ಮಂಗಳೂರು: ಬಂಡವಾಳ ಲಾಭದ ಮೇಲಿನ ತೆರಿಗೆ ಯೋಜನೆಯನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಕರ್ಣಾಟಕ ಬ್ಯಾಂಕ್ ‘ಕ್ಯಾಪಿಟಲ್ ಗೇನ್ಸ್ ಅಕೌಂಟ್ ಸ್ಕೀಮ್’ (ಸಿಜಿಎಎಸ್)ಯೋಜನೆ ಆರಂಭಿಸಿದೆ. ಅರ್ಹ ಬಂಡವಾಳ ಆಸ್ತಿಗಳ ಮಾರಾಟ ಅಥವಾ ವರ್ಗಾವಣೆಯಿಂದ ಬಂಡವಾಳ ಲಾಭ ಗಳಿಸಿದರೂ, ನಿಗದಿತ ಅವಧಿಯಲ್ಲಿ ಮರುಹೂಡಿಕೆ ಮಾಡಲು ಸಾಧ್ಯವಾಗದ ತೆರಿಗೆದಾರರಿಗೆ ಈ ಯೋಜನೆ ಅನುಕೂಲವಾಗಲಿದೆ. ಆದಾಯ ತೆರಿಗೆ ಕಾಯ್ದೆಯ ಅನ್ವಯ ನಿಗದಿತ ಅವಧಿಯೊಳಗೆ ಬಳಕೆಯಾಗದ ಬಂಡವಾಳ ಲಾಭದ ಮೊತ್ತವನ್ನು ಸಿಜಿಎಎಸ್ ಖಾತೆಯಲ್ಲಿ ಠೇವಣಿ ಇರಿಸುವ ಮೂಲಕ ಅನ್ವಯವಾಗುವ ತೆರಿಗೆ ಪ್ರಯೋಜನಗಳನ್ನು ಪಡೆಯಲು ಅವಕಾಶವಿದೆ.ಕರ್ಣಾಟಕ ಬ್ಯಾಂಕ್ ಈ ಯೋಜನೆಯನ್ನು ನೀಡಲು ಅನುಮತಿ ಪಡೆದಿರುವ ಬ್ಯಾಂಕ್‌ಗಳ ಪೈಕಿ ಒಂದಾಗಿದೆ. ಯೋಜನೆಯಡಿ ಗ್ರಾಹಕರು ಎರಡು ವಿಧದ ಖಾತೆಗಳನ್ನು ತೆರೆಯಬಹುದಾಗಿದೆ. ಕ್ಯಾಪಿಟಲ್ ಗೇನ್ಸ್ ಅಕೌಂಟ್-ಎ ಉಳಿತಾಯ ಠೇವಣಿ ಖಾತೆಯಾಗಿದ್ದು, ಅಗತ್ಯಕ್ಕೆ ಅನುಗುಣವಾಗಿ ಠೇವಣಿ ಮತ್ತು ಹಿಂಪಡೆಯುವ ಸೌಲಭ್ಯ ಹೊಂದಿದೆ. ಕ್ಯಾಪಿಟಲ್ ಗೇನ್ಸ್ ಅಕೌಂಟ್-ಬಿ ಅವಧಿ ಠೇವಣಿ ಖಾತೆಯಾಗಿದ್ದು, ದೀರ್ಘಾವಧಿಗೆ ಹಣವನ್ನು ಇರಿಸಿಕೊಳ್ಳಲು ಅನುಕೂಲಕರವಾಗಿದೆ.ವಸತಿ ಕಟ್ಟಡ ಖರೀದಿ ಅಥವಾ ನಿರ್ಮಾಣ ಸೇರಿದಂತೆ ಆದಾಯ ತೆರಿಗೆ ಕಾಯ್ದೆಯಡಿ ಅನುಮತಿಸಲಾದ ಅರ್ಹ ಮರುಹೂಡಿಕೆಗಳಿಗೆ ಈ ಯೋಜನೆಯನ್ನು ಬಳಸಿಕೊಳ್ಳಬಹುದು.ಯೋಜನೆಯಡಿ ಖಾತೆ ತೆರೆಯಲು ಆಸಕ್ತ ಗ್ರಾಹಕರು ಸಮೀಪದ ಕರ್ಣಾಟಕ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ ಖಾತೆ ತೆರೆಯುವ ವಿಧಾನ, ಅಗತ್ಯ ದಾಖಲೆಗಳು, ಕಾರ್ಯಾಚರಣೆ ನಿಯಮಗಳು ಹಾಗೂ ಅನ್ವಯವಾಗುವ ಷರತ್ತುಗಳ ಕುರಿತು ಮಾಹಿತಿ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಗ್ರಾಹಕರಿಗೆ ಅನುಕೂಲಕರ ಹಾಗೂ ನಿಯಮಾನುಸಾರ ಹಣಕಾಸು ಪರಿಹಾರಗಳನ್ನು ಒದಗಿಸುವುದು ಬ್ಯಾಂಕ್‌ನ ಬದ್ಧತೆಯಾಗಿದೆ. ಪರಿಣಾಮಕಾರಿ ತೆರಿಗೆ ಯೋಜನೆ ಮತ್ತು ಹೂಡಿಕೆ ನಿರ್ಧಾರಗಳಿಗೆ CGAS ನೆರವಾಗಲಿದೆ. -ರಾಘವೇಂದ್ರ ಎಸ್. ಭಟ್, ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ, ಕರ್ಣಾಟಕ ಬ್ಯಾಂಕ್