ಚಿತ್ರದುರ್ಗದಲ್ಲಿ ನಡೆದ ನೂತನ ಕಟ್ಟಡಗಳ ಉದ್ಘಾಟನೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಇಲ್ಲಿನ ಬಸವೇಶ್ವರ ನಗರದ ಪೊಲೀಸ್ ವಸತಿ ಗೃಹದಲ್ಲಿ ರಾಜ್ಯ ಪೊಲೀಸ್, ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದ ವತಿಯಿಂದ ಜಿಲ್ಲೆಯ ಪೊಲೀಸ್ ಸಮುಚ್ಚಯ ಮತ್ತು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ, ತಳಕು ಪೊಲೀಸ್ ಠಾಣೆಗಳ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಇತ್ತೀಚೆಗೆ ಉದ್ಘಾಟನೆಗೊಂಡ ಕೆಲವು ಪೊಲೀಸ್ ಸ್ಟೇಷನ್‍ಗಳನ್ನು ಐಟಿ ಕಂಪನಿಗಳ ರೀತಿಯಲ್ಲಿ ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ನಿರ್ಮಾಣ ಮಾಡಲಾಗಿದೆ. ತಂತ್ರಜ್ಞಾನದ ಸಹಾಯದಿಂದ ಪ್ರಸ್ತುತ ದಿನಗಳಲ್ಲಿ ಪೊಲೀಸರು ಅಪರಾಧಿಗಳನ್ನು ಶೀಘ್ರವೇ ಪತ್ತೆಹಚ್ಚುವ ಕೆಲಸ ಮಾಡುತ್ತಿದ್ದಾರೆ. ಪ್ರಕರಣಗಳನ್ನು ತ್ವರಿತಗತಿಯಲ್ಲಿ ಭೇದಿಸುವಲ್ಲಿ ಸನ್ನದ್ಧರಾಗಿದ್ದಾರೆ ಎಂದರು.ದೇಶದ ಕಾನೂನು ವ್ಯವಸ್ಥೆ ರಕ್ಷಣೆ ಮಾಡಬೇಕಾದರೆ ಅದು ಪೊಲೀಸ್ ಅವರಿಂದ ಮಾತ್ರ ಸಾಧ್ಯ. ಹಾಗಾಗಿ ಪೊಲೀಸರನ್ನು ನಾವು ಸರಿಯಾಗಿ ನೋಡಿಕೊಳ್ಳುವ ಅಗತ್ಯ ಬಹಳಷ್ಟಿದೆ. ಪೊಲೀಸ್ ಇಲಾಖೆಯಲ್ಲಿ 1.10 ಲಕ್ಷ ಸಿಬ್ಬಂದಿ ಇದ್ದು, ಇದರಲ್ಲಿ ಕನಿಷ್ಠ 70 ರಿಂದ 80 ಸಾವಿರ ಸಿಬ್ಬಂದಿಗೆ ವಸತಿ ಸಮುಚ್ಚಯ ನಿರ್ಮಾಣ ಮಾಡಿಕೊಡಬೇಕು ಎಂಬ ಸಂಕಲ್ಪ ಹೊಂದಿದ್ದು, ಒಂದು ಯೋಜನೆಯನ್ನಾಗಿ ಮಾಡಿ ವಸತಿ ಸಮುಚ್ಚಯ ನಿರ್ಮಾಣ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡಿಕೊಡಲಾಗುವುದು ಎಂದರು.ನಾನು ಮೂರನೇ ಬಾರಿಗೆ ಗೃಹ ಸಚಿವನಾಗಿ ಅಧಿಕಾರ ಸ್ವೀಕರಿಸಿದ್ದು, ಪೊಲೀಸ್ ಇಲಾಖೆಯಲ್ಲಿ ಬದಲಾವಣೆ ಮಾಡುವ ನಿಟ್ಟಿನಲ್ಲಿ ಪೊಲೀಸ್ ಗೃಹ ಯೋಜನೆಯನ್ನು ಮಾಡಿ 10 ಸಾವಿರ ಮನೆಗಳನ್ನು ಕಟ್ಟಲಾಗುತ್ತಿದೆ. ಪೊಲೀಸ್ ಕುಟುಂಬಕ್ಕೆ ಅನಿಲ ಸಂಪರ್ಕ, ತ್ಯಾಜ್ಯ ವಿಲೇವಾರಿ, ಆಧುನಿಕ ಮಾದರಿಯ ಕಿಚನ್ ಸೇರಿದಂತೆ ನವೀನ ಮಾದರಿಗೆ ಅನುಗುಣವಾಗಿ ಅತ್ಯುತ್ತಮ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರಾರಂಭದಲ್ಲಿ ಒಂದು ಘಟಕ ವೆಚ್ಚಕ್ಕೆ 16 ಲಕ್ಷ ರು. ಇತ್ತು, ಇದೀಗ 20 ಲಕ್ಷಕ್ಕೆ ಏರಿಕೆಯಾಗಿದೆ. ಬಹಳ ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗಿದೆ. ಪೊಲೀಸ್ ಸಮುಚ್ಚಯದಲ್ಲಿ ಪೊಲೀಸ್ ಸಿಬ್ಬಂದಿ ಅಗತ್ಯವಾದ ಉತ್ತಮ ಸೌಲಭ್ಯಗಳನ್ನು ಒದಗಿಸಿಕೊಡಲಾಗಿದೆ ಎಂದರು.
ಶಾಸಕರಾದ ಕೆ.ಸಿ. ವೀರೇಂದ್ರ ಪಪ್ಪಿ, ಟಿ.ರಘುಮೂರ್ತಿ, ಬಿ.ಜಿ. ಗೋವಿಂದಪ್ಪ, ದಾವಣಗೆರೆ ಪೂರ್ವ ವಲಯದ ಉಪ ಪೊಲೀಸ್ ಮಹಾ ನಿರೀಕ್ಷಕ ಡಾ.ಕೆ.ತ್ಯಾಗರಾಜ್, ಜಿಲ್ಲಾಧಿಕಾರಿ ದಿವ್ಯಾಪ್ರಭು , ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ಅಧೀಕ್ಷಕ ಧರ್ಮೇಂದ್ರ ಕುಮಾರ್ ಮೀನಾ, ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಸೇರಿದಂತೆ ಮತ್ತಿತರರು ಇದ್ದರು. -----------------