ಸಂಪುಟದಿಂದ ಸಹಕಾರ ಸಚಿವ ರಾಜಣ್ಣ ಡಿಸ್‌ಮಿಸ್‌

KannadaprabhaNewsNetwork |  
Published : Aug 12, 2025, 12:30 AM ISTUpdated : Aug 12, 2025, 05:53 AM IST
ರಾಜಣ್ಣ  | Kannada Prabha

ಸಾರಾಂಶ

ತಮ್ಮ ಸಡಿಲ ಹೇಳಿಕೆಗಳಿಂದ ವಿವಾದಗಳ ಸರಮಾಲೆ ಸೃಷ್ಟಿಸಿದ್ದ ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಅವರನ್ನು ಕ್ಷಿಪ್ರ ರಾಜಕೀಯ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್ ಆಣತಿಯ ಮೇರೆಗೆ ಸಂಪುಟದಿಂದ ವಜಾ ಮಾಡಿದ್ದಾರೆ.

 ಬೆಂಗಳೂರು :  ತಮ್ಮ ಸಡಿಲ ಹೇಳಿಕೆಗಳಿಂದ ವಿವಾದಗಳ ಸರಮಾಲೆ ಸೃಷ್ಟಿಸಿದ್ದ ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಅವರನ್ನು ಕ್ಷಿಪ್ರ ರಾಜಕೀಯ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್ ಆಣತಿಯ ಮೇರೆಗೆ ಸಂಪುಟದಿಂದ ವಜಾ ಮಾಡಿದ್ದಾರೆ. ಹಾಲಿ ಸಚಿವರು ರಾಜೀನಾಮೆ ನೀಡುವುದು ಆಗಾಗ್ಗೆ ನಡೆಯುವ ಬೆಳವಣಿಗೆಯಾದರೂ ಸಂಪುಟದಿಂದ ಮಂತ್ರಿಯನ್ನೇ ವಜಾಗೊಳಿಸುವುದು ಅತ್ಯಂತ ಅಪರೂಪ. ಇತ್ತೀಚಿನ ದಶಕಗಳಲ್ಲಿ ಇದನ್ನು ರಾಜ್ಯ ಕಂಡಿಲ್ಲ.

ಮತಗಳ್ಳತನ ಕುರಿತು ರಾಜಣ್ಣ ನೀಡಿದ್ದ ಹೇಳಿಕೆಯು ಕಾಂಗ್ರೆಸ್‌ ಪಕ್ಷಕ್ಕೆ ಮಾತ್ರವಲ್ಲದೇ ದೇಶಾದ್ಯಂತ ಈ ಬಗ್ಗೆ ಹೋರಾಟಕ್ಕೆ ಮುಂದಾಗಿರುವ ‘ಇಂಡಿಯಾ’ ಕೂಟಕ್ಕೂ ಮುಜುಗರ ತಂದಿದ್ದು, ಕೂಟದ ಸದಸ್ಯರೇ ಈ ಬಗ್ಗೆ ಹೈಕಮಾಂಡ್‌ ಬಳಿ ವಿಚಾರ ಪ್ರಸ್ತಾಪಿಸಿದ್ದರ ಪರಿಣಾಮವಾಗಿ ರಾಜೀನಾಮೆ ಪಡೆಯುವ ಬದಲಾಗಿ ಸಂಪುಟದಿಂದ ವಜಾಗೊಳಿಸುವ ಕಠೋರ ನಿರ್ಧಾರವನ್ನು ಕಾರ್ಯಗತಗೊಳಿಸಲಾಗಿದೆ.

ರಾಜಣ್ಣ ವಿರುದ್ಧದ ಕಠಿಣ ನಿರ್ಧಾರಕ್ಕೆ ಬದಲಾಗಿ ಅಧಿವೇಶನದ ಮುಗಿದ ಕೂಡಲೇ ರಾಜೀನಾಮೆ ಪಡೆಯುವ ಆಶ್ವಾಸನೆಯನ್ನು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್‌ಗೆ ನೀಡಿ, ಮನವೊಲಿಸಲು ಯತ್ನಿಸಿದ್ದರೂ ಅದು ಸಫಲವಾಗಿಲ್ಲ. ಆರಂಭದಲ್ಲಿ ಸೋಮವಾರವೇ ರಾಜೀನಾಮೆ ಪಡೆಯುವಂತೆ ಸೂಚಿಸಿದ್ದ ಹೈಕಮಾಂಡ್‌, ಮಧ್ಯಾಹ್ನದ ವೇಳೆಗೆ ರಾಜೀನಾಮೆ ಬೇಡ ವಜಾಗೊಳಿಸಿ ಎಂಬ ಸ್ಪಷ್ಟ ಸೂಚನೆಯನ್ನು ನೀಡಿತು ಎನ್ನಲಾಗಿದೆ.

ತನ್ಮೂಲಕ ಸಿದ್ದರಾಮಯ್ಯ 2.0 ಸರ್ಕಾರದಲ್ಲಿ ಎರಡನೇ ವಿಕೆಟ್‌ ಪತನ ಆಗಿದೆ. ಈವರೆಗೆ ಸಂಪುಟದಿಂದ ಹೊರಹೋದ ಇಬ್ಬರೂ ಸಚಿವರು ವಾಲ್ಮೀಕಿ ಸಮುದಾಯದವರೇ ಎಂಬುದು ಗಮನಾರ್ಹ. ವಾಲ್ಮೀಕಿ ನಿಗಮದ ಹಗರಣವು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಕಾರಣವಾಗಿತ್ತು. ಇದೀಗ ರಾಹುಲ್‌ಗಾಂಧಿ ಅವರ ಮತಗಳ್ಳತನ ಹೋರಾಟದ ವಿರುದ್ಧದ ಹೇಳಿಕೆ ರಾಜಣ್ಣ ಅವರ ತಲೆದಂಡ ಪಡೆದಿದೆ.ಮಾತಿಗೆ ಬಲಿಯಾದ ರಾಜಣ್ಣ:

‘ಮತಪಟ್ಟಿ ಸಿದ್ಧಪಡಿಸುವಲ್ಲಿ ಆಗಿರುವ ಲೋಪಗಳಿಗೆ ನಾವೇ ಕಾರಣ. ನಮಗೆ (ಕಾಂಗ್ರೆಸ್‌) ನಾಚಿಕೆಯಾಗಬೇಕು’ ಎಂದು ಕೆ.ಎನ್‌. ರಾಜಣ್ಣ ತೀಕ್ಷ್ಣ ಹೇಳಿಕೆ ನೀಡಿದ್ದರು. ಈ ಹೇಳಿಕೆ ರಾಹುಲ್‌ಗಾಂಧಿ ಅವರ ಹೋರಾಟಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಹಿನ್ನಡೆ ಉಂಟು ಮಾಡಿತ್ತು. ಮತಗಳ್ಳತನ ವಿರುದ್ಧ ದೇಶಾದ್ಯಂತ ಹೋರಾಟ ನಡೆಸುತ್ತಿದ್ದ ಇಂಡಿಯಾ ಕೂಟಕ್ಕೆ ತೀವ್ರ ಮುಜುಗರ ಉಂಟಾಗಿತ್ತು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಅವರನ್ನು ಸಂಪುಟದಿಂದ ವಜಾಗೊಳಿಸಲಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಸದನದ ಒಳಗೆ ಹಾಗೂ ಹೊರಗೆ ಕೆ.ಎನ್‌. ರಾಜಣ್ಣ ಅವರ ಪರ ಬಿಜೆಪಿ ನಾಯಕರು ಹೇಳಿಕೆ ನೀಡಿದ್ದು, ಸತ್ಯ ಹೇಳಿದ್ದೇ ಅವರಿಗೆ ಮುಳುವಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆ. 11ರಂದೇ ಹಠಾತ್ ಕ್ರಾಂತಿ:

ಸೆಪ್ಟೆಂಬರ್‌ ಕ್ರಾಂತಿ ಬಗ್ಗೆ ಪದೇ ಪದೇ ಮುನ್ಸೂಚನೆ ನೀಡುತ್ತಿದ್ದ ಕೆ.ಎನ್‌. ರಾಜಣ್ಣ ಅವರನ್ನು ವಜಾಗೊಳಿಸುವ ಮುನ್ಸೂಚನೆ ಯಾರಿಗೂ ದೊರೆತಿರಲಿಲ್ಲ. ಸೋಮವಾರ ಬೆಳಗ್ಗೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ, ಅಖಿಲೇಶ್ ಯಾದವ್‌ ಸೇರಿದಂತೆ ಇಂಡಿಯಾ ಮೈತ್ರಿಕೂಟದ ನಾಯಕರು ದೆಹಲಿಯ ಚುನಾವಣಾ ಆಯೋಗದ ಪ್ರಧಾನ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದರು. ಇದಕ್ಕೂ ಮೊದಲು ನಮ್ಮ ಹೋರಾಟ ಅಣಕಿಸುವಂತೆ ಕಾಂಗ್ರೆಸ್ ಸರ್ಕಾರದ ಸಚಿವರೇ ನೀಡಿರುವ ಹೇಳಿಕೆ ವಿರುದ್ಧ ಕ್ರಮ ಆಗಬೇಕು ಎಂದು ಇಂಡಿಯಾ ಕೂಟದ ನಾಯಕರು ಒತ್ತಾಯಿಸಿದ್ದರು ಎನ್ನಲಾಗಿದೆ.

ಇಂಡಿಯಾ ಕೂಟದ ಒತ್ತಡದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅವರು ಕೆ.ಎನ್‌. ರಾಜಣ್ಣ ಅವರನ್ನು ಸಂಪುಟದಿಂದ ತೆಗೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿದ್ದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ವಿಧಾನಮಂಡಲ ಅಧಿವೇಶನ ಸೋಮವಾರದಿಂದಷ್ಟೆ ಶುರುವಾಗಿದೆ. ಜತೆಗೆ ಅವರೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ. ಹೀಗಾಗಿ ಅಧಿವೇಶನ ಬಳಿಕ ಅವರಿಂದಲೇ ರಾಜೀನಾಮೆ ಪಡೆಯಬಹುದು’ ಎಂದು ಮನವೊಲಿಸಲು ಪ್ರಯತ್ನಿಸಿದರು. ಆದರೆ, ಇದಕ್ಕೆ ಒಪ್ಪದ ವೇಣುಗೋಪಾಲ್‌ ರಾಜೀನಾಮೆ ಪಡೆಯುವುದಾದರೂ ಇಂದೇ ಪಡೆಯಬೇಕು ಎಂದು ಸೂಚಿಸಿದರು ಎನ್ನಲಾಗಿದೆ.

ಇದರ ನಡುವೆ ಮಧ್ಯಾಹ್ನ ಆದರೂ ರಾಜೀನಾಮೆ ನೀಡಿಲ್ಲ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಸಂಪುಟದಿಂದ ವಜಾಗೊಳಿಸುವಂತೆ ವರಿಷ್ಠರು ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದರು. ಈ ವೇಳೆಗೆ ಕೆ.ಎನ್‌. ರಾಜಣ್ಣ ಅವರು ಮುಖ್ಯಮಂತ್ರಿಗಳ ಕಚೇರಿಗೆ ರಾಜೀನಾಮೆ ಸಲ್ಲಿಸಿದ್ದರು ಎನ್ನಲಾಗಿದೆ.

ರಾಜ್ಯಪಾಲರಿಂದ ಅಧಿಸೂಚನೆ:

ರಾಜಣ್ಣ ಅವರು ರಾಜೀನಾಮೆ ಸಲ್ಲಿಸಿರುವ ಬಗ್ಗೆ ಉಂಟಾಗಿದ್ದ ಗೊಂದಲಗಳ ಹಿನ್ನೆಲೆಯಲ್ಲಿ ಮಧ್ಯಾಹ್ನದ ವೇಳೆಗೆ ಸಂಪುಟದಿಂದ ಕೈಬಿಟ್ಟಿರುವುದಾಗಿ ಮುಖ್ಯಮಂತ್ರಿಗಳೇ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಬೆನ್ನಲ್ಲೇ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ ಅವರು, ‘ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಚಿವ ಸಂಪುಟದಿಂದ ತೆಗೆದು ಹಾಕುವ ಕುರಿತು ಮಾನ್ಯ ರಾಜ್ಯಪಾಲರು ಸಹಿ ಹಾಕಿರುವ ಮೂಲ ಅಧಿಸೂಚನೆಯನ್ನು ಇದರೊಂದಿಗೆ ಕಳುಹಿಸಲು ನನಗೆ ಸೂಚಿಸಲಾಗಿದೆ’ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಪತ್ರ ಬರೆದಿದ್ದಾರೆ. 

ವಜಾಗೊಂಡಿದ್ದಕ್ಕೆ ಕೆಲವರ

ಷಡ್ಯಂತ್ರ ಕಾರಣ: ರಾಜಣ್ಣ

  ಬೆಂಗಳೂರು : ಸಚಿವ ಸಂಪುಟದಿಂದ ವಜಾಗೊಂಡಿದ್ದರ ಹಿಂದೆ ಕೆಲ ನಾಯಕರ ಷಡ್ಯಂತ್ರವಿದೆ. ಈ ಪಿತೂರಿ ನಡೆಸಿದ್ದು ಯಾರು ಎಂದು ಕಾಲ ಬಂದಾಗ ಬಹಿರಂಗಪಡಿಸುತ್ತೇನೆ ಎಂದು ವಜಾಗೊಂಡ ಮಾಜಿ ಸಚಿವ ಕೆ.ಎನ್‌. ರಾಜಣ್ಣ ಹೇಳಿದ್ದಾರೆ.

ಅಲ್ಲದೆ, ತಮ್ಮನ್ನು ಸಂಪುಟದಿಂದ ವಜಾ ಮಾಡುವುದು ಹೈಕಮಾಂಡ್‌ ತೀರ್ಮಾನ. ಅದನ್ನು ನಾನು ಒಪ್ಪಿದ್ದೇನೆ. ಹೈಮಾಂಡ್‌ ನಿರ್ಧಾರವನ್ನು ಪ್ರಶ್ನಿಸಲು ಹೋಗುವುದಿಲ್ಲ. ಹೈಕಮಾಂಡ್‌ಗೆ ಮುಜುಗರವಾಗಲು ನಾನು ಬಯಸುವುದಿಲ್ಲ ಎಂದೂ ಹೇಳಿದ್ದಾರೆ.ಜತೆಗೆ, ಹೈಕಮಾಂಡ್‌ ವರಿಷ್ಠರು ನನ್ನ ಬಗ್ಗೆ ತಪ್ಪು ತಿಳುವಳಿಕೆ ಬರುವಂತೆ ಮಾಡಲಾಗಿದೆ. ಹೀಗಾಗಿ ಸಂಪುಟದ ಸಹೋದ್ಯೋಗಿಗಳ ಜತೆಗೆ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿ ತಪ್ಪುಗ್ರಹಿಕೆ ನಿವಾರಿಸಲು ಯತ್ನಿಸುವುದಾಗಿಯೂ ಅವರು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸೋಮವಾರ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎನ್‌. ರಾಜಣ್ಣ, ನಾನು ಮಾಜಿ ಸಚಿವನಾಗಿ ಮಾಧ್ಯಮಗಳ ಮುಂದೆ ಬಂದಿದ್ದೇನೆ. ಮಾಜಿ ಸಚಿವ ಎಂದು ಕರೆಸಿಕೊಳ್ಳಲು ನನಗೆ ಯಾವುದೇ ಬೇಸರವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟದಲ್ಲಿ ಕೆಲಸ ಮಾಡಲು ಈವರೆಗೆ ಅವಕಾಶ ಕೊಟ್ಟಿದ್ದರು. ಅದಕ್ಕಾಗಿ ಸಿದ್ದರಾಮಯ್ಯ ಸಾಹೇಬರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್‌ ನಿರ್ಧಾರದಂತೆ ನನ್ನನ್ನು ಸಂಪುಟದಿಂದ ಕೈಬಿಟ್ಟಿರುವ ಪತ್ರವನ್ನು ರಾಜ್ಯಪಾಲರಿಗೆ ಕಳುಹಿಸಿದ್ದರು. ಅದಕ್ಕೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ ಎಂದರು.ಕೆಲವರ ಷಡ್ಯಂತ್ರದಿಂದ ನನ್ನ ಮೇಲೆ ಕ್ರಮ

ನನ್ನನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವುದರಲ್ಲಿ ಕೆಲವರ ಷಡ್ಯಂತ್ರ, ಪಿತೂರಿ ಎಲ್ಲವೂ ಇದೆ. ಅದನ್ನು ಯಾರು ಮಾಡಿದ್ದಾರೆ, ಏನೇನು ಮಾಡಿದ್ದಾರೆ, ಯಾವ್ಯಾವ ಮುಖಂಡರು ಎಲ್ಲೆಲ್ಲಿ ಪಿತೂರಿ ಮಾಡಿದ್ದಾರೆ, ಏನೇನು ನಡೆದಿದೆ ಎಂಬುದನ್ನು ಕಾಲ ಬಂದಾಗ ತಿಳಿಸುತ್ತೇನೆ ಎಂದು ಹೇಳಿದರು.ದೆಹಲಿಗೆ ತೆರಳಿ ನಾಯಕರನ್ನು ಭೇಟಿಯಾಗುತ್ತೇನೆ:

ನಮ್ಮ ನಾಯಕರಾದ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅವರಿಗೆ ನನ್ನ ಮೇಲೆ ತಪ್ಪು ಗ್ರಹಿಕೆಯಿದೆ. ಅದನ್ನು ನಿವಾರಿಸಲು ದೆಹಲಿಗೆ ಹೋಗುತ್ತೇನೆ. ನನ್ನೊಂದಿಗೆ ಹಿರಿಯ ಸಚಿವರು, ಶಾಸಕರನ್ನೂ ಕರೆದುಕೊಂಡು ಹೋಗುತ್ತೇನೆ. ತಪ್ಪು ಗ್ರಹಿಕೆ ನಿವಾರಿಸುವ ಕೆಲಸ ಮಾಡುತ್ತೇನೆ. ರಾಹುಲ್‌ ಗಾಂಧಿ ದೇಶದ ನಾಯಕರು. ದೇಶದಲ್ಲಿ ಮತಗಳ್ಳತನದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಅವರಿಗೆ ನಾನು ಬೆಂಬಲವಾಗಿ ನಿಲ್ಲುತ್ತೇನೆ. ಅವರ ಮಾರ್ಗದರ್ಶನದಂತೆ ಮುಂದೆಯೂ ಕೆಲಸ ಮಾಡುತ್ತೇನೆ ಎಂದು ರಾಜಣ್ಣ ತಿಳಿಸಿದರು.ಸಿಎಂಗೆ ಶಕ್ತಿ ತುಂಬಲು ರಾಜೀನಾಮೆ:

ನನ್ನ ರಾಜೀನಾಮೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಕ್ತಿ ಕುಂದುತ್ತದೆ ಎಂಬುದೇನಿಲ್ಲ. ಅವರಿಗೆ ಶಕ್ತಿ ತುಂಬುವವರಲ್ಲಿ ನಾನು ಮೊದಲಿಗ. ಅವರಿಗೆ ಶಕ್ತಿ ತುಂಬಲೆಂದೇ ನಾನು ಸಂಪುಟದಿಂದ ಹೊರಗೆ ಬಂದಿದ್ದೇನೆ ಎಂದು ರಾಜಣ್ಣ ಹೇಳಿದರು.

ಅಧಿವೇಶನ ಮುಗಿದ ಬಳಿಕ ರಾಜೀನಾಮೆ ಪಡೆಯಲು ಹರಸಾಹಸ ನಡೆಸಿದ್ದ ಸಿಎಂ ಸಿದ್ದುರಾಜಣ್ಣ ಹೇಳಿದ್ದೇನು?

ಆಗಸ್ಟ್ 8ರಂದು ಬೆಂಗಳೂರಿಗೆ ಆಗಮಿಸಿದ್ದ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಬೆಂಗಳೂರಿನಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪಿಸಿ ಬೃಹತ್‌ ಪ್ರತಿಭಟನೆ ನಡೆಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಸಚಿವ ಕೆ.ಎನ್‌. ರಾಜಣ್ಣ, ‘ಮತಗಳ್ಳತನ ಎಂದು ನಾವು ಹೇಳುತ್ತಿದ್ದೇವೆ. ಇದು ನಡೆದಿರುವುದು ಸತ್ಯ. ಆದರೆ ನಾವೇ ಮೊದಲು ಮತಪಟ್ಟಿಯನ್ನು ನೋಡಿಕೊಳ್ಳಬೇಕಿತ್ತು. ಅದನ್ನು ನೋಡಿಕೊಳ್ಳದೇ ಈಗ ಹೇಳಲು ನಮಗೆ (ಕಾಂಗ್ರೆಸ್ಸಿಗೆ) ನಾಚಿಕೆಯಾಗಬೇಕು. ನಮ್ಮದೇ ಸರ್ಕಾರ ಇದ್ದಾಗ ಮತಪಟ್ಟಿ ಸಿದ್ಧಪಡಿಸಿದ್ದು. ಆಗೇನು ಕಣ್ಮುಚ್ಚಿ ಕುಳಿತಿದ್ದರಾ?’ ಎಂದು ಪ್ರಶ್ನಿಸಿದ್ದರು.

PREV
Read more Articles on

Recommended Stories

ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ
12.69 ಲಕ್ಷ ಶಂಕಾಸ್ಪದ ಬಿಪಿಎಲ್‌ ಚೀಟಿ ರಾಜ್ಯದಲ್ಲಿ ಪತ್ತೆ: ಮುನಿಯಪ್ಪ