ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಬಂದ್ ನಡೆಸದೆ, ಕನ್ನಡ ಸಂಘಟನೆಗಳ ಹೋರಾಟವನ್ನು ಧರಣಿ ಮೂಲಕವಷ್ಟೇ ಬೆಂಬಲಿಸಿದ ಮುಖಂಡರು, ಎಂಇಎಸ್ ಪುಂಡಾಟಿಕೆಯನ್ನು ಖಂಡಿಸಿದರು.
ಈ ವೇಳೆ ಮಾತನಾಡಿದ ಮುಖಂಡರು, ಮಹಾರಾಷ್ಟ್ರದ ಎಂಇಎಸ್ ಪುಂಡರು, ನಮ್ಮ ರಾಜ್ಯದ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಮೇಲೆ ನಡೆಸಿದ್ದಲ್ಲದೆ ಮುಂದುವರೆದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೇಲೂ ದೌರ್ಜನ್ಯ ನಡೆಸಿದ್ದಾರೆ. ಮರಾಠಿಗರ ಎಂಇಎಸ್ ಪುಂಡರು ಪದೇಪದೇ ಕನ್ನಡಿಗರ ಸ್ವಾಭಿಮಾನ ಕೆಣಕುತ್ತಿದ್ದಾರೆ. ಕರ್ನಾಟಕ ಬಂದ್ ಉದ್ದೇಶ ಸರಿಯಾಗಿದೆ. ಆದರೆ ಸಮಯ ಸೂಕ್ತವಲ್ಲ, ರಾಜ್ಯಾದ್ಯಂತ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿವೆ. ಈಗ ಬಂದ್ ಮಾಡಿದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕಾರ್ಯಕ್ರಮ ಯಶಸ್ವಿಯಾಗಬೇಕು ಎಂಬುದು ನಮ್ಮ ಉದ್ದೇಶ ಎಂದರು.ಬೆಳಗಾವಿ ರಾಜ್ಯದ ಅವಿಭಾಜ್ಯ ಅಂಗ. ಭಾಷಾವಾರು ಪ್ರಾಂತಗಳ ವಿಂಗಡಣೆಯಾದ ದಿನವೇ ಬೆಳಗಾವಿ ಕನ್ನಡಿಗರು ಮತ್ತು ಕರ್ನಾಟಕಕ್ಕೆ ಸೇರಿದ್ದು ಎಂದು ನಿರ್ಧರಿಸಲಾಗಿದೆ. ಆದರೂ ಕೆಲವು ಎಂಇಎಸ್ ಪುಂಡರು ಪದೇಪದೇ ಕಾಲು ಕೆರೆದು ಜಗಳಕ್ಕೆ ಬರುತ್ತಿರುವುದು ಖಂಡನೀಯ. ಉದ್ಯೋಗ ಅರಸಿ ಹೊರಗಿನಿಂದ ಬರುವ ಅನ್ಯ ಭಾಷಿಕರು, ಕನ್ನಡ ಭಾಷೆ ಕಲಿಯದೆ ಕನ್ನಡಿಗರ ಮೇಲೆ ದೌರ್ಜನ್ಯ ದಬ್ಬಾಳಿಕೆ ನಡೆಸುತ್ತಿದ್ದಾರೆ. ಉತ್ತರ ಭಾರತದ ರಾಜ್ಯಗಳು ದಕ್ಷಿಣದ ಮೇಲೆ ಹಿಂದಿ ಹೇರಿಕೆ ಮಾಡುತ್ತಿವೆ. ಇನ್ನು ಕ್ವೀನ್ ಸಿಟಿ ಹೆಸರಲ್ಲಿ ನಮ್ಮ ಭೂಮಿ ಮಾರ್ವಾಡಿಗಳ ಪಾಲಾಗುತ್ತಿದೆ. ಆಳುವ ಸರ್ಕಾರಗಳು ರೈತರು, ಕಾರ್ಮಿಕರ ಹೆಸರಲ್ಲಿ ಬಹುರಾಷ್ಟ್ರೀಯ ಕಂಪನಿಗಳಿಗೆ ಬೃಹತ್ ಸಬ್ಸಿಡಿ ನೀಡುತ್ತಿವೆ. ರೈತರ ಸಾಲ ಮನ್ನಾ ಮಾಡದ, ಬೆಳೆದ ಧಾನ್ಯಗಳಿಗೆ ವೈಜ್ಞಾನಿಕವಾಗಿ ಬೆಂಬಲ ಬೆಲೆ ಘೋಷಣೆ ಮಾಡದ ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ದೇಶದ 26 ಉದ್ಯಮಪತಿಗಳ 16 ಲಕ್ಷ ಕೋಟಿ ಸಾಲದ ಹಣವನ್ನು ರೈಟಪ್( ವಸೂಲಾಗದ ಸಾಲ) ಮಾಡಿದೆ. ಇದು ಈ ದೇಶದ ದುಡಿಯುವ ಜನರಿಗೆ ಮಾಡಿದ ದ್ರೋಹವಾಗಿದೆ ಎಂದು ಆಕ್ರೋಶ ಹೊರ ಹಾಕಿದರು.
ರಾಜ್ಯದ ಜ್ವಲಂತ ಸಮಸ್ಯೆಗಳು ಎದುರಾದಾಗ ತಾಲೂಕಿನ ಹಲವಾರು ಕನ್ನಡಪರ, ದಲಿತ, ರೈತ ಮತ್ತು ಕಾರ್ಮಿಕ ಸಂಘಟನೆಗಳು ದ್ವನಿಯೆತ್ತಿವೆ. ಪ್ರಮುಖವಾಗಿ ದೊಡ್ಡಬಳ್ಳಾಪುರದ ಜನತೆ ನೇಕಾರಿಕೆಯನ್ನೇ ತಮ್ಮ ಬದುಕಾಗಿಸಿಕೊಂಡಿದ್ದಾರೆ. ಯುಗಾದಿ ಹಬ್ಬ ಹತ್ತಿರದಲ್ಲಿದೆ, ವ್ಯಾಪಾರಿಗಳ ಒಂದು ದಿನದ ವಹಿವಾಟುಗಳು ನಿಂತರೆ ಅದು ಆರ್ಥಿಕವಾಗಿ ಬೇರೆ ರೀತಿಯ ಪರಿಣಾಮ ಬೀರುತ್ತದೆ. ಜನಸಾಮಾನ್ಯರು, ಕಾರ್ಮಿಕರು ವರ್ತಕರ ಬೆಂಬಲ ಪಡೆಯಬೇಕು ಹಾಗೂ ಅವರಿಗೂ ಸ್ಫಂದಿಸಬೇಕು. ಹಾಗಾಗಿ ಕರ್ನಾಟಕ ಬಂದ್ ಬೆಂಬಲಿಸಿ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದರು.ಪ್ರತಿಭಟನೆಯಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಪಾಳ್ಗೊಂಡಿದ್ದರು.