ಕಾರ್ಕಳ ಅತ್ಯಾಚಾರ ಪ್ರಕರಣ: ಆರೋಪಿಗಳು ಪೊಲೀಸ್‌ ಕಸ್ಟಡಿಗೆ

KannadaprabhaNewsNetwork | Published : Aug 26, 2024 1:31 AM

ಸಾರಾಂಶ

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳಾದ ಅಲ್ತಾಫ್ ಹಾಗೂ ಕ್ಸೇವಿಯರ್ ರಿಚರ್ಡ್ ಎಂಬವರನ್ನು ಪೊಲೀಸರು ಕೋರ್ಟ್‌ಗೆ ಹಾಜರು ಪಡಿಸಿದ್ದು, ನ್ಯಾಯಾಲಯವು ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ಕಾರ್ಕಳದಲ್ಲಿ ನಡೆದ ಹಿಂದೂ ಯುವತಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳಾದ ಅಲ್ತಾಫ್ ಹಾಗೂ ಕ್ಸೇವಿಯರ್ ರಿಚರ್ಡ್ ಎಂಬವರನ್ನು ಪೊಲೀಸರು ಕೋರ್ಟ್‌ಗೆ ಹಾಜರು ಪಡಿಸಿದ್ದು, ನ್ಯಾಯಾಲಯವು ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ. ವಿವಿಧ ಆಯಾಮಗಳಲ್ಲಿ ಆರೋಪಿಗಳ ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ ಎಂದು ಉಡುಪಿ ಎಸ್‌ಪಿ ಡಾ. ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.

ಅಲ್ತಾಫ್‌ ಪರ ವಾದಿಸಬೇಡಿ: ಅಲ್ತಾಫ್ ಮಸೀದಿಗೆ ಬರುವುದೇ ಇಲ್ಲ. ನಮ್ಮ‌ ಸಮುದಾಯದ ಯಾವುದೇ ನ್ಯಾಯಾವಾದಿಗಳು ಅಲ್ತಾಫ್ ಪರವಾಗಿ ವಾದಿಸಬಾರದು ಎಂದು ಮುಸ್ಲಿಂ ಮುಖಂಡ ಮೊಹಮ್ಮದ್ ಶರೀಫ್ ಕರೆ ನೀಡಿದ್ದಾರೆ.

ಆತ ಕಳೆದ ಹತ್ತು ವರ್ಷಗಳಿಂದ ಕಾರ್ಕಳದಲ್ಲಿ ನೆಲೆಸಿದ್ದು, ಟಿಪ್ಪರ್‌ನಲ್ಲಿ ಡ್ರೈವರ್‌ ಆಗಿದ್ದ. ಅಲ್ತಾಫ್ ಮೊದಲು ಕಾರ್ಕಳ ತಾಲೂಕಿನ ತೆಳ್ಳಾರು, ಬಳಿಕ ಪತ್ತೊಂಜಿಕಟ್ಟೆ, ನಂತರ ಬಂಗ್ಲೆಗುಡ್ಡೆ, ಈಗ ಕುಕ್ಕುಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೋಡುರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಆತನಿಗೆ ವಿವಾಹವಾಗಿದ್ದು, ಹೆಂಡತಿ, ಇಬ್ಬರು ಮಕ್ಕಳು ಹಾಗೂ ತಾಯಿ ಜೊತೆಗೆ ವಾಸವಾಗಿದ್ದಾನೆ ಎಂದು ಅವರು ತಿಳಿಸಿದ್ದಾರೆ.

ಮಗನನ್ನು ಸಿಕ್ಕಿಸಿ ಹಾಕುವ ಪ್ರಯತ್ನ: ಕ್ಸೇವಿಯರ್‌ ತಾಯಿ

ಆರೋಪಿ ಕ್ಸೇವಿಯರ್ ರಿಚರ್ಡ್ ಸವೇರಾ ಅವರ ತಾಯಿ ಸುದ್ದಿಗಾರರೊಂದಿಗೆ ಮಾತನಾಡಿ, ಶುಕ್ರವಾರ ರಾತ್ರಿ 8.30ರ ವೇಳೆಗೆ ಕ್ಸೇವಿಯರ್‌ ಕಾರನ್ನು ಬಿಟ್ಟು ಬೈಕ್‌ನಲ್ಲಿ ಮನೆಗೆ ಬಂದಿದ್ದ. ಕಾರು ಎಲ್ಲಿ ಎಂದು ಕೇಳಿದಾಗ ಉತ್ತರಿಸದೆ ಬಿಯರ್ ಕುಡಿದು ಮಲಗಿದ್ದ. ರಾತ್ರಿ 9-10 ಗಂಟೆ ವೇಳೆ ಪೊಲೀಸರು ಮನೆಗೆ ಬಂದು ಕಾರು ಎಲ್ಲಿದೆ ಕೇಳಿದಾಗ ಕನವರಿಸುತ್ತಿದ್ದ. ಪೊಲೀಸರು ಕಾರ್ ಅಪಘಾತಕ್ಕಿಡಾಗಿದೆ ಎಂದರು. ಮಗ ಟಿಪ್ಪರ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ. ನಾವು ಎಂದಿಗೂ ಮಗನ ಮೇಲೆ ಸಂಶಯ ಪಟ್ಟಿಲ್ಲ. ಈ ವಿಚಾರ ಕೇಳಿ ನನಗೆ ಆಘಾತವಾಗಿದೆ. ನನ್ನ ಮಗನನ್ನು ಈ ಪ್ರಕರಣದಲ್ಲಿ ಸಿಕ್ಕಿಸಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಕಣ್ಣೀರು ಸುರಿಸಿದರು.ಅತ್ಯಾಚಾರ ಘಟನೆಯ ಬಗ್ಗೆ ಗೊತ್ತಿಲ್ಲ: ಅಲ್ತಾಫ್‌ ತಾಯಿ

ಅತ್ಯಾಚಾರ ಆರೋಪಿ ಅಲ್ತಾಫ್ ತಾಯಿ ಆಯಿಷಾ ಮಾತನಾಡಿ, ನಮ್ಮ ಊರು ತೀರ್ಥಹಳ್ಳಿ. ಮಗನಿಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆತ ಮರಳಿನ ವ್ಯಾಪಾರ ಮಾಡುತ್ತಿದ್ದಾನೆ. ನಿತ್ಯ ರಾತ್ರಿ 12 ಗಂಟೆಗೆ ಮನೆಗೆ ಬರುತ್ತಾನೆ. ನನಗೆ ಈ ಘಟನೆ ಬಗ್ಗೆ ಏನೂ ಗೊತ್ತಿಲ್ಲ, ಪೊಲೀಸರು ನಮ್ಮ ಬಳಿ ಏನೂ ಹೇಳಿಲ್ಲ. ಪೊಲೀಸ್ ಸ್ಟೇಷನ್‌ಗೆ ಹೋದಾಗ ಮತ್ತೆ ಬನ್ನಿ ಫೋನ್ ಮಾಡುತ್ತೇವೆ ಎಂದಿದ್ದಾರೆ. ಮಗನನ್ನು ಒಮ್ಮೆ ಬಿಡಿಸಿ ತರಬೇಕು, ಮಗ ಅತ್ಯಾಚಾರ ಮಾಡಿದ ಬಗ್ಗೆ ಏನು ಗೊತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.ಜೊತೆಗಿದ್ದವರೇ ಅಣ್ಣನನ್ನು ಹಾಳು ಮಾಡಿದ್ದಾರೆ: ಅಲ್ತಾಫ್‌ ಸಹೋದರ

ಅಲ್ತಾಫ್ ಸಹೋದರ ಮಾತನಾಡಿ, ನನ್ನ ಅಣ್ಣನಿಗೆ ಯಾವುದೇ ದುಶ್ಚಟಗಳಿರಲಿಲ್ಲ, ಆತನ ಗೆಳೆಯರೆ ಒತ್ತಾಯ ಪೂರ್ವಕವಾಗಿ ಕಲಿಸಿಕೊಟ್ಟಿದ್ದಾರೆ. ಬೀಡಿ, ಸಿಗರೇಟು ಸೇದುತ್ತಲೂ ಇರಲಿಲ್ಲ, ಮಾದಕ ದ್ರವ್ಯ ಸೇವನೆಯ ಬಗ್ಗೆ ನಮಗೆ ಗೊತ್ತಿಲ್ಲ. ಅಣ್ಣನ ಜೊತೆಗಿರುವವರೇ ಆತನನ್ನು ಹಾಳು‌ಮಾಡಿದ್ದಾರೆ. ಅಲ್ತಾಫ್‌ನಿಗೆ ಯಾವುದೇ ರೀತಿಯ ದುಶ್ಚಟಗಳಿರಲಿಲ್ಲ ಎಂದರು.

ಮಹಿಳಾ ಆಯೋಗದಿಂದ ಸ್ವಯಂ ಪ್ರೇರಿತ ದೂರು

ಹಿಂದೂ ಯುವತಿ ಮೇಲಿನ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗವು ಸ್ವಯಂ ಪ್ರೇರಿತ ದೂರು ದಾಖಲಿಸಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್ ತಿಳಿಸಿದ್ದಾರೆ.

----------

ಸಂತ್ರಸ್ತೆ ಮಾದಕ ವಸ್ತು ಸೇವನೆ ದೃಢ: ಆರೋಪಿಗಳ ವರದಿ ನೆಗೆಟಿವ್‌

ಹಿಂದೂ ಯುವತಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಇಬ್ಬರು ಆರೋಪಿಗಳಾದ ಅಲ್ತಾಫ್‌ ಹಾಗೂ ಕ್ಷೇವಿಯರ್‌ ರಿಚರ್ಡ್‌ ಮಾದಕ ದ್ರವ್ಯ ಸೇವನೆಯ ಬಗ್ಗೆ ತಿಳಿಯಲು ರಕ್ತ ಪರೀಕ್ಷೆ ಮಾಡಿಸಿದ್ದು, ವರದಿಯು ನೆಗೆಟಿವ್ ಬಂದಿದೆ. ಆದರೆ ಸಂತ್ರಸ್ತೆ ಯುವತಿಯ ರಕ್ತದ ಪರೀಕ್ಷಾ ವರದಿಯಲ್ಲಿ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ.ಶನಿವಾರ ಅತ್ಯಾಚಾರ ಆರೋಪಿ ಅಲ್ತಾಫ್‌ನನ್ನು ಕಸ್ಟಡಿಗೆ ಪಡೆದಿದ್ದ ಸಮಯದಲ್ಲಿ ಕಾರಿನಲ್ಲಿದ್ದ ಒಂದು ಪುಡಿಯನ್ನು ತೋರಿಸಿ, ಆ ಪುಡಿಯನ್ನು ಹುಡುಗಿ ಸೇವಿಸಿದ್ದಾಗಿ ತಿಳಿಸಿದ್ದ.ಆ ಪುಡಿಯನ್ನು ಎಫ್ಎಸ್ಎಲ್‌ಗೆ ಕಳುಹಿಸಲಾಗಿದ್ದು, ಅದು ಯಾವ ರೀತಿಯ ಡ್ರಗ್ ಎನ್ನುವ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಒಂದು ಪ್ರಕರಣ ದಾಖಲಾಗಿದೆ.

ಮಾದಕ ವಸ್ತುಗಳನ್ನು ಪೂರೈಕೆದಾರರ ವಿರುದ್ಧ 146/24 ಕಲಂ. 8(c), 22(b) NDPS Act, Sec. 3(5) BNS ನಲ್ಲಿ ಪ್ರಕರಣ ದಾಖಲಾಗಿದೆ.ಪೂರ್ಣ ತನಿಖೆ: ಎಸ್ಪಿಪ್ರಕರಣದಲ್ಲಿ ಡ್ರಗ್ ಎಲ್ಲಿಂದ ಬಂದಿದೆ ಎಂಬುದರ ಬಗ್ಗೆ ಪೂರ್ಣ ತನಿಖೆ ಮಾಡಿ ಆದಷ್ಟು ಬೇಗನೆ ಈ ಪ್ರಕರಣವನ್ನು ಭೇದಿಸಲಾಗುವುದು. ಸಂತ್ರಸ್ತೆ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಲು ಬಾಕಿ ಇದ್ದು, ವೈದ್ಯರು ಮೆಡಿಕಲ್ ಫಿಟ್ ಘೋಷಿಸಿದ ಬಳಿಕ ನ್ಯಾಯಾಂಗದ ಮುಂದೆ ಹಾಜರುಪಡಿಸಿ, ಶೀಘ್ರ ಈ ಅತ್ಯಾಚಾರ ಪ್ರಕರಣದ ತನಿಖೆಯನ್ನು ಮುಕ್ತಾಯಗೊಳಿಸಲಾಗುವುದು ಎಂದು ಉಡುಪಿ ಜಿಲ್ಲಾ ಎಸ್ಪಿ ಅರುಣ್ ಕುಮಾರ್ ತಿಳಿಸಿದ್ದಾರೆ.

Share this article