ಬಂಟ್ವಾಳ: ಎಡೆಬಿಡದೆ ಸುರಿದ ಮಳೆಯನ್ನು ಲೆಕ್ಕಿಸದೆ ಬಂಟ್ವಾಳ ತಾಲೂಕಿನ ಪ್ರಮುಖ ಕ್ಷೇತ್ರಗಳಾದ ಪುರಾಣ ಪ್ರಸಿದ್ಧ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನ ಹಾಗೂ ಪ್ರಕೃತಿ ರಮಣೀಯ ನರಹರಿಪರ್ವತದ ಶ್ರೀ ಸದಾಶಿವ ದೇವಸ್ಥಾನ ಸಹಿತ ವಿವಿಧ ಕ್ಷೇತ್ರಗಳಲ್ಲಿ ಗುರುವಾರ ಆಟಿ ಅಮವಾಸ್ಯೆ ಪ್ರಯುಕ್ತ ತೀರ್ಥಸ್ನಾನ ,ವಿಶೇಷ ಉತ್ಸವ ನಡೆಯಿತು.
ಮುಂಜಾನೆಯಿಂದಲೇ ಸ್ಥಳೀಯ ಓಂಕಾರ ಫ್ರೆಂಡ್ಸ್ ಮಧ್ವ, ಓಂಕಾರ ಮಹಿಳಾ ಘಟಕ, ಓಂಕಾರ ಶ್ರೀ ಶಾರದಾ ಭಜನಾ ಮಂದಿರ ಬೆಂಗತ್ತೋಡಿ ಇವರ ವತಿಯಿಂದ ಹಾಳೆ ಮರದ ಕೆತ್ತೆಯ ಕಷಾಯವನ್ನು ಭಕ್ತರಿಗೆ ವಿತರಿಸಲಾಯಿತು.
ನರಹರಿಯಲ್ಲೂ ಜನಸ್ತೋಮ:ಪ್ರವಾಸಿತಾಣ ನರಹರಿ ಪರ್ವತ ಸದಾಶಿವ ದೇವಸ್ಥಾನದಲ್ಲಿ ನೂರಾರು ಮಂದಿ ಭಕ್ತರು ಆಗಮಿಸಿ ತೀರ್ಥಸ್ನಾನ ಕೈಗೊಂಡರು.ಇಲ್ಲಿನ ಶಂಖ, ಚಕ್ರ, ಗದಾ, ಪದ್ಮವೆಂಬ ನಾಲ್ಕು ಕೆರೆಗಳಲ್ಲಿ ಭಕ್ತರು ಪುಣ್ಯಸ್ನಾನ ಮಾಡಿದರು. ಬೆಳಗ್ಗಿನಿಂದಲೇ ಸಾಲಾಗಿ ಭಕ್ತರು ಆಗಮಿಸಿದ್ದು, ಧಾರಾಕಾರ ಮಳೆಗೆ ಕೊಡೆ ಹಿಡಿದುಕೊಂಡೇ ಪರ್ವತದತ್ತ ಸಾಗಿದರು.ನಸುಕಿನ ವೇಳೆಯೇ ಭಕ್ತರ ಸಾಲು ಕಂಡುಬಂತು. ಆಟಿ ಅಮಾವಾಸ್ಯೆ ಸಂದರ್ಭ ಇಲ್ಲಿನ ಪುಣ್ಯತೀರ್ಥಗಳ ಪವಿತ್ರ ಜಲದಲ್ಲಿ ಸ್ನಾನ ಮಾಡಿದರೆ, ಸರ್ವರೋಗ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ಅಸುಪಾಸಿನ ಪರವೂರಿನ ಭಕ್ತರು ಪರ್ವತವೇರಿ ಕೆರೆಗಳಲ್ಲಿ ಮಿಂದು ದೇವರ ದರ್ಶನಗೈದು ವಿಶೇಷ ಪೂಜೆ ಸಲ್ಲಿಸಿದರು.