ಕಾರ್ಕಳ-ಪಡುಬಿದ್ರಿ ಹೆದ್ದಾರಿ: ಅವೈಜ್ಞಾನಿಕ ತಿರುವುಗಳಿಂದ ಅಪಘಾತ

KannadaprabhaNewsNetwork |  
Published : May 07, 2026, 03:00 AM IST
ಅಪಘಾತ  | Kannada Prabha

ಸಾರಾಂಶ

ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿಯ ನಿಟ್ಟೆ ಪರಪ್ಪಾಡಿಯಿಂದ ಬಪ್ಪಗೋಳಿ ಕ್ರಾಸ್‌ವರೆಗಿನ ಭಾಗ ಇತ್ತೀಚೆಗೆ ಸರಣಿ ಅಪಘಾತಗಳಿಗೆ ಸಾಕ್ಷಿಯಾಗುತ್ತಿದೆ.

ಕಾರ್ಕಳ: ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿಯ ನಿಟ್ಟೆ ಪರಪ್ಪಾಡಿಯಿಂದ ಬಪ್ಪಗೋಳಿ ಕ್ರಾಸ್‌ವರೆಗಿನ ಭಾಗ ಇತ್ತೀಚೆಗೆ ಸರಣಿ ಅಪಘಾತಗಳಿಗೆ ಸಾಕ್ಷಿಯಾಗುತ್ತಿದೆ.ಸಾರ್ವಜನಿಕರಲ್ಲಿ ಭೀತಿ ವಾತಾವರಣ ನಿರ್ಮಾಣವಾಗಿದೆ. ರಸ್ತೆ ಮೇಲ್ಮೈ ಸುಸ್ಥಿತಿಯಲ್ಲಿದ್ದರೂ ಸಹ, ಅವೈಜ್ಞಾನಿಕ ತಿರುವುಗಳು, ಅತೀವೇಗದ ಚಾಲನೆ ಈ ಮಾರ್ಗವನ್ನು ಅಪಾಯದ ಗೂಡಾಗಿ ಪರಿವರ್ತಿಸಿವೆ.

ಇತ್ತೀಚೆಗೆ ಸಂಭವಿಸಿದ ದುರಂತ ಘಟನೆಯೊಂದು ಈ ಭಾಗದ ಅಪಾಯವನ್ನು ಮತ್ತಷ್ಟು ಬೆಳಕಿಗೆ ತಂದಿದೆ. ಏ.24ರಂದು ಸಿಇಟಿ ಪರೀಕ್ಷೆ ಮುಗಿಸಿ ತಂದೆ ನವೀನ್‌ಚಂದ್ರ ಮೂಲ್ಯ ಅವರೊಂದಿಗೆ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಪ್ರೇರಣಾ ಅವರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ತಂದೆ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಪ್ರೇರಣಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.ಸ್ಥಳೀಯರ ಪ್ರಕಾರ, ಕಳೆದ ಎರಡು ತಿಂಗಳಲ್ಲಿ ಈ ಭಾಗದಲ್ಲಿ 10ಕ್ಕೂ ಅಧಿಕ ಸಣ್ಣ ಹಾಗೂ ಗಂಭೀರ ಅಪಘಾತಗಳು ಸಂಭವಿಸಿವೆ. ವಿದ್ಯಾರ್ಥಿಗಳ ಅತೀವೇಗದ ಚಾಲನೆ ಪ್ರಮುಖ ಕಾರಣವೆಂದು ಕೆಲವರು ಹೇಳಿದರೆ, ಪೊಲೀಸ್ ಮೂಲಗಳ ಪ್ರಕಾರ ತಿರುವಿನಲ್ಲಿದ್ದ ಅಡ್ಡಿ ತಪ್ಪಿಸಲು ಕಾರು ಚಾಲಕ ಹಠಾತ್ ಬ್ರೇಕ್ ಹಾಕಿದ ಪರಿಣಾಮ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಈ ಎರಡೂ ಅಂಶಗಳು ಸೇರಿ ಅಪಾಯದ ಪ್ರಮಾಣ ಹೆಚ್ಚಿಸುತ್ತಿವೆ.ಕಾರ್ಕಳ ಹೆಬ್ರಿ ಹಾಗೂ ಘಟ್ಟ ಪ್ರದೇಶಗಳ ತಪ್ಪಲು ಕರಾವಳಿ ಭಾಗವಾಗಿರುವುದರಿಂದ ಇಲ್ಲಿ ತಿರುವುಗಳು ಹೆಚ್ಚಾಗಿದ್ದು, ವಾಹನ ಸವಾರರ ಅಜಾಗ್ರತೆಯಿಂದ ಅಪಘಾತಗಳು ಸಂಭವಿಸುತ್ತವೆ. ರಾಜ್ಯ ಹೆದ್ದಾರಿಗಳಲ್ಲಿ ವೇಗಮಿತಿ 60 ಕಿ.ಮೀ.ಗೆ ನಿಗದಿಯಾಗಿದ್ದರೂ, ಹಲವರು ನಿಯಮ ಉಲ್ಲಂಘಿಸಿ ವೇಗವಾಗಿ ಸಂಚರಿಸುತ್ತಿದ್ದಾರೆ. ಜೊತೆಗೆ ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ, ಸೀಟ್‌ಬೆಲ್ಟ್‌ ಮತ್ತು ಹೆಲ್ಮೆಟ್‌ ಧರಿಸದಿರುವುದು ಅಪಘಾತಗಳ ತೀವ್ರತೆಯನ್ನು ಹೆಚ್ಚಿಸುತ್ತಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ.ಈ ಪರಿಸ್ಥಿತಿ ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ, ಅತೀವೇಗದ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಲು ತೀರ್ಮಾನಿಸಿದೆ.

ಗ್ರಾಮಾಂತರ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಪ್ರಸನ್ನ ಅವರ ಪ್ರಕಾರ, ಸುಮಾರು 20 ಕಡೆಗಳಲ್ಲಿ ರಬ್ಬರ್ ಸ್ಪೀಡ್‌ ಬ್ರೇಕರ್‌ಗಳನ್ನು ಅಳವಡಿಸುವ ಯೋಜನೆ ರೂಪಿಸಲಾಗಿದೆ. ಇದರ ಮೂಲಕ ವೇಗ ನಿಯಂತ್ರಣಕ್ಕೆ ತರಲು ಉದ್ದೇಶಿಸಲಾಗಿದೆ. ಅದರಲ್ಲೂ ದೂಪದ ಕಟ್ಟೆ ಭಾಗದಲ್ಲಿ ವೆಗವಾಗಿ ಚಲಿಸುವ ವಾಹನಗಳ ಮೇಲೆ ಕ್ಯಾಮರಾ ನಿಗ ವಹಿಸುತ್ತಿದೆ. ಲೋಕೋಪಯೋಗಿ ಇಲಾಖೆಗೆ ಸೂಚನೆ ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ, ಪ್ರತಿಯೊಂದು ಅಪಘಾತದ ನಂತರ ಪೊಲೀಸ್ ಇಲಾಖೆ ಆರ್‌ಟಿಎ, ಲೋಕೋಪಯೋಗಿ ಇಲಾಖೆ ಹಾಗೂ ಹೆದ್ದಾರಿ ಪ್ರಾಧಿಕಾರಕ್ಕೆ ವರದಿ ನೀಡುತ್ತದೆ. ಈ ವರದಿಗಳ ಆಧಾರದ ಮೇಲೆ ರಸ್ತೆ ವಿನ್ಯಾಸದ ದೋಷಗಳನ್ನು ಮರುಪರಿಶೀಲನೆ ಮಾಡುವ ಕಾರ್ಯವೂ ನಡೆಯಲಿದೆ. ಮುಂದಿನ ದಿನಗಳಲ್ಲಿ ತುರ್ತು ಚಿಕಿತ್ಸೆ ವ್ಯವಸ್ಥೆ ಮತ್ತು ಅಪಘಾತ ವರದಿ ಪ್ರಕ್ರಿಯೆಯಲ್ಲಿ ಆಸ್ಪತ್ರೆಗಳನ್ನೂ ಸೇರಿಸುವ ಚಿಂತನೆ ನಡೆದಿದೆ.

ಜನಜಾಗೃತಿ ಅಗತ್ಯ.: ರಸ್ತೆ ಉತ್ತಮವಾಗಿದ್ದರೂ ಕೆಲವರ ಅತೀವೇಗದ ಚಾಲನೆ ಇನ್ನೊಬ್ಬರ ಜೀವಕ್ಕೆ ಮುಳುವಾಗುತ್ತಿದೆ. ಅತೀವೇಗದ ಚಾಲನೆ ತಡೆ, ಸುರಕ್ಷತಾ ನಿಯಮಗಳ ಪಾಲನೆ ಹಾಗೂ ರಸ್ತೆ ವಿನ್ಯಾಸ ದೋಷಗಳ ಸರಿಪಡಿಕೆ‌ ಈ ಮೂರು ಅಂಶಗಳ ಮೇಲೆ ಸಮಾನ ಒತ್ತು ನೀಡಿದಾಗ ಮಾತ್ರ ಈ ಮಾರ್ಗದಲ್ಲಿ ಅಪಘಾತಗಳನ್ನು ಕಡಿಮೆ ಮಾಡಬಹುದು

ರಾಜ್ಯ ಹೆದ್ದಾರಿಗಳಲ್ಲಿ ವೇಗ ಮಿತಿ 60 ಕಿ.ಮೀ.ಗೆ ನಿಗದಿಪಡಿಸಲಾಗಿದೆ. ಆದರೂ ಅತೀವೇಗದ ಚಾಲನೆ ಇನ್ನೊಬ್ಬರ ಜೀವಕ್ಕೆ ಅಪಾಯವಾಗುತ್ತಿದೆ. ಕಾರ್ಕಳ–ಹೆಬ್ರಿ ಹಾಗೂ ಘಟ್ಟ ಪ್ರದೇಶಗಳ ತಪ್ಪಲು ಕರಾವಳಿ ಭಾಗವಾಗಿರುವುದರಿಂದ ಇಲ್ಲಿ ತಿರುವುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ. ಈಗಾಗಲೇ ಒಂದೇ ಸ್ಥಳದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಅಪಘಾತಗಳಲ್ಲಿ ಮೂರಕ್ಕೂ ಹೆಚ್ಚು ಜನ ಮೃತಪಟ್ಟಿರುವ ಪ್ರದೇಶಗಳನ್ನು ಬ್ಲಾಕ್ ಸ್ಪಾಟ್ ಎಂದು ಗುರುತಿಸಲಾಗುತ್ತಿದೆ. ಇಂತಹ ಅಪಾಯಕರ ಸ್ಥಳಗಳ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತಿದ್ದು, ಅಪಾಯಕಾರಿ ತಿರುವುಗಳನ್ನು ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ.-ಸೋಮಶೇಖರ್ ಪಿ‌ಡಬ್ಲ್ಯುಡಿ ಇಂಜಿನಿಯರ್ ಕಾರ್ಕಳ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿವೇಕಾನಂದ ಕಾನೂನು ಕಾಲೇಜ್‌: 8ರಿಂದ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ
ಆಳ್ವಾಸ್ ಸಂಸ್ಥೆ ಮಿನಿ ಇಂಡಿಯಾ ಇದ್ದಂತೆ: ಡಾ. ಆಳ್ವ