ಕನ್ನಡ ಸೇವೆಯಲ್ಲಿ ನಿರತ ಮಂಡ್ಯದ ಕರ್ನಾಟಕ ಸಂಘ

KannadaprabhaNewsNetwork |  
Published : Nov 14, 2025, 02:00 AM IST
Karnataka Sangha

ಸಾರಾಂಶ

ಸ್ವಾತಂತ್ರ್ಯಪೂರ್ವದಲ್ಲಿ ಆರಂಭಗೊಂಡ ಇಲ್ಲಿನ ಕರ್ನಾಟಕ ಸಂಘ, ಅಂದಿನಿಂದ ಇಂದಿನವರೆಗೂ ಕನ್ನಡ ಸೇವೆಯನ್ನು ನಿರಂತರವಾಗಿ ಮುಂದುವರಿಸಿಕೊಂಡು ಬರುತ್ತಿದೆ. ಸಾಹಿತ್ಯ, ಜನಪದ, ಸಂಘಟನೆ, ಭಾಷೆ ಬೆಳವಣಿಗೆ ಸೇರಿದಂತೆ ಕನ್ನಡ ಭಾಷೆಯ ಎಲ್ಲಾ ಸ್ತರಗಳಲ್ಲೂ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಾ  ಗಮನ ಸೆಳೆದಿದೆ.

ಮಂಡ್ಯ ಮಂಜುನಾಥ

 ಮಂಡ್ಯ : ಸ್ವಾತಂತ್ರ್ಯಪೂರ್ವದಲ್ಲಿ ಆರಂಭಗೊಂಡ ಇಲ್ಲಿನ ಕರ್ನಾಟಕ ಸಂಘ, ಅಂದಿನಿಂದ ಇಂದಿನವರೆಗೂ ಕನ್ನಡ ಸೇವೆಯನ್ನು ನಿರಂತರವಾಗಿ ಮುಂದುವರಿಸಿಕೊಂಡು ಬರುತ್ತಿದೆ. ಸಾಹಿತ್ಯ, ಜನಪದ, ಸಂಘಟನೆ, ಭಾಷೆ ಬೆಳವಣಿಗೆ ಸೇರಿದಂತೆ ಕನ್ನಡ ಭಾಷೆಯ ಎಲ್ಲಾ ಸ್ತರಗಳಲ್ಲೂ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಾ ರಾಜ್ಯಮಟ್ಟದಲ್ಲಿ ಗಮನ ಸೆಳೆದಿದೆ. 

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪರವಾಗಿ ಸಾವಿರ ಪುಟಗಳ ಜಾನಪದ ನಿಘಂಟು, ಪದ ಸಂಸ್ಕೃತಿ ಕೋಶವನ್ನು ಹತ್ತು ಸಂಪುಟಗಳಲ್ಲಿ ಹೊರ ತರುವ ಮಹತ್ವದ ಯೋಜನೆಯನ್ನು ಈ ಸಂಘ ವಹಿಸಿಕೊಂಡಿದೆ. ಇದರ ಸಾರಥ್ಯವನ್ನು ಶ್ರೇಷ್ಠ ವಿದ್ವಾಂಸರಾದ ಡಾ.ರಾಗೌ ವಹಿಸಿಕೊಂಡಿದ್ದಾರೆ. ಅವರ ಜೊತೆಗೆ ಹಲವು ಮಂದಿ ತಜ್ಞರು ಶ್ರಮಿಸುತ್ತಿದ್ದಾರೆ. ಈ ಯೋಜನೆಯಡಿ ಇದುವರೆಗೆ ಐದು ಸಂಪುಟಗಳನ್ನು ಬಿಡುಗಡೆಗೊಳಿಸಲಾಗಿದೆ.

ಗ್ರಂಥಮಾಲಿಕೆಯನ್ನು ಹೊರ ತರುತ್ತಿದೆ

ಇನ್ನು, ನಾಡೋಜ ಜಿ.ನಾರಾಯಣ ಅವರಿಗೆ 85 ವರ್ಷಗಳು ತುಂಬಿದ ಸಂದರ್ಭದಲ್ಲಿ ಅವರ ಗೌರವಾರ್ಥ ಕರ್ನಾಟಕ ಸಂಘವು ಮಂಡ್ಯ ಜಿಲ್ಲೆಯನ್ನು ಬೌದ್ಧಿಕ ಜಗತ್ತಿಗೆ ಸಮಗ್ರವಾಗಿ ಪರಿಚಯಿಸಿಕೊಡುವ ಉದ್ದೇಶದಿಂದ ಗ್ರಂಥಮಾಲಿಕೆಯನ್ನು ಹೊರ ತರುತ್ತಿದೆ. ವಿಶ್ವಕೋಶದ ಮಾದರಿಯಲ್ಲಿ ತಲಾ ಒಂದು ಸಾವಿರ ಪುಟಗಳ ನಾಲ್ಕು ಬೃಹತ್ ಸಂಪುಟಗಳನ್ನು ಪ್ರಕಟಿಸುವ ಮೂಲಕ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ. ಜಿಲ್ಲೆಯ ಸಾಹಿತ್ಯ, ಕಲೆ, ಶಿಕ್ಷಣ, ಅಭಿವೃದ್ಧಿ, ಸಮುದಾಯ, ಸಂಸ್ಕೃತಿ, ಇತಿಹಾಸ ಮತ್ತು ರಾಜಕೀಯ ವಿಷಯಗಳನ್ನು ಈ ಸಂಪುಟಗಳು ಒಳಗೊಂಡಿರುತ್ತವೆ. ಮೊದಲನೇ ಸಂಪುಟದ ಸಿದ್ಧತೆ ಕೊನೆಯ ಹಂತದಲ್ಲಿದ್ದು, ಶೀಘ್ರದಲ್ಲೇ ಮುದ್ರಣಾಲಯವನ್ನು ಪ್ರವೇಶಸಲಿದೆ. ಉಳಿದ ಸಂಪುಟಗಳ ಸಿದ್ಧತಾ ಕಾರ್ಯವೂ ಪ್ರಗತಿಯಲ್ಲಿದೆ.

ಕರ್ನಾಟಕ ಸಂಘದಿಂದ ಸಿರಿಗನ್ನಡ ಪುಸ್ತಕ ಮಳಿಗೆಯನ್ನು ತೆರೆಯಲಾಗಿದ್ದು, ಕರ್ನಾಟಕ ಸಂಘದ ಪ್ರಕಾಶನವೂ ಸೇರಿದಂತೆ ವಿವಿಧ ಪ್ರಕಾಶನಗಳು ಹೊರತಂದಿರುವ ಪುಸ್ತಕಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತಿದೆ.ಕರ್ನಾಟಕ ಸಂಘದಿಂದ 35ಕ್ಕೂ ಹೆಚ್ಚು ದತ್ತಿ ಪ್ರಶಸ್ತಿಗಳನ್ನು ಸ್ಥಾಪಿಸಿ, 75 ಲಕ್ಷ ರು.ದತ್ತಿ ನಿಧಿ ಸಂಗ್ರಹಿಸಲಾಗಿದೆ. ಸಮಾಜಸೇವೆ, ಶಿಕ್ಷಣ, ರಂಗಭೂಮಿ, ಕೃಷಿ, ಜಾನಪದ, ನಾಟಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಕನಿಷ್ಠ 5 ಸಾವಿರ ರು.ನಿಂದ 1 ಲಕ್ಷ ರು.ವರೆಗೆ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಇದರಲ್ಲಿ ಹಾ.ಮಾ.ನಾಯಕ್ ಹೆಸರಿನ ಪ್ರಶಸ್ತಿ 50 ಸಾವಿರ ರು., ನಾಲ್ವಡಿ ಪ್ರಶಸ್ತಿ 1 ಲಕ್ಷ ರು. ನಗದು ಬಹುಮಾನವನ್ನು ಒಳಗೊಂಡಿದೆ. ಇಡೀ ರಾಜ್ಯದಲ್ಲಿ ಇಷ್ಟೊಂದು ದತ್ತಿ ಪ್ರಶಸ್ತಿಗಳನ್ನು ಸ್ಥಾಪಿಸಿರುವ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಯೂ ಕರ್ನಾಟಕ ಸಂಘಕ್ಕಿದೆ.ಇನ್ನು, ಅಳಿವಿನಂಚಿಗೆ ಸರಿಯುತ್ತಿರುವ ಮೂಡಲಪಾಯ ಯಕ್ಷಗಾನ ಕಲೆಯನ್ನು ಪುನಶ್ಚೇತನಗೊಳಿಸುವ ಕೈಂಕರ್ಯದಲ್ಲಿಯೂ ಕರ್ನಾಟಕ ಸಂಘ ತನ್ನನ್ನು ತೊಡಗಿಸಿಕೊಂಡಿದೆ. ಈ ನಿಟ್ಟಿನಲ್ಲಿ, ದೇವಿ ಮಹಾತ್ಮೆ, ಕರ್ಣಾವಸಾನ, ತ್ರಿಪುರ ದಹನ, ವಾಲಿ ಸುಗ್ರೀವರ ಕಾಳಗ, ಕರಿಭಂಟನ ಕಾಳಗ ಪ್ರಸಂಗಗಳನ್ನು ಶಾಲಾ ವಿದ್ಯಾರ್ಥಿಗಳಿಂದಲೇ ಪ್ರದರ್ಶಿಸಲಾಗುತ್ತಿದೆ. ದೆಹಲಿ, ಬೆಂಗಳೂರು, ತುಮಕೂರು ಸೇರಿದಂತೆ ರಾಜ್ಯದ ವಿವಿಧೆಡೆ ಯಕ್ಷಗಾನಗಳನ್ನು ಯಶಸ್ವಿಯಾಗಿ ಪ್ರದರ್ಶಿಸಲಾಗಿದೆ. ಕರ್ನಾಟಕ ಸಂಘಕ್ಕೆ ಆಧಾರಸ್ತಂಭವಾಗಿ ನಿಂತಿರುವ ಪ್ರೊ.ಬಿ.ಜಯಪ್ರಕಾಶಗೌಡರು ಸಾಂಸ್ಕೃತಿಕ ರಾಯಭಾರಿಯಾಗಿ ಎಲ್ಲಾ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುತ್ತಾ ಮುನ್ನಡೆದಿದ್ದಾರೆ.

ಜ್ಞಾನ ವೃದ್ಧಿಗಾಗಿ ವಿಶೇಷ ಉಪನ್ಯಾಸ, ವಿಚಾರ ಸಂಕಿರಣ

ಹಂಪಿ ಕನ್ನಡ ವಿವಿ ಮತ್ತು ಜಾನಪದ ವಿವಿಗಳ ಸಂಯೋಜನೆಯಲ್ಲಿ ಎಂ.ಎಲ್.ಶ್ರೀಕಂಠೇಶಗೌಡ ಸಂಶೋಧನಾ ಕೇಂದ್ರವನ್ನು 2007-08ನೇ ಸಾಲಿನಿಂದ ತೆರೆಯಲಾಗಿದೆ. ಕನ್ನಡ ಮತ್ತು ಚರಿತ್ರೆ ವಿಷಯಗಳಲ್ಲಿ ಎಂಫಿಲ್, ಪಿಎಚ್‌ಡಿ ಪದವಿಯನ್ನು ನೀಡಲಾಗುತ್ತಿದೆ. ಇದುವರೆಗೂ ಕನ್ನಡ ವಿಷಯದಲ್ಲಿ 91 ಅಭ್ಯರ್ಥಿಗಳು, ಚರಿತ್ರೆ ವಿಷಯದಲ್ಲಿ 37 ಅಭ್ಯರ್ಥಿಗಳು ಪದವಿ ಪಡೆದು ನಾಡಿನಾದ್ಯಂತ ವೃತ್ತಿಯಲ್ಲಿ ತೊಡಗಿದ್ದಾರೆ. ಎಂಫಿಲ್ ಪದವಿಗಾಗಿ ನೋಂದಾಯಿಸಲ್ಪಟ್ಟ ವಿದ್ಯಾರ್ಥಿಗಳಿಗೆ ಕರ್ನಾಟಕದ ವಿವಿಧ ಭಾಗಗಳಿಂದ ನುರಿತ ವಿದ್ವಾಂಸರನ್ನು ಹಾಗೂ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಬೋಧನಾ ಕಾರ್ಯ ಏರ್ಪಡಿಸಲಾಗುತ್ತಿದೆ. ವಿದ್ಯಾರ್ಥಿಗಳ ಸಂಶೋಧನಾ ಜ್ಞಾನ ವೃದ್ಧಿಗಾಗಿ ವಿಶೇಷ ಉಪನ್ಯಾಸ, ವಿಚಾರ ಸಂಕಿರಣ, ಸಮ್ಮೇಳನಗಳನ್ನು ಸಂಶೋಧನಾ ಕೇಂದ್ರ ಆಯೋಜಿಸಿಕೊಂಡು ಬರುತ್ತಿರುವುದು ಮತ್ತೊಂದು ವಿಶೇಷ.

ರಾಷ್ಟ್ರಕವಿ ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಕೃತಿಗೆ 1955ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದಾಗ ಮೊಟ್ಟಮೊದಲ ಬಾರಿಗೆ ಅವರನ್ನು ಮಂಡ್ಯಕ್ಕೆ ಆಹ್ವಾನಿಸಿ, ಗೌರವಿಸಿ, ಸನ್ಮಾನಿಸಿದ ಹೆಗ್ಗಳಿಕೆಯೂ ಈ ಸಂಸ್ಥೆಗಿದೆ. ಅಂದು ಕುವೆಂಪು ಅವರು ತಮಗೆ ನೀಡಲಾದ ಬೆಳ್ಳಿ ಕರಂಡವನ್ನು ಸಂಘಕ್ಕೆ ವಾಪಸ್‌ ನೀಡಿ ಅದನ್ನು ಪರ್ಯಾಯ ಪಾರಿತೋಷಕವಾಗಿ ಬಳಸಿ, ಶ್ರೀರಾಮಾಯಣ ದರ್ಶನಂ ಗಮಕವಾಚನ ಸ್ಪರ್ಧೆ ನಡೆಸುವಂತೆ ಮನವಿ ಮಾಡಿದ್ದರು. ಇಂದಿಗೂ ಆ ಗಮಕವಾಚನ ನಿಲ್ಲದೆ ನಿರಂತರವಾಗಿ ಮುಂದುವರಿಯುತ್ತಿರುವುದು ಹೆಗ್ಗಳಿಕೆಯ ಸಂಗತಿಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಅಥಣಿಯಲ್ಲಿ ರಸ್ತೆ ಅತಿಕ್ರಮಣ ತೆರವು
ಔದ್ಯೋಗಿಕ ಕ್ಷೇತ್ರದಲ್ಲಿ ಕೌಶಲ್ಯಯುಕ್ತ ವ್ಯಕ್ತಿತ್ವ ಅಗತ್ಯ: ಶ್ರೀನಿವಾಸನ್ ವರದರಾಜನ್‌