ಕನ್ನಡಪ್ರಭ ವಾರ್ತೆ ಹಾಸನ
ಸಕಲೇಶಪುರ ತಾಲೂಕಿನ ಬೆಳ್ಳೆಕೆರೆ ಪೂರ್ಣಚಂದ್ರ ತೇಜಸ್ವಿ ಬಯಲು ರಂಗಮಂದಿರದಲ್ಲಿ ಮಾರ್ಚ್ ೮ರ ಶನಿವಾರ ಸಂಜೆ ೫ ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಜೈ ಕರ್ನಾಟಕ ಸಂಘ ಬೆಳ್ಳೆಕೆರೆ ಸಂಸ್ಥಾಪಕ ಮತ್ತು ಹಿರಿಯ ರಂಗಕರ್ಮಿ ನಿರ್ದೇಶಕ ಪ್ರಸಾದ್ ರಕ್ಷಿದಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಸಕಲೇಶಪುರ ತಾಲೂಕಿನ ಹೆಮ್ಮೆಯ ಪುತ್ರ, ಮಹಾನ್ ಮಾನವತಾವಾದಿ, ರಂಗಭೂಮಿ, ಸಾಹಿತ್ಯ, ಜಾನಪದ ಹಾಗೂ ಚಲನಚಿತ್ರ ಕ್ಷೇತ್ರಗಳಲ್ಲಿ ಮಹೋನ್ನತ ಸಾಧನೆ ಮಾಡಿದ ಎಸ್.ಕೆ. ಕರೀಂಖಾನ್ ಅವರ ಹೆಸರಿನಲ್ಲಿ ಒಂದು ಪ್ರಶಸ್ತಿಯನ್ನು ಸ್ಥಾಪಿಸಿ ಕರ್ನಾಟಕದ ಹಿರಿಯ ಜನಪರ ಧೀಮಂತರೊಬ್ಬರಿಗೆ ಅದನ್ನು ನೀಡಿ ಗೌರವಿಸುವ ಉದ್ದೇಶವನ್ನು ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಮಾರ್ಚ್ ೮ರಂದು ಕಾರ್ಯಕ್ರಮ ಜರುಗಲಿದೆ. ಲಂಕೇಶ್ ಅವರ ಜನ್ಮದಿನಾಚರಣೆಯೊಂದಿಗೆ ನಡೆಯಲಿದೆ. ಕಾರ್ಯಕ್ರಮದ ನಂತರ ಲಂಕೇಶ್ ವಿರಚಿತ ನಾಟಕ ಪ್ರದರ್ಶನವಿದೆ ಎಂದರು.ಜೈ ಕರ್ನಾಟಕ ಸಂಘವು ರಕ್ಷಿದಿಯಂತಹ ಮಲೆನಾಡಿನ ಅತಿ ಸಣ್ಣ ಹಳ್ಳಿಯಲ್ಲಿ ಪೂರ್ಣಚಂದ್ರ ತೇಜಸ್ವಿ ಸಾಂಸ್ಕೃತಿಕ ಕೇಂದ್ರವನ್ನು ಸ್ಥಾಪಿಸಿ ಕಳೆದ ನಲವತ್ತಾರು ವರ್ಷಗಳಿಂದ ನಿರಂತರವಾಗಿ ರಂಗ ಚಟುವಟಿಕೆಯೂ ಸೇರಿದಂತೆ ಸಾಂಸ್ಕೃತಿಕವಾಗಿ ರಂಗಭೂಮಿ, ಕಲೆ, ಸಾಹಿತ್ಯ, ಆರೋಗ್ಯ, ಸಾಕ್ಷರತೆ, ಕೃಷಿ, ಪರಿಸರ ಸಂರಕ್ಷಣೆಯಂತಹ ಕಾಯಕಗಳ ಜೊತೆಗೆ ಜನಪರ ಹೋರಾಟಗಳನ್ನೂ ರೂಪಿಸುತ್ತ ಬಹುಮುಖಿ ಕಾರ್ಯಕ್ರಮ ಗಳನ್ನು ನಡೆಸುತ್ತ ಬಂದಿರುವ ಸಂಸ್ಥೆಯಾಗಿದೆ ಎಂದು ಹೇಳಿದರು.
ಸಣ್ಣ ವಯಸ್ಸಿನಲ್ಲಿ ಅಪಾರ ಪ್ರತಿಭೆ ಹಾಗೂ ಜನಪರ ಕಾಳಜಿಯನ್ನು ತೋರಿ ಬಹುಬೇಗ ನಮ್ಮನ್ನು ಅಗಲಿದ "ಅಮೃತಾರಕ್ಷಿದಿ " ಹೆಸರಿನಲ್ಲಿ ಕನ್ನಡದ ಇಬ್ಬರು ಯುವ ಪ್ರತಿಭೆಗಳಿಗೆ ಪುರಸ್ಕಾರ ನೀಡುವ ಕಾರ್ಯಕ್ರಮವೂ ಇದೆ, ಇದು ಪ್ರತಿವರ್ಷ ಮುಂದುವರಿಯಲಿದೆ. ಈ ವರ್ಷದ ಪ್ರಶಸ್ತಿ ಪುರಸ್ಕೃತರ ಆಯ್ಕೆಗಾಗಿ ನಮ್ಮ ಮನವಿಯ ಮೇರೆಗೆ, ಡಾ.ಹಿ.ಚಿ.ಬೋರಲಿಂಗಯ್ಯ ಡಾ. ಎಚ್. ಆರ್.ಸ್ವಾಮಿ. ಹಾಗೂ ಹಿರಿಯ ಪತ್ರಿಕಾ ಸಂಪಾದಕ, ಕವಿ ಚ.ಹ.ರಘುನಾಥ್ ಅವರನ್ನೊಳಗೊಂಡ ಸಮಿತಿಯು ಈ ಆಯ್ಕೆಗಳನ್ನು ಮಾಡಿದೆ. "ಎಸ್.ಕೆ. ಕರೀಂಖಾನ್ ಸೌಹಾರ್ದ ಪ್ರಶಸ್ತಿಗೆ, ಹರಪನಹಳ್ಳಿಯ ಬಿ.ಪರಶುರಾಮ್ ಅವರು ಪಾತ್ರರಾಗಿದ್ದಾರೆ. ಬಿ.ಪರಶುರಾಮ್ ಅವರು ಸಾಮಾಜಿಕ ಬದ್ಧತೆಯೊಂದಿಗೆ ನಿರಂತರವಾಗಿ ಜನಪರ ಹೋರಾಟ ಗಳಲ್ಲಿಯೂ ಭಾಗಿಯಾಗುತ್ತ ಬಂದವರು. ಮೂಡಲಪಾಯ ಯಕ್ಷಗಾನ ಹಾಗೂ ಆಧುನಿಕ ರಂಗಭೂಮಿ ಹೀಗೆ ಎರಡೂ ಕ್ಷೇತ್ರಗಳಲ್ಲಿ ನಿರಂತರವಾಗಿ ದುಡಿಯುತ್ತ ಬಂದವರು. ಹರಪನ ಹಳ್ಳಿಯಲ್ಲಿ ಸಾಂಸ್ಕೃತಿಕ ಸಂಸ್ಥೆಯನ್ನು ಕಟ್ಟಿಕೊಂಡು ರಂಗ ಕಾಯಕ ವನ್ನು ಮುಂದುವರಿಸಿದ್ದಾರೆ. ಈಗಾಗಲೇ ಹಲವು ಗೌರವಗಳನ್ನು ಪಡೆದಿರುವ ಬಿ.ಪರಶುರಾಮ್ ಅವರಿಗೆ ಈಗ ಎಸ್.ಕೆ. ಕರೀಂಖಾನ್ ಪ್ರಶಸ್ತಿಯ ಗರಿ ದೊರೆತಿದೆ.ಇನ್ನು "ಅಮೃತಯಾನ " ಎಂಬ ಆತ್ಮಕಥೆಯ ಮೂಲಕ ನಾಡಿನ ಗಮನ ಸೆಳೆದ, ಜೊತೆಗೆ ಚಿತ್ರಕಲಾವಿದೆಯಾಗಿ, ರಂಗ ಕರ್ಮಿಯಾಗಿ,ಸಾಮಾಜಿಕ ಚಿಂತಕಿ ಯಾಗಿ ಸಣ್ಣ ವಯಸ್ಸಿನಲ್ಲಿಯೇ ಬಹು ಮುಖ ಪ್ರತಿಭೆಯನ್ನು ತೋರಿ ನಮ್ಮನ್ನು ಅಗಲಿದ ಅಮೃತಾ ರಕ್ಷಿದಿ ನೆನಪಿನಲ್ಲಿ ನೀಡುವ "ಅಮೃತ ಕಾವ್ಯ ಪ್ರಶಸ್ತಿ " ಪ್ರಶಸ್ತಿ ಗಾಗಿ ಈ ಇಬ್ಬರು ಯುವ ಪ್ರತಿಭಾ ವಂತರನ್ನು ಆಯ್ಕೆ ಮಾಡಿದೆ ಎಂದರು. ಮೊದಲನೆಯವರು ಸಂಘಮಿತ್ರೆ ನಾಗರಘಟ್ಟ, ಊರು ತುಮಕೂರು ಜಿಲ್ಲೆಯ ತಿಪಟೂರು. ೧೯೯೮ರಲ್ಲಿ ಜನಿಸಿದ ಇವರು ಈಗಾಗಲೇ ತಮ್ಮ ಕವನ "ಬೆನ್ನಿಗೆಲ್ಲಿಯ ಕಣ್ಣು " ಸಂಕಲನದಿಂದ ನಾಡಿನ ಗಮನ ಸೆಳೆದಿದ್ದಾರೆ. ರೇಖಾಚಿತ್ರ ಹಾಗೂ ಡಿಜಿಟಲ್ ಚಿತ್ರ ಕಲಾವಿದೆಯಾಗಿಯೂ ಇವರು ಪರಿಚಿತರು. ಇವರ ಅನೇಕ ರೇಖಾ ಚಿತ್ರಗಳು ಪ್ರಜಾವಾಣಿ, ಆಂದೋಲನ ಸೇರಿದಂತೆ ಹಲವು ಪತ್ರಿಕೆಗಳಲಿ ಪ್ರಕಟವಾಗಿವೆ. ಹಲವು ಕವಿ, ಸಾಹಿತಿಗಳ ಪುಸ್ತಕಗಳಿಗೆ ಮೆರುಗು ನೀಡಿವೆ. "ಹಿಮಪಕ್ಷಿ " ಎಂಬ ಅಂತರ್ಜಾಲ ಪತ್ರಿಕೆ ಯನ್ನು ಸಂಪಾದಿಸುತ್ತಿರುವ ಸಂಘಮಿತ್ರೆ, ಪ್ರಸ್ತುತ ಇಂಗ್ಲಿಷ್ ಅಧ್ಯಾಪಕಿಯಾಗಿ ಮೈಸೂರಿನಲ್ಲಿ ನೆಲೆಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆಯವರಾದ ವಿಶಾಲ್ ಮ್ಯಾಸರ್, ಇದೀಗ ತಾನೇ ತಮ್ಮ ವಿಜ್ಞಾನ ಪದವಿ ಪೂರ್ಣಗೊಳಿಸಿದ್ದಾರೆ. ೨೦೦೩ರಲ್ಲಿ ಜನಿಸಿದ ವಿಶಾಲ್ "ಬಟ್ಟೆಗಂಟಿದ ಬೆಂಕಿ " ಕವನ ಸಂಕಲನವನ್ನು ಪ್ರಕಟಿಸಿದ್ದು. "ಗಾಜಾ ಪಟ್ಟಿ ಮತ್ತು ಪ್ರಭುದೇವರ ಕನಸು " ಎಂಬ ಎರಡನೆಯ ಕವನ ಸಂಕಲನ ಪ್ರಕಟಣೆಗೆ ಸಿದ್ಧವಾಗಿದೆ. ವಿಶಾಲ್ ಅವರ ಮೊದಲ ನಾಟಕ ಕೃತಿ ಇತ್ತೀಚೆಗೆ ಧಾರವಾಡದಲ್ಲಿ ಡಾ.ಸಹನಾ ಪಿಂಜಾರ್ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಂಡಿದೆ ಎಂದು ಮಾಹಿತಿ ನೀಡಿದರು.ಇದೇ ವೇಳೆ ತನ್ವೀರ್ ಅಹಮದ್ ಮಾತನಾಡಿ, ಸಕಲೇಶಪುರದಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ಸಂತೋಷವಾಗಿದೆ ಎಂದರು. ತೌಫಿಕ್ ಅಹಮದ್ ಮಾತನಾಡಿ, ಪ್ರಮುಖವಾಗಿ ನಟವರ ಗಂಗಾಧರ ಎನ್ನುವ ಹಾಡು ಇಂದಿಗೂ ಕೂಡ ಪ್ರಚಲಿತವಾಗಿದೆ. ಎಸ್.ಕೆ. ಕರೀಂಖಾನ್ ಅವರ ಪುಸ್ತಕವನ್ನು ಕಾರ್ಯಕ್ರಮಕ್ಕೆ ಭಾಗವಹಿಸುವ ಎಲ್ಲಾ ಅತಿಥಿಗಳಿಗೆ ಕೊಡಲಾಗುವುದು ಮತ್ತು ಮಾರಾಟಕ್ಕೆ ಇಡಲಾಗುವುದು ಎಂದರು.
ಬನವಾಸೆ ಮಂಜು ಮಾತನಾಡಿ, ಬೆಳ್ಳಕೆರೆ ಥಿಯೇಟರ್ ಮುಂದೆ ಐತಿಹಾಸಿಕ ಸ್ಥಳವಾಗಿ ಮಾರ್ಪಡಲಿದೆ. ಮುಂದಿನ ಪೀಳಿಗೆಗೆ ಮಲೆನಾಡಿನ ಚಿಕ್ಕ ಹಳ್ಳಿಯಲ್ಲಿ ಇಂತಹ ದೊಡ್ಡ ಕಾರ್ಯಕ್ರಮಗಳು ನಡೆಯುತ್ತಿದೆ. ಕ್ರಿಯಾಶೀಲ ವ್ಯಕ್ತಿ ಪ್ರಸಾದ್ ರಕ್ಷಿದ್ ಜೊತೆ ಇದ್ದೇವೆ. ಅವರ ಹೆಸರಿನಲ್ಲಿ ಈ ಪ್ರಶಸ್ತಿ ಕೊಡುತ್ತಿರುವುದು ಉತ್ತಮವಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ರಂಗ ಕಲಾವಿದೆ ರಾಧ, ದಲಿತ ಮುಖಂಡ ನಾಗರಾಜ ಹೆತ್ತೂರು ಇತರರು ಇದ್ದರು.