)
ನವದೆಹಲಿ: ‘ಕೆಲ ಯೋಜನೆಯ ಹೆಸರಲ್ಲಿ ಪ್ರಧಾನಿಗಳ ಹೆಸರಿದೆ ಎಂಬ ಒಂದೇ ಕಾರಣಕ್ಕೆ ಅವನ್ನು ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಜಾರಿ ತರಲಾಗುತ್ತಿಲ್ಲ’ ಎಂದು ಕರ್ನಾಟಕದ ಉದಾಹರಣೆ ನೀಡುತ್ತ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ವಿಪಕ್ಷದ ವಿರುದ್ಧ ಮಂಗಳವಾರ ರಾಜ್ಯಸಭೆಯಲ್ಲಿ ಕಿಡಿ ಕಾರಿದರು.
ಅಂತೆಯೇ, ‘ನಾವು 1 ರು. ಕಳಿಸಿದರೆ ಬಡವರಿಗೆ ಅದರಲ್ಲಿ 15 ಪೈಸೆ ಸಿಗುತ್ತದೆ ಎಂದು ಮಾಜಿ ಪ್ರಧಾನಿ (ರಾಜೀವ್ ಗಾಂಧಿ) ಹತಾಶೆ ವ್ಯಕ್ತಪಡಿಸಿದ್ದರು. ಆದರೆ ನಮ್ಮ ಪ್ರಧಾನಿ ಕಳಿಸುವ ಪ್ರತಿಯೊಂದು ಪೈಸೆ ಬಡವರನ್ನು ತಲುಪುತ್ತಿದೆ’ ಎಂದು ಅವರು ಹೇಳಿದರು. ಜಿ ರಾಮ್‌ಜಿಗೆ ಅಡ್ಡಿ:
ಮನರೇಗಾ ಹೆಸರು ಬದಲಿಸಿ ಕೇಂದ್ರ ಸರ್ಕಾರ ಜಾರಿಗೆ ತಂದ ಜಿ ರಾಮ್ ಜಿಗೆ ‘ಕರ್ನಾಟಕ ಹೊರತುಪಡಿಸಿ ಬಿಜೆಪಿಯೇತರ ಎಲ್ಲಾ ರಾಜ್ಯಗಳಲ್ಲಿಯೂ ಅಲ್ಲಿನ ರಾಜ್ಯ ಸರ್ಕಾರಗಳು ಬೆಂಬಲ ನೀಡಿವೆ ’ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.ರಾಜ್ಯಸಭೆಯಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ‘ಕರ್ನಾಟಕವನ್ನು ಹೊರತುಪಡಿಸಿ ಬಿಜೆಪಿಯೇತರ ಪಕ್ಷಗಳೂ ಆಡಳಿತದಲ್ಲಿರುವ ಜಾರ್ಖಂಡ್, ಕೇರಳ, ಪಂಜಾಬ್, ಜಮ್ಮ ಕಾಶ್ಮೀರ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಅಲ್ಲಿನ ಸರ್ಕಾರಗಳು ಜಿ ರಾಮ್ ಜಿ ಅನುಷ್ಠಾನಕ್ಕೆ ಬಜೆಟ್‌ನಲ್ಲಿ ನಿಬಂಧನೆಗಳನ್ನು ಮಾಡಿವೆ’ ಎಂದಿದ್ದಾರೆ.