ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದು, ಕಠಿಣ ಪರಿಶ್ರಮ, ಛಲ ಹಾಗೂ ದೂರದೃಷ್ಟಿಯಿಂದ ಜಾಗತಿಕ ಮಟ್ಟದ ಉದ್ಯಮಿಯಾಗಿ ಗುರುತಿಸಿಕೊಂಡಿರುವ ಡಾ. ಜಿ. ರಾಮಕೃಷ್ಣ ಆಚಾರ್ ಅವರ ಜೀವನಗಾಥೆ ಇದೀಗ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದೆ.
ಕಾರ್ಕಳ: ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದು, ಕಠಿಣ ಪರಿಶ್ರಮ, ಛಲ ಹಾಗೂ ದೂರದೃಷ್ಟಿಯಿಂದ ಜಾಗತಿಕ ಮಟ್ಟದ ಉದ್ಯಮಿಯಾಗಿ ಗುರುತಿಸಿಕೊಂಡಿರುವ ಡಾ. ಜಿ. ರಾಮಕೃಷ್ಣ ಆಚಾರ್ ಅವರ ಜೀವನಗಾಥೆ ಇದೀಗ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದೆ.
ಡಾ. ಜಿ. ರಾಮಕೃಷ್ಣ ಆಚಾರ್ ಅವರ ಜೀವನ, ಉದ್ಯಮಶೀಲತೆಯ ಪಯಣ, ತಾಂತ್ರಿಕ ಆವಿಷ್ಕಾರಗಳು ಹಾಗೂ ಸಮಾಜಮುಖಿ ಕಾರ್ಯಗಳನ್ನು ಒಳಗೊಂಡ ‘Village Boy to Global Rice Techie’ ಜೀವನಚರಿತ್ರೆ ಕೃತಿಯನ್ನು ಎಂ. ರಾಘುರಾಮ್ ಅವರು ರಚಿಸಿದ್ದು, ಸಪ್ನಾ ಬುಕ್ ಹೌಸ್ ಪ್ರಕಟಿಸುತ್ತಿದೆ.
ಸುಮಾರು 45 ವರ್ಷಗಳ ಹಿಂದೆ ಕುಂದಾಪುರದ ಗುಡ್ಡೆಯಂಗಡಿ ಹಳ್ಳಿಯಿಂದ ಉದ್ಯೋಗ ಅರಸಿ ಮೂಡುಬಿದಿರೆಗೆ ಬಂದ ರಾಮಕೃಷ್ಣ ಆಚಾರ್, ತಮ್ಮ ಪರಿಶ್ರಮ ಮತ್ತು ಉದ್ಯಮಶೀಲತೆಯ ಮೂಲಕ ಹಂತಹಂತವಾಗಿ ಬೆಳೆದು ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅತ್ಯಂತ ಸರಳ ವ್ಯಕ್ತಿತ್ವದ ಅವರು, ಆರಂಭದ ಸವಾಲುಗಳನ್ನು ಮೆಟ್ಟಿ ನಿಂತು ಕೈಗಾರಿಕಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಅವರ ನೇತೃತ್ವದ ಎಸ್ಕೆಎಫ್ ಸಮೂಹ ಸಂಸ್ಥೆಗಳು ಭತ್ತ ಸಂಸ್ಕರಣಾ ಯಂತ್ರೋಪಕರಣಗಳು, ಬಾಯ್ಲರ್ಗಳು, ಡ್ರೈಯರ್ಗಳು, ಶುದ್ಧ ಕುಡಿಯುವ ನೀರಿನ ಘಟಕಗಳು ಹಾಗೂ ತ್ಯಾಜ್ಯನೀರಿನ ಸಂಸ್ಕರಣಾ ಘಟಕಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿವೆ. ಭಾರತದಲ್ಲಿ ಅಭಿವೃದ್ಧಿಪಡಿಸಿದ ಸಂಸ್ಥೆಯ ತಂತ್ರಜ್ಞಾನಗಳು ಇಂದು 27 ದೇಶಗಳಲ್ಲಿ ಬಳಕೆಯಾಗುತ್ತಿದ್ದು, ಭಾರತೀಯ ತಂತ್ರಜ್ಞಾನವನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಸಂಸ್ಥೆಯ ವಿವಿಧ ಉದ್ಯಮಗಳ ಮೂಲಕ 3 ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿದ್ದಾರೆ.
ಸಮಾಜಮುಖಿ ಸೇವಾಕಾರ್ಯ: ಆದಾಯದ ಬಹುಪಾಲನ್ನು ಬಡವರ ಶಿಕ್ಷಣ, ಆರೋಗ್ಯ, ಮನೆ ನಿರ್ಮಾಣ, ಬಡ ಹೆಣ್ಣುಮಕ್ಕಳ ವಿವಾಹ, ದೇವಸ್ಥಾನಗಳ ಪುನರ್ನಿರ್ಮಾಣ, ಧಾರ್ಮಿಕ ಮತ್ತು ಸಾಂಸ್ಕೃತಿಕ ಇತ್ಯಾದಿ ಸಮಾಜ ಮುಖಿ ಚಟುವಟಿಕೆಗಳಿಗೂ ವಿನಿಯೋಗಿಸುತ್ತಿದ್ದಾರೆ.ಗೋಸಂರಕ್ಷಣೆ - ರೈತಪೀಠ
ಉದ್ಯಮದ ಒತ್ತಡದ ನಡುವೆಯೂ ಹೆಬ್ರಿ ತಾಲೂಕಿನ ಮುನಿಯಾಲಿನಲ್ಲಿ ಸುಮಾರು 20 ಎಕರೆ ಪ್ರದೇಶದಲ್ಲಿ ‘ಗೋಧಾಮ–ಸಂಜೀವಿನಿ ಫಾರ್ಮ್’ ನಿರ್ಮಿಸಿ, ಗೀರ್ ಸೇರಿದಂತೆ ಭಾರತೀಯ ಗೋತಳಿಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರೈತರ ಸಾಧನೆಗೆ ರಾಷ್ಟ್ರೀಯ ಮಟ್ಟದ ಗೌರವ ದೊರಕಿಸಿಕೊಡುವ ಉದ್ದೇಶದಿಂದ 2025ರಲ್ಲಿ ‘ರೈತಪೀಠ’ ಎಂಬ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ. ಮುನಿಯಾಲಿನ ಗೋಧಾಮದಲ್ಲಿಯೇ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.‘Village Boy to Global Rice Techie’ ಕೃತಿ ಕೇವಲ ಒಬ್ಬ ಉದ್ಯಮಿಯ ಯಶೋಗಾಥೆಯಲ್ಲ. ಗ್ರಾಮೀಣ ಹಿನ್ನೆಲೆಯಿಂದ ಬಂದ ವ್ಯಕ್ತಿಯೊಬ್ಬರು ಪರಿಶ್ರಮ, ಶಿಸ್ತು, ಬದ್ಧತೆ ಮತ್ತು ದೂರದೃಷ್ಟಿಯ ಮೂಲಕ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಬಹುದು ಎಂಬುದನ್ನು ಸಾರುವ ಜೀವನಪಾಠವಾಗಿದೆ. ಯುವ ಉದ್ಯಮಿಗಳು, ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳು ಹಾಗೂ ಹೊಸ ತಲೆಮಾರಿನ ಸಾಧಕರಿಗೆ ಸ್ಫೂರ್ತಿಯಾಗಬಲ್ಲ ಈ ಕೃತಿಗೆ ದೇಶದ ವಿವಿಧ ಬಿ-ಸ್ಕೂಲ್ಗಳಿಂದಲೂ ಬೇಡಿಕೆ ವ್ಯಕ್ತವಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.