ಉಡುಪಿ; ಕರ್ನಾಟಕದಲ್ಲಿ ರಾಜಕೀಯವು ಹೆಚ್ಚು ಜವಾಬ್ದಾರಿಯುತವಾಗಬೇಕು. ಜನರಿಗೆ ಉಚಿತ ಕೊಡುಗೆಗಳನ್ನು ಘೋಷಿಸಿ ಮತ ಪಡೆಯುವ ರಾಜಕಾರಣಕ್ಕೆ ಸೀಮಿತವಾಗದೆ, ರಾಜ್ಯಕ್ಕೆ ಉತ್ತಮ ಆಡಳಿತ ನೀಡುವತ್ತ ರಾಜಕೀಯ ಪಕ್ಷಗಳು ಗಮನಹರಿಸಬೇಕು ಎಂದು ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಅಣ್ಣಾಮಲೈ ಅಭಿಪ್ರಾಯಪಟ್ಟರು.
ಕರ್ನಾಟಕವು ಇನ್ನಷ್ಟು ಉತ್ತಮ ಸರ್ಕಾರವನ್ನು ನಿರೀಕ್ಷಿಸುವ ಅರ್ಹತೆಯನ್ನು ಹೊಂದಿದೆ. ಬೆಂಗಳೂರು ಮಾತ್ರ ಅಭಿವೃದ್ಧಿಯಾದರೆ ಸಾಲದು. ರಾಜ್ಯದ ಜಿಡಿಪಿಯ ಶೇ. 65ರಷ್ಟು ಕೊಡುಗೆಯನ್ನು ಬೆಂಗಳೂರು ನೀಡುತ್ತಿದೆ ಎಂಬ ಹಿನ್ನೆಲೆಯಲ್ಲಿ, ವಿಜಯಪುರ, ಕಲಬುರಗಿ, ಗದಗ, ಉಡುಪಿ ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳನ್ನು ನಿರ್ಲಕ್ಷಿಸುವುದು ತಪ್ಪು, ಎಲ್ಲಾ ಜಿಲ್ಲೆಗಳು ಸಮಾನವಾಗಿ ಅಭಿವೃದ್ಧಿಯಾಗಬೇಕು. ಕರ್ನಾಟಕವು ಬೆಂಗಳೂರು ಅವಲಂಬಿತ ರಾಜ್ಯವಾಗಬಾರದು ಎಂದವರು ಹೇಳಿದರು.
ರಾಜಕೀಯವು ಕೇವಲ ಪೋಸ್ಟರ್ ಸಂಸ್ಕೃತಿಗೆ ಸೀಮಿತವಾಗಬಾರದು. ಮುಖ್ಯಮಂತ್ರಿ ಅಥವಾ ಮಾಜಿ ಮುಖ್ಯಮಂತ್ರಿ ಬರುತ್ತಿದ್ದಾರೆ ಎಂದು ಪೋಸ್ಟರ್‌ಗಳನ್ನು ಹಾಕುವುದಕ್ಕಿಂತ, ಸರ್ಕಾರ ಉಡುಪಿಗೆ ಏನು ಮಾಡಿದೆ, ಕಲ್ಸಂಕಕ್ಕೆ ಯಾವ ಕೊಡುಗೆ ನೀಡಿದೆ ಎಂಬುದನ್ನು ಜನರಿಗೆ ತಿಳಿಸುವ ಪೋಸ್ಟರ್‌ಗಳನ್ನು ಹಾಕುವ ಮಟ್ಟಕ್ಕೆ ರಾಜಕೀಯ ಬೆಳೆಯಬೇಕು ಎಂದು ಉಡುಪಿಯಲ್ಲಿ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದ ಅಣ್ಣಾಮಲೈ ಹೇಳಿದರು.ರಾಜಕೀಯ ಪಕ್ಷಗಳ ನಡುವೆ ಅಭಿವೃದ್ಧಿ ಕಾರ್ಯಗಳ ಆಧಾರದಲ್ಲಿ ಸ್ಪರ್ಧೆ ಏರ್ಪಟ್ಟಾಗ ಮಾತ್ರ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯ. ಸರ್ಕಾರದ ಸಾಧನೆಗಳೇ ರಾಜಕೀಯ ಸ್ಪರ್ಧೆಯ ಮಾನದಂಡವಾಗಬೇಕು. ಇಂತಹ ಜವಾಬ್ದಾರಿಯುತ ಹಾಗೂ ಸ್ಪರ್ಧಾತ್ಮಕ ರಾಜಕೀಯ ವ್ಯವಸ್ಥೆ ರೂಪುಗೊಂಡಾಗ ಆಡಳಿತದಲ್ಲಿ ಸುಧಾರಣೆ ತರಲು ಸಾಧ್ಯ ಎಂದವರು ಹೇಳಿದರು.