ಗದಗ: ಮೈಸೂರು ರಾಜ್ಯಕ್ಕೆ ಕರ್ನಾಟಕ ನಾಮಕರಣವಾಗಿ ೫೦ ವರ್ಷಗಳು ಗತಿಸಿರುವ ಹಿನ್ನೆಲೆಯಲ್ಲಿ ನವೆಂಬರ್ ೨ ರಿಂದ ರಾಜ್ಯಾದ್ಯಂತ ಹೆಸರಾಗಲಿ ಕನ್ನಡ, ಉಸಿರಾಗಲಿ ಕರ್ನಾಟಕ ಘೋಷವಾಕ್ಯದೊಂದಿಗೆ ಕರ್ನಾಟಕ ಸಂಭ್ರಮ-೫೦ ವರ್ಷಾಚರಣೆ ನಡೆಸಲಾಗುತ್ತಿದೆ. ಗದಗನಲ್ಲಿ ನ. ೩ರಂದು ಅರ್ಥಪೂರ್ಣ ಹಾಗೂ ಅದ್ಧೂರಿಯಾಗಿ ಸಂಭ್ರಮಾಚರಣೆ ಆಯೋಜಿಸಲಾಗುತ್ತಿದ್ದು, ಕನ್ನಡ ಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಕನ್ನಡಿಗರ ಒಮ್ಮತದ ಹಬ್ಬವಾಗಿ ಕರ್ನಾಟಕ ಸಂಭ್ರಮ-೫೦ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಕರ್ನಾಟಕ ಸಂಭ್ರಮ-೫೦ರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜರುಗಿದ ಜಿಲ್ಲೆಯ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕರ್ನಾಟಕ ಸಂಭ್ರಮ-೫೦ ಕನ್ನಡದ ಹಬ್ಬವಾಗಿ ವಿಜೃಂಭಣೆಯಿಂದ ಆಚರಿಸೋಣ, ಎಲ್ಲ ಕನ್ನಡಪರ ಸಂಘಟನೆಗಳು ಈ ಹಬ್ಬದಲ್ಲಿ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ ಎಂದರು.೧೯೭೩ರಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯ ಎಂದು ಮರುನಾಮಕರಣ ಮಾಡಲಾಯಿತು. ನಂತರ ನಡೆದ ಸಂಭ್ರಮಾಚರಣೆಯು ರಾಜ್ಯದ ಮೂರು ನಗರಗಳಲ್ಲಿ ಅಂದರೆ ಇಂದಿನ ಬೆಂಗಳೂರು, ಹಂಪಿ ಹಾಗೂ ಗದಗಗಳಲ್ಲಿ ವಿಜೃಂಭಣೆಯಿಂದ ಜರುಗಿತು. ಗದಗನಲ್ಲಿ ಜರುಗಿದ ಸಂಭ್ರಮಾಚರಣೆಯಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸ, ಮೈಸೂರು ಮಹಾರಾಜರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಗದಗಿನವರೆ ಮಂತ್ರಿಗಳಾಗಿದ್ದ ಆದ ದಿ.ಕೆ.ಎಚ್. ಪಾಟೀಲ ಅವರ ನೇತೃತದಲ್ಲಿ ಗದಗ ನಗರದ ಐತಿಹಾಸಿಕ ವೀರನಾರಾಯಣ ದೇವಸ್ಥಾನದಿಂದ ವಿವಿಧ ಕಲಾತಂಡಗಳ ಸಮ್ಮುಖದಲ್ಲಿ ಮೆರವಣಿಗೆಯು ಆರಂಭವಾಗಿ ಕಾಟನ್‌ಸೇಲ್ ಸೊಸೈಟಿ ಆವರಣ ತಲುಪಿ ಬೃಹತ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ಜರುಗಿಸಲಾಗಿತ್ತು. ೧೯೭೩ರಲ್ಲಿ ಜರುಗಿದ ಸಮಾರಂಭ ಹಾಗೂ ಮೆರವಣಿಗೆಯಂತೆಯೇ ನ. ೩ರಂದು ಸಹ ಆ ಗತವೈಭವವನ್ನು ಮರುಕಳಿಸುವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾರ್ಯಕ್ರಮ ಯಶಸ್ವಿಗೆ ತಮ್ಮೆಲ್ಲರ ಸಹಾಯ, ಸಹಕಾರ ನೀಡಬೇಕೆಂದು ಕೋರಿದರು.
ಮೆರವಣಿಗೆ ಬೀದಿಯುದ್ದಕ್ಕೂ ದೀಪಾಲಂಕಾರ, ಪ್ರಮುಖ ವೃತ್ತಗಳಲ್ಲಿ ಸರ್ಕಾರಿ ಕಟ್ಟಡಗಳಲ್ಲಿ ದೀಪಾಲಂಕಾರ ಮಾಡಲಾಗುತ್ತಿದೆ. ಎಲ್ಲ ಅಲಂಕಾರಗಳು ಸಹ ಕನ್ನಡಮಯ ವಾತಾವರಣವನ್ನು ಇಮ್ಮಡಿಗೊಳಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮೆರವಣಿಗೆಯಲ್ಲಿ ಸ್ಥಳೀಯ ಹಾಗೂ ರಾಜ್ಯಮಟ್ಟದ ಕಲಾತಂಡಗಳು ಭಾಗವಹಿಸಲಿವೆ. ಜಿಲ್ಲೆಯ ಸಾರ್ವಜನಿಕರೆಲ್ಲರೂ ಸಹ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸೋಣ ಎಂದರು.ನ. ೧ರಿಂದ ೩ರ ವರೆಗೆ ಪ್ರತಿ ದಿನ ಸಂಜೆ ಕಾಟನ್ ಸೇಲ್ ಸೊಸೈಟಿ ಆವರಣದ ಬೃಹತ್ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ನ. ೧ರಂದು ಸ್ಥಳೀಯ ಕಲಾವಿದರಿಂದ ನ. ೨ ಮತ್ತು ೩ರಂದು ಸ್ಥಳೀಯ ಹಾಗೂ ರಾಜ್ಯ ಮಟ್ಟದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬರಲಿವೆ.
ಸಭೆಯಲ್ಲಿ ಕರ್ನಾಟಕ ಸಂಭ್ರಮ-೫೦ರ ಪೂರ್ವ ಸಿದ್ಧತೆಗಳು ಕುರಿತು ಹಾಗೂ ಅತಿಥಿ ಗಣ್ಯ ಮಹೋದಯರನ್ನು ಆಹ್ವಾನಿಸುವ ಬಗ್ಗೆ, ಕಾನೂನು ಸುವ್ಯವಸ್ಥೆ, ಸಂಚಾರಿ ವ್ಯವಸ್ಥೆ ಆಹ್ವಾನ ಪತ್ರಿಕೆ ಸೇರಿದಂತೆ ಕಾರ್ಯಕ್ರಮದ ಸಿದ್ಧತೆಗಳ ಕುರಿತು ಚರ್ಚಿಸಲಾಯಿತು. ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಲ್ಲಿ ಕಾರ್ಯಕ್ರಮಗಳ ಕುರಿತು ತಮ್ಮ ಸಲಹೇ ಸೂಚನೆಗಳನ್ನು ತಿಳಿಸಿದರು.ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ವಾರ್ತಾಧಿಕಾರಿ ವಸಂತ ಮಡ್ಲೂರ, ಜಿಲ್ಲಾ ಕನ್ನಡ ಸಾಹಿತ್ಯಪರಿಷತ್ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಅಭಿಮಾನಿಗಳು, ಸಾರ್ವಜನಿಕರು ಹಾಜರಿದ್ದರು.