕ್ ಸಮಸ್ಯೆ ಎದುರಿಸುತ್ತಿದ್ದಾರೆ. ತುರ್ತು ಸಂದರ್ಭಗಳಲ್ಲಿ ಕರೆ ಮಾಡುವುದಕ್ಕೂ ನೆಟ್ವರ್ಕ್ ಸಿಗುತ್ತಿಲ್ಲ. ಗ್ರಾ.ಪಂ ಕೆಲಸ ಕಾರ್ಯಗಳು ಕುಂಟಿತಗೊಳ್ಳುತ್ತಿದೆ. ಎಲ್ಲಾ ಕಾರ್ಯಚಟುವಟಿಕೆಗಳು ಅಂತರ್ಜಾಲ ಮತ್ತು ನಿಸ್ತಂತು ವ್ಯವಸ್ಥೆಯ ಮೂಲಕವೇ ನಡೆಯುವ ಈ ಕಾಲಘಟ್ಟದಲ್ಲಿ ನೆಟ್ ವರ್ಕ್ ಸೌಲಭ್ಯವೇ ಇರದಿದ್ದರೆ ಹೇಗೆ ಕಾರ್ಯ ನಿರ್ವಹಿಸುವುದು ಎಂದು ಅವರು ಪ್ರಶ್ನಿಸಿದರು.
ನೆಟ್ ವರ್ಕ್ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಂಡ ಸಂದರ್ಭ ಗ್ರಾಮಸ್ಥರ ಒತ್ತಾಯಕ್ಕೆ ಮಣಿದು ಕರಿಕೆ ಚೆತ್ತುಕಾಯದಲ್ಲಿ ನೂತನ ಬಿಎಸ್‌ಎನ್‌ಎಲ್ ಟವರ್ ನಿರ್ಮಿಸಲಾಯಿತು. ಆದರೆ ಟವರ್ ನಿರ್ಮಾಣಗೊಂಡಿತೇ ಹೊರತು ಇಲ್ಲಿಯವರೆಗೆ ಕಾರ್ಯಾರಂಭ ಮಾಡಿಲ್ಲ. ಕರಿಕೆ ವ್ಯಾಪ್ತಿಯಲ್ಲಿ ಬಿಎಸ್‌ಎನ್‌ಎಲ್ ಟವರ್ ಹೊರತು ಪಡಿಸಿದರೆ ಬೇರೆ ಯಾವುದೇ ನೆಟ್ ವರ್ಕ್ ಅಥವಾ ಟವರ್‌ಗಳಿಲ್ಲ. ನೂತನ ಟವರ್ ನಿರ್ಮಾಣಗೊಂಡಾಗ ನೆಟ್ವರ್ಕ್ ಸಮಸ್ಯೆ ಶೀಘ್ರ ಬಗೆಹರಿಯಲಿದೆ ಎನ್ನುವ ಆಶಾಭಾವನೆ ಗ್ರಾಮಸ್ಥರಲ್ಲಿತ್ತು. ಆದರೆ ಭರವಸೆ ಹುಸಿಯಾಗಿದ್ದು, ಜಿಲ್ಲಾಧಿಕಾರಿ ಸ್ವಯಂ ಆಸಕ್ತಿ ವಹಿಸಿ ಗಡಿ ಗ್ರಾಮದ ನೆಟ್ವರ್ಕ್ ಸಮಸ್ಯೆಗೆ ಮುಕ್ತಿ ಹಾಡಬೇಕೆಂದು ಬಾಲಚಂದ್ರನ್ ನಾಯರ್ ಮನವಿ ಮಾಡಿದರು.