ರಾಜ್ಯದಲ್ಲಿ ಹಸಿರು ಬರ, 4860 ಕೋಟಿ ಪರಿಹಾರಕ್ಕೆ ಮನವಿ

KannadaprabhaNewsNetwork |  
Published : Oct 08, 2023, 12:02 AM IST

ಸಾರಾಂಶ

ಕರ್ನಾಟಕದಲ್ಲಿ ಹಸಿರು ಬರ ಎದುರಾಗಿದ್ದು 4860 ಕೋಟಿ ರುಪಾಯಿ ಬೆಳೆ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ರಾಜ್ಯದ ಬರಪರಿಸ್ಥಿತಿ ಅಧ್ಯಯನಕ್ಕೆ ಕೇಂದ್ರ ತಂಡ ಆಗಮಿಸಿದೆ. ಅವರೊಂದಿಗೆ ಈಗಾಗಲೇ ಮಾತುಕತೆ ನಡೆಸಿ ವಾಸ್ತವ ಸ್ಥಿತಿ ಅಧ್ಯಯನ ಮಾಡಿ ವರದಿ ನೀಡುವಂತೆ ಸಲಹೆ ನೀಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಕನ್ನಡಪ್ರಭವಾರ್ತೆ, ಚಿತ್ರದುರ್ಗ ಕರ್ನಾಟಕದಲ್ಲಿ ಹಸಿರು ಬರ ಎದುರಾಗಿದ್ದು 4860 ಕೋಟಿ ರುಪಾಯಿ ಬೆಳೆ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೇಲ್ನೋಟಕ್ಕೆ ಎಲ್ಲೆಡೆ ಹಚ್ಚಹಸಿರು ಕಂಡರೂ ಬೆಳೆ ವಿಫಲವಾಗಿದೆ. ವಾಸ್ತವಿಕವಾಗಿ 30 ಸಾವಿರ ಕೋಟಿ ರುಪಾಯಿಯಷ್ಟು ಮೌಲ್ಯದ ಬೆಳೆ ಹಾನಿಯಾಗಿದ್ದರೂ ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ 4860 ಕೋಟಿ ರು. ಪರಿಹಾರ ಕೋರಲಾಗಿದೆ ಎಂದರು. ರಾಜ್ಯದ ಬರಪರಿಸ್ಥಿತಿ ಅಧ್ಯಯನಕ್ಕೆ ಕೇಂದ್ರ ತಂಡ ಆಗಮಿಸಿದೆ. ಅವರೊಂದಿಗೆ ಈಗಾಗಲೇ ಮಾತುಕತೆ ನಡೆಸಿ ವಾಸ್ತವ ಸ್ಥಿತಿ ಅಧ್ಯಯನ ಮಾಡಿ ವರದಿ ನೀಡುವಂತೆ ಸಲಹೆ ನೀಡಲಾಗಿದೆ. ಒಟ್ಟು 236 ತಾಲೂಕುಗಳಲ್ಲಿ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. 42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು ಶೇ.52 ರಷ್ಟು ಬೆಳೆಹಾನಿಯಾಗಿದೆ.122 ವರ್ಷಗಳಲ್ಲೇ ರಾಜ್ಯದಲ್ಲಿ ಅತ್ಯಂತ ಕಡಿಮೆ ಮಳೆ ಆಗಿದೆ. ಪ್ರಮುಖ ಜಲಾಶಯಗಳಲ್ಲೂ ನೀರಿನ ಸಂಗ್ರಹ ಪ್ರಮಾಣ ಕಡಿಮೆಯಾಗಿದೆ. ಕೇಂದ್ರದ ಅಧ್ಯಯನ ತಂಡ ರಾಜ್ಯದ 11 ಜಿಲ್ಲೆಗಳಿಗೆ ಭೇಟಿ ನೀಡುತ್ತಿದೆ. ಅವರು ಕೇಂದ್ರಕ್ಕೆ ವರದಿ ಸಲ್ಲಿಸಿದ ನಂತರ , ಕೇಂದ್ರ ಪರಿಹಾರ ನೀಡು ತೀರ್ಮಾನ ಕೈಗೊಳ್ಳಲಿದೆ ಎಂದರು. ರಾಜ್ಯದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗಬಾರದು. ಜನ ಗುಳೇ ಹೋಗದಂತೆ ಎಚ್ಚರಿಕೆ ವಹಿಸಬೇಕು. ಕೇಂದ್ರ ಸರ್ಕಾರ ಎಷ್ಟಾದರೂ ಪರಿಹಾರ ಕೊಡಲಿ, ರಾಜ್ಯ ಸರ್ಕಾರ ಬರಗಾಲವನ್ನು ಸಮರ್ಥವಾಗಿ ಎದುರಿಸಲಿದೆ ಎಂದರು. ಭದ್ರಾ ಮೇಲ್ದಂಡೆಗೆ ಕೇಂದ್ರದಿಂದ 5300 ಕೋಟಿ ರು. ಬಂದಿಲ್ಲ ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಘೋಷಿಸಿದ ಅನುದಾನದ ನೆರವು ಈವರೆಗೂ ಬಂದಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಭದ್ರಾ ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ 5300 ಕೋಟಿ ರು. ನೆರವು ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಈವರೆಗೂ ಕೇಂದ್ರದ ನೆರವು ಬಂದಿಲ್ಲ. ಈ ಮೊತ್ತವನ್ನು ಆದಷ್ಟು ಬೇಗ ಬಿಡುಗಡೆಗೊಳಿಸುವಂತೆ ಕೇಂದ್ರಕ್ಕೆ ಮತ್ತೊಮ್ಮೆ ಕೋರಲಾಗಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!