ಪ್ರವಾಸೋದ್ಯಮ ಅಭಿವೃದ್ಧಿಗೆ ಖಾಸಗಿ ಪಾಲುದಾರಿಕೆ

KannadaprabhaNewsNetwork |  
Published : Feb 17, 2024, 01:15 AM IST
ಬಜೆಟ್‌ | Kannada Prabha

ಸಾರಾಂಶ

ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಬಜೆಟ್‌ನಲ್ಲಿ ಪ್ರಮುಖ 10 ಪ್ರವಾಸಿ ತಾಣಗಳಲ್ಲಿ ಕೇಬಲ್‌ ಕಾರ್‌/ ರೂಪ್‌ ವೇ ನಿರ್ಮಾಣ, ಪ್ರಮುಖ ಜಲಾಶಗಳಯ ಹಿನ್ನೀರಲ್ಲಿ ಜಲಕ್ರೀಡೆ ಅಭಿವೃದ್ಧಿ ಸೇರಿ ವಿವಿಧ ಹೊಸ ಯೋಜನೆಗಳ ಜೊತೆಗೆ ಹೂಡಿಕೆದಾರರ ಹಾಗೂ ಪ್ರವಾಸಿಗರ ಸ್ನೇಹಿ ಪರಿಷ್ಕೃತ ಪ್ರವಾಸೋದ್ಯಮ ನೀತಿ 2024-29 ಅನ್ನು ಜಾರಿಗೆ ತರುವುದಾಗಿ ಘೋಷಿಸಲಾಗಿದೆ.

ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಈ ಬಾರಿಯ ಬಜೆಟ್‌ನಲ್ಲಿ ಪ್ರಮುಖ 10 ಪ್ರವಾಸಿ ತಾಣಗಳಲ್ಲಿ ಕೇಬಲ್‌ ಕಾರ್‌/ ರೂಪ್‌ ವೇ ನಿರ್ಮಾಣ, ಪ್ರಮುಖ ಜಲಾಶಗಳಯ ಹಿನ್ನೀರಲ್ಲಿ ಜಲಕ್ರೀಡೆ, ಜಲಸಾಹಕ ಪ್ರವಾಸೋದ್ಯಮ ಅಭಿವೃದ್ಧಿ ಸೇರಿದಂತೆ ವಿವಿಧ ಹೊಸ ಯೋಜನೆಗಳ ಜೊತೆಗೆ ಹೂಡಿಕೆದಾರರ ಹಾಗೂ ಪ್ರವಾಸಿಗರ ಸ್ನೇಹಿ ಪರಿಷ್ಕೃತ ಪ್ರವಾಸೋದ್ಯಮ ನೀತಿ 2024-29ಅನ್ನು ಜಾರಿಗೆ ತರುವುದಾಗಿ ಘೋಷಿಸಲಾಗಿದೆ. ಸಾಹಸ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪ್ರಮುಖ ಜಲಾಶಯಗಳ ಹಿನ್ನೀರು ಮತ್ತು ಕಡಲ ತೀರಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಜಲಕ್ರೀಡೆಗಳು ಮತ್ತು ಜಲಸಾಹಸ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲಾಗುವುದು.

10 ಕಡೆ ರೋಪ್‌ವೇ:ಬಂಡೀಪುರ, ದಾಂಡೇಲಿ ಮತ್ತು ಕಬಿನಿಯಲ್ಲಿ 25 ಕೋಟಿ ರು. ವೆಚ್ಚದಲ್ಲಿ ನಮ್ಮ ಪ್ರಾಕೃತಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಾಹಿತಿಯನ್ನೊಳಗೊಂಡ ಇಂಟರ್‌ಪ್ರಿಟೇಷನ್‌ ಸೆಂಟರ್‌ಗಳ ನಿರ್ಮಿಸಲಾಗುವುದು. ರಾಜ್ಯದ ಪ್ರಮುಖ 10 ಪ್ರವಾಸಿ ತಾಣಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕೇಬಲ್‌ ಕಾರ್‌/ ರೋಪ್‌ವೇ ಸೌಲಭ್ಯ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಲಾಗಿದೆ. ಅಂಜನಾದ್ರಿ ಬೆಟ್ಟಕ್ಕೆ ನೆರವು:

ಅಲ್ಲದೆ, ಪೌರಾಣಿಕ ಹಾಗೂ ಐತಿಹಾಸಿಕ ಪ್ರಖ್ಯಾತಿಯ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರವಾಸಿ ಸೌಲಭ್ಯಕ್ಕೆ 100 ಕೋಟಿ ರು. ಮೀಸಲು. ಗೋಕಾಕ ಜಲಪಾತವನ್ನು ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿಪಡಿಸುವುದು. ದೇಶದಲ್ಲೇ ಪ್ರಥಮವಾಗಿ ರಾಜ್ಯದ 530 ಸುರಕ್ಷಿತ ಸ್ಮಾರಕಗಳನ್ನು 3 ಡಿ ಲೇಸರ್‌ ಸ್ಕ್ಯಾನಿಂಗ್‌ ಮೂಲಕ ಡಿಜಿಟಲ್‌ ದಾಖಲೀಕರಣ ಮಾಡಲಾಗಿದೆ. ಮುಂದೆ ಈ ಡಿಜಿಟಲ್‌ ಮಾಹಿತಿಯನ್ನು ಪರಿಣಾಮಕಾರಿಗೆ ಮತ್ತು ಸಂವಾದಾತ್ಮಕವಾಗಿ ಅಭಿವೃದ್ಧಿಪಡಿಸಲು ಕ್ರಮ ವಹಿಸಲಾಗುವುದು. ಸಮೀಕ್ಷೆಗೆ ಶಿಫಾರಸು:ರಾಷ್ಟ್ರಕೂಟರ ಕಾಲದಲ್ಲಿ ಕರ್ನಾಟಕದ ಮೊಟ್ಟ ಮೊದಲ ವಿಶ್ವವಿದ್ಯಾಲಯವನ್ನು ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲ್ಲೂಕಿನ ನಾಗಾವಿಯಲ್ಲಿ ಸ್ಥಾಪಿಸಲಾಗಿತ್ತು ಎಂಬುದು ಸ್ಥಳೀಯರ ನಂಬಿಕೆ. ಹಾಗಾಗಿ ಅಲ್ಲಿನ ಪ್ರಾಚ್ಯಾವಶೇಷಗಳ ಸಂಶೋಧನೆ ಮತ್ತು ಸಂರಕ್ಷಣೆಗಾಗಿ ನೆರವು ನೀಡಲು ಆರ್ಚಿಯಾಲಜಿಕಲ್‌ ಸರ್ವೆ ಆಫ್‌ ಇಂಡಿಯಾಗೆ (ಎಎಸ್‌ಐ) ಶಿಫಾರಸು ಮಾಡಲಾಗುವುದು ಎಂದು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.

ಉಳಿದಂತೆ ಕೆಎಸ್‌ಟಿಡಿಸಿಯಿಂದ ಬಾಗಲಕೋಟೆಯ ಐಹೊಳೆಯಲ್ಲಿ ಸುಸಜ್ಜಿತ ಹೋಟೆಲ್‌ ನಿರ್ಮಾಣ ಹಾಗೂ ರೋರಿಚ್‌ ಮತ್ತು ದೇವಿಕಾರಾಣಿ ಎಸ್ಟೇಟ್‌ ಪ್ರದೇಶದಲ್ಲಿ ಮೂಲ ಸೌಲಭ್ಯ ಅಭಿವೃದ್ಧಿ. ಬೀದರ್‌ ಹಾಗೂ ವಿಜಯಪುರದಲ್ಲಿ ಕರೇಜ್‌ ಎಂಬ ಪ್ರಸಿದ್ಧವಾಗಿರುವ ಪುರಾತನ ನೀರು ಸರಬರಾಜು ವ್ಯವಸ್ಥೆಯನ್ನು ನುರಿತ ಸಂಸ್ಥೆಗಳ ತಾಂತ್ರಿಕ ನೆರವಿನಲ್ಲಿ 15 ಕೋಟಿ ರು. ವೆಚ್ಚದಲ್ಲಿ ಪುನಶ್ಚೇತನ. ಗದಗ ಜಿಲ್ಲೆಯ ಕಪ್ಪತ್ತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ. ಶ್ರೀ ಕ್ಷೇತ್ರ ರೇಣುಕಾ ಯಲ್ಲಮ್ಮನ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಸಂರಕ್ಷಿಸಿ ಅಭಿವೃದ್ಧಿಗೊಳಿಸಲು ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯನ್ನು ರಚಿಸುವುದು ಬಜೆಟ್‌ನಲ್ಲಿನ ಇತರೆ ಅಂಶಗಳಾಗಿವೆ.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು