ನಾಳೆ ಕೊಪ್ಪಳದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ

KannadaprabhaNewsNetwork | Published : Jan 21, 2025 12:34 AM

ಸಾರಾಂಶ

ಕರ್ನಾಟಕ ಸಾಹಿತ್ಯ ಅಕಾಡೆಮಿ ಕೊಡಮಾಡುವ ಸಾಹಿತ್ಯಶ್ರೀ ಪ್ರಶಸ್ತಿ ಸೇರಿದಂತೆ ಅಕಾಡೆಮಿಯಿ ಪ್ರಶಸ್ತಿಗಳ ಪ್ರದಾನ ಸಮಾರಂಭ ಜ. 22ರಂದು ಕೊಪ್ಪಳ ನಗರದ ಶಿವಶಾಂತ ಮಂಗಲಭವನದಲ್ಲಿ ಸಂಜೆ 4 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅಕಾಡೆಮಿ ಅಧ್ಯಕ್ಷ ಎಲ್. ಎನ್. ಮುಕುಂದರಾಜ್ ಕನ್ನಡಪ್ರಭ ವಾರ್ತೆ ಕೊಪ್ಪಳ

ಕರ್ನಾಟಕ ಸಾಹಿತ್ಯ ಅಕಾಡೆಮಿ ಕೊಡಮಾಡುವ ಸಾಹಿತ್ಯಶ್ರೀ ಪ್ರಶಸ್ತಿ ಸೇರಿದಂತೆ ಅಕಾಡೆಮಿಯಿ ಪ್ರಶಸ್ತಿಗಳ ಪ್ರದಾನ ಸಮಾರಂಭ ಜ. 22ರಂದು ಕೊಪ್ಪಳ ನಗರದ ಶಿವಶಾಂತ ಮಂಗಲಭವನದಲ್ಲಿ ಸಂಜೆ 4 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿಯ ಅಧ್ಯಕ್ಷ ಎಲ್. ಎನ್. ಮುಕುಂದರಾಜ್ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಕೊಪ್ಪಳದಲ್ಲಿ ಸಾಹಿತ್ಯ ಅಕಾಡೆಮಿ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜನೆ ಮಾಡಲಾಗುತ್ತಿದೆ. ಈ ಹಿಂದೆಯಲ್ಲ ಕೇವಲ ಬೆಂಗಳೂರಿಗೆ ಸೀಮಿತವಾಗಿದ್ದ ಈ ಕಾರ್ಯಕ್ರಮಗಳನ್ನು ಇನ್ಮುಂದೆ ರಾಜ್ಯವ್ಯಾಪಿ ನಡೆಸಲು ಅಕಾಡೆಮಿ ತೀರ್ಮಾನ ಮಾಡಿದೆ. ಹಂತ ಹಂತವಾಗಿ ವಿವಿಧ ಜಿಲ್ಲೆಗಳಲ್ಲಿ ಅಕಾಡೆಮಿ ಕಾರ್ಯಕ್ರಮಗಳನ್ನು ಈಗಾಗಲೇ ಆಯೋಜನೆ ಮಾಡಲಾಗಿದೆ ಎಂದರು.

ಜ. 22 ರಂದು ಸಂಜೆ 4 ಗಂಟೆಗೆ ಪ್ರಶಸ್ತಿ ಪುರಸ್ಕೃತರೊಂದಿಗೆ ಚಹಾ ಕೂಟ ಇರುತ್ತದೆ. ಇದಾದ ಮೇಲೆ ವೇದಿಕೆಯಲ್ಲಿ ಸುಗಮ ಸಂಗೀತ ಕಾರ್ಯಕ್ರಮ, ನಂತರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಪ್ರಶಸ್ತಿ ಪ್ರದಾನ ಮಾಡುವರು. ವಿರೋಧಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮುಖ್ಯಅತಿಥಿಗಳಾಗಿ ಭಾಗವಹಿಸುವರು. ಶಾಸಕ ರಾಘವೇಂದ್ರ ಹಿಟ್ನಾಳ ಅಧ್ಯಕ್ಷತೆ ವಹಿಸುವರು ಎಂದು ವಿವರಿಸಿದರು.

2022ನೇ ಸಾಲಿ ಸಾಹಿತ್ಯಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ಬಂಜೆಗೆರೆ ಜಯಪ್ರಕಾಶ, ಡಾ. ಎಂ.ಜಿ. ಮಂಜುನಾಥ, ಡಾ. ರಾಜಶೇಖರ ಹತಗುಂದಿ, ದಾಸನೂರು ಕೂಸಣ್ಣ, ಡಾ. ಅನಸೂಯಾ ಕಾಂಬಳೆ, ಬಿ. ಮಹೇಶ ಹರವೆ, ಎಚ್.ಎನ್. ಆರತಿ, ಚಲಂ ಹಾಡ್ಲಹಳ್ಳಿ, ರೂಮಿ ಹರೀಶ್, ಡಾ. ಸಾರಿಕಾದೇವಿ ಕಾಳಗಿ ಅವರಿಗೆ ಗೌರವಿಸಲಾಗುತ್ತದೆ.

2021ನೇ ಸಾಲಿನ ವರ್ಷದ ಪುಸ್ತಕ ಬಹುಮಾನ ಪಡೆದ 17 ಸಾಹಿತಿಗಳನ್ನು ಗೌರವಿಸಲಾಗುತ್ತದೆ. ಅಕಾಡೆಮಿ ದತ್ತಿ ಬಹುಮಾನ ಪಡೆದವರನ್ನು ಸಹ ಇದೇ ಸಂದರ್ಭದಲ್ಲಿ ಗೌರವಿಸಲಾಗುತ್ತದೆ ಎಂದರು.

ಕನ್ನಡ ಸಾಹಿತ್ಯ ಎಂದಾಕ್ಷಣ ಕೇವಲ ಸೃಜನಶೀಲ ಸಾಹಿತ್ಯವಷ್ಟೇ ಅಲ್ಲ, ವೃತ್ತಿಪರ ಸಾಹಿತ್ಯದ ಸಾಹಿತಿಗಳನ್ನು ಗುರುತಿಸಲಾಗುತ್ತದೆ. ವಿಜ್ಞಾನ ಸಾಹಿತಿಗಳನ್ನು ಸಹ ನಾವು ಪರಿಗಣಿಸಿದ್ದೇವೆ. ಆದರೂ ಸಹ ಇದನ್ನು ಗಂಭೀರವಾಗಿ ಪರಿಗಣಿಸಿ, ಮುಂದಿನ ದಿನಗಳಲ್ಲಿ ಸೃಜನಶೀಲ ಸಾಹಿತ್ಯದ ಜೊತೆಗೆ ವೃತ್ತಿಪರ ಸಾಹಿತ್ಯವನ್ನು ಗುರುತಿಸುವುದಕ್ಕೆ ಆದ್ಯತೆ ನೀಡಲಾಗುವುದು ಎಂದರು.

ಸಮಾರಂಭದ ಕೊಪ್ಪಳ ಜಿಲ್ಲಾ ಸಂಚಾಲಕ ಅಜಮೀರ್ ನಂದಾಪುರ, ರಿಜಿಸ್ಟಾರ್ ಕರಿಯಪ್ಪ ಎಸ್. ಅಕಾಡೆಮಿ ಸದಸ್ಯೆ ಡಾ. ಪಿ. ಚಂದ್ರಿಕಾ ಇದ್ದರು.

Share this article